Internal Reservation | ದಶಕಗಳು ಕಳೆದರೂ ದಕ್ಕಲಿಲ್ಲ ಒಳ ಮೀಸಲಾತಿ; ಕನಸಾಗಿಯೇ ಉಳಿದ ಒಳ ಪಂಗಡಗಳ ಮೀಸಲು

ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸಾಕಷ್ಟು ಹೋರಾಟ ನಡೆಸಿದರೂ ಮೀಸಲಾತಿ ಹಂಚಿಕೆ ಮಾತ್ರ ಗಗನ ಕುಸುಮದಂತಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತಾದರೂ ಒಂದಿಲ್ಲೊಂದು ಅಡೆತಡೆಗಳಲ್ಲಿ ವರದಿ ಅನುಷ್ಠಾನ ಕುಂಟುತ್ತಾ ಸಾಗಿದೆ.;

Update: 2025-03-31 03:30 GMT

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಹಂಚಿಕೆ ಪ್ರಕ್ರಿಯೆ ದಶಕಗಳಿಂದ ಕಗ್ಗಂಟಾಗಿಯೇ ಮುಂದುವರಿದಿದೆ.

ಮೂರು ದಶಕಗಳ ಹೋರಾಟ ಇಂದಿಗೂ ತಾರ್ಕಿಕ ಅಂತ್ಯ ಕಂಡಿಲ್ಲ. ಬಹುಜನರ ಒಳ ಮೀಸಲಾತಿ ಹೋರಾಟ ತೀವ್ರಗೊಂಡ ಪರಿಣಾಮ 2005 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ನ್ಯಾ. ಎ.ಜಿ.ಸದಾಶಿವ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಈ ಆಯೋಗ 2012ರಲ್ಲಿ ತನ್ನ ಅಂತಿಮ ವರದಿಯನ್ನು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಸಲ್ಲಿಸಿ, ಉಪ ಪಂಗಡಗಳಿಗೆ ಒಳ ಮೀಸಲಾತಿ ಹಂಚಿಕೆಗೆ ಶಿಫಾರಸು ಮಾಡಿತು. ಆದರೆ, ಅಂದಿನಿಂದ ಇಲ್ಲಿಯವರೆಗೆ ಆಡಳಿತ ನಡೆಸಿದ ಸರ್ಕಾರಗಳು ಒಳ ಮೀಸಲಾತಿ ವರದಿಯನ್ನು ಚುನಾವಣೆ ಅಸ್ತ್ರವನ್ನಾಗಿ ಬಳಸಿದವೇ ಹೊರತು ಅನುಷ್ಠಾನಕ್ಕೆ ತರುವ ಮನಸ್ಸು ಮಾಡಲಿಲ್ಲ.

ಒಳ ಮೀಸಲಾತಿಯ ಅನಿವಾರ್ಯತೆ ಹೆಚ್ಚಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯವು ಸಾಕಷ್ಟು ಹೋರಾಟ ನಡೆಸಿದರೂ ಮೀಸಲಾತಿ ಹಂಚಿಕೆ ಮಾತ್ರ ಇಂದಿಗೂ ಗಗನ ಕುಸುಮದಂತಾಗಿದೆ. ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿಗೆ ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತಾದರೂ ಒಂದಿಲ್ಲೊಂದು ಅಡೆತಡೆಗಳಲ್ಲಿ ವರದಿ ಅನುಷ್ಠಾನವನ್ನು ಮುಂದೂಡಿಕೊಂಡೇ ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಉಪ ಪಂಗಡಗಳು, ಜನಸಂಖ್ಯೆ, ಸದಾಶಿವ ಆಯೋಗ, ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿ, ನ್ಯಾ.ನಾಗಮೋಹನದಾಸ್ ಆಯೋಗದ ಶಿಫಾರಸುಗಳೇನು, ಒಳ ಮೀಸಲಾತಿ ವರ್ಗೀಕರಣ ಹೇಗೆ ಮಾಡಿದ್ದವು ಎಂಬ ಮಾಹಿತಿ ಇಲ್ಲಿದೆ.

“ಎಡಗೈ” ಪ್ರಬಲ ಸಮುದಾಯ

2011ರ ಜನಗಣತಿ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 96.66 ಲಕ್ಷ ಇದೆ. ಆದರೆ, ಸದಾಶಿವ ಆಯೋಗದ ವರದಿಯ ನಂತರದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 1,04,74,992 ಇತ್ತು. ಈ ಜನಸಂಖ್ಯೆಯಲ್ಲಿ 7.29 ಲಕ್ಷ ಜನರು ಯಾವುದೇ ಉಪಜಾತಿ ನಮೂದಿಸದಿರುವುದು ಇದೀಗ ಮೀಸಲಾತಿ ವರ್ಗೀಕರಣಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.

ಒಂದೂಕಾಲು ಕೋಟಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಎಡಗೈ ಸಮುದಾಯದ ಮಾದಿಗ, ಆದಿದ್ರಾವಿಡ, ಬಂಬಿ,ಇತರ ಜಾತಿಗಳು 33.25 ಲಕ್ಷ ಇದ್ದರೆ, ಹೊಲೆಯ, ಆದಿಕರ್ನಾಟಕ, ಛಲವಾದಿ ಹಾಗೂ ಸಂಬಂಧಿತ ಇತರ ಜಾತಿಗಳ ಜನಸಂಖ್ಯೆ 30.93 ಲಕ್ಷ ಇದೆ. ಆದಿ ಆಂಧ್ರ ಅಡಿಯಾ, ಭಂಧಿ, ಬೇಡ ಜಂಗಮ, ಹೊಲಯದಾಸರಿ ಮತ್ತು ಸಂಬಂಧಿತ ಇತರ 42 ಜಾತಿಗಳ ಜನಸಂಖ್ಯೆ 4.5 ಲಕ್ಷ ಇದೆ. ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಸಂಬಂಧಿತ ಇತರ ಜಾತಿಗಳು 22.84 ಲಕ್ಷ ಹೊಂದಿವೆ. ಈ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಹಲವರಲ್ಲಿದೆ. ಆದರೆ, ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯ ಪಡೆದ ಸ್ಪೃಶ್ಯ ಜಾತಿಗಳು ಕಡಿಮೆ ಜನಸಂಖ್ಯೆ ಹೊಂದಿರುವ ಕಾರಣ ಒಳ ಮೀಸಲಾತಿಯನ್ನು ವಿರೋಧಿಸುತ್ತಿದ್ದು, ವಿಳಂಬಕ್ಕೆ ಕಾರಣವಾಗುತ್ತಿವೆ.

2021ರ ಜಾತಿವಾರು ಜನಗಣತಿಯಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಶೇ 19.5 ರಷ್ಟು ಪರಿಶಿಷ್ಟ ಜಾತಿಗಳು ಪಾಲು ಹೊಂದಿದ್ದು, ನಂತರದ ಸ್ಥಾನದಲ್ಲಿ ಮುಸ್ಲಿಮರು ಶೇ 16 ರಷ್ಟಿದ್ದಾರೆ. ಲಿಂಗಾಯತರು ಮತ್ತು ಒಕ್ಕಲಿಗರು ಕ್ರಮವಾಗಿ ಶೇ 14 ಮತ್ತು 11 ರಷ್ಟು ಜನಸಂಖ್ಯೆ ಹೊಂದಿದ್ದಾರೆ. ಇತರೆ ಹಿಂದುಳಿದ ವರ್ಗಗಳಲ್ಲಿ, ಕುರುಬ ಸಮುದಾಯವು ಕೇವಲ ಶೇ 7 ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ರಾಜ್ಯದಲ್ಲಿ OBC ಗಳ ಒಟ್ಟಾರೆ ಪ್ರಾತಿನಿಧ್ಯ ಶೇ 20 ರಷ್ಟಿದೆ. ಶೇಕಡಾವಾರು ಪರಿಶಿಷ್ಟರಲ್ಲಿ ಎಡಗೈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಬಲಗೈ ಗುಂಪು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೂವತ್ತು ವರ್ಷಗಳಿಂದ ಒಳ ಮೀಸಲಾತಿಗೆ ಅಗ್ರಹಿಸಿ ಹೋರಾಟ ನಡೆಯುತ್ತಲೇ ಇದೆ. ಸರ್ಕಾರಗಳು ಬದಲಾದಂತೆ ಹೊಸ ಆಯೋಗ, ಸಮೀಕ್ಷಾ ಕಾರ್ಯಗಳು ನಡೆಯುತ್ತಿವೆ. ಸಮೀಕ್ಷೆಗಳು ವರದಿ ನೀಡಿದ ಬಳಿಕವು ಒಂದಿಲ್ಲೊಂದು ನೆಪ ಹೇಳಿ ವರದಿಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ಚುನಾವಣೆ ಬಂದಾಗ ಮಾತ್ರ ಮತ್ತೆ ರಾಜಕೀಯ ದಾಳವಾಗಿ ಬಳಕೆಗುತ್ತಿದೆ ಎಂದು ಒಳ ಮೀಸಲಾತಿಗಾಗಿ ಹೋರಾಟ ಸಮಿತಿಯ ಚಂದ್ರು ತರಹುಣಸೆ ಅವರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಸದಾಶಿವ ಆಯೋಗದ ಶಿಫಾರಸು ಏನು?

ಪರಿಶಿಷ್ಟ ಜಾತಿಯಲ್ಲೇ ಅಸ್ಪೃಶ್ಯ ವರ್ಗವಾಗಿರುವ ಎಡಗೈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ 6 ರಷ್ಟು ಒಳ ಮೀಸಲಾತಿ ನೀಡಬೇಕು. ಬಲಗೈ ಸಮುದಾಯಕ್ಕೆ ಶೇ 5, ಸ್ಪೃಶ್ಯ ಜಾತಿಗಳಿಗೆ ಶೇ 3 ಹಾಗೂ ಈ ಮೇಲಿನ ಮೂರು ಉಪಜಾತಿಗಳಲ್ಲಿ ಇಲ್ಲದ ಸಮುದಾಯಕ್ಕೆ ಶೇ 1 ರಷ್ಟು ಒಳ ಮೀಸಲಾತೊ ಒದಗಿಸಬೇಕು ಎಂಬುದು ಸದಾಶಿವ ಆಯೋಗ ಮಾಡಿದ್ದ ಶಿಫಾರಸು.

2013 ಹಾಗೂ 2018 ರ ಚುನಾವಣೆಯಲ್ಲಿ ರಾಜಕೀಯ ಅಸ್ತ್ರವಾಗಿ ಬಳಕೆಯಾದ ಕಾರಣ ಒಳ ಮೀಸಲಾತಿ ಜಾರಿಯಾಗಲಿಲ್ಲ. ಬದಲಿಗೆ ಸರ್ಕಾರಗಳನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ನ್ಯಾ.ನಾಗಮೋಹನದಾಸ್ ಆಯೋಗದ ಶಿಫಾರಸು ಏನು?

ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳ ಮಾಡುವಂತೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಂಡ ಬಳಿಕ ಅಂದಿನ ಬಿಜೆಪಿ ಸರ್ಕಾರ ನ್ಯಾ.ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿತು. ಸಾಕಷ್ಟು ಅಧ್ಯಯನ ನಡೆಸಿದ ಆಯೋಗವು ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿತು.

2023 ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಾಗಮೋಹನದಾಸ್ ವರದಿಯನ್ನು ಯಥಾವತ್ ಜಾರಿ ಮಾಡಿ ಮೀಸಲಾತಿ ಹೆಚ್ಚಿಸಿತು. ಇದರ ಜೊತೆಗೆ ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿತು.


ಸಂಪುಟ ಉಪ ಸಮಿತಿ ನೀಡಿದ ಶಿಫಾರಸು ಏನು?

ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಅಂದಿನ ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ನೇತೃತ್ವದದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಯಿತು.

ರಾಜ್ಯದಲ್ಲಿ ಲಭ್ಯವಿರುವ ಜನಸಂಖ್ಯೆಯ ಅಂಕಿಅಂಶ ಆಧರಿಸಿ ಮಾದಿಗ, ಆದಿದ್ರಾವಿಡ, ಬಂಬಿ ಮತ್ತು ಇತರ ಸಂಬಂಧಿತ ಜಾತಿಗಳ ಎಡಗೈ ಗುಂಪಿಗೆ ಶೇ 5.5, ಹೊಲೆಯ, ಆದಿಕರ್ನಾಟಕ, ಛಲವಾದಿ ಮತ್ತು ಇತರ ಸಂಬಂಧಿಸಿದ ಜಾತಿಗಳ ಬಲಗೈಗೆ ಗುಂಪಿಗೆ ಶೇ 5.5, ಸ್ಪೃಶ್ಯರಾದ ಬಂಜಾರ, ಭೋವಿ, ಕೊರಚ, ಕೊರಮ ಗುಂಪಿಗೆ ಶೇ 4, ಅಲೆಮಾರಿ, ಅರೆ ಅಲೆಮಾರಿ ಗುಂಪಿಗೆ ಶೇ 1, ಇತರ ಸೂಕ್ಷ್ಮ ಪರಿಶಿಷ್ಟ ಜಾತಿಗಳಿಗೆ ಶೇ 1ರಂತೆ ಒಳ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತು.

ಸಂಪುಟ ಉಪಸಮಿತಿ ವರದಿ ಆಧಾರದ ಮೇಲೆ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಣಯಿಸಿತು.

ಬಲ ತಂದ ಸುಪ್ರೀಂಕೋರ್ಟ್ ಆದೇಶ

2024 ಆಗಸ್ಟ್ 1 ರಂದು ಒಳ ಮೀಸಲಾತಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿದ ಐತಿಹಾಸಿಕ ತೀರ್ಪು ಒಳಮೀಸಲಾತಿ ಹೋರಾಟಕ್ಕೆ ಬಲ ತಂದುಕೊಟ್ಟಿತು.

ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಉಪ ವರ್ಗೀಕರಣ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂಬ ಮಹತ್ವದ ತೀರ್ಪು ಪ್ರಕಟಿಸಿತು. ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ ಪಡೆದಿರುವ ಅಥವಾ ಏನನ್ನೂ ಪಡೆಯದ ಉಪಜಾತಿಗಳಿಗೆ ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕು ಎಂದು ಅಭಿಪ್ರಾಯಪಟ್ಟಿತು. ಆದರೆ, ಕರ್ನಾಟಕದಲ್ಲಿ ಚುನಾವಣೆ ನಂತರ ಆಡಳಿತ ಪಕ್ಷ ಬದಲಾಗಿ ಮತ್ತೆ ಒಳ ಮೀಸಲಾತಿ ವರದಿ ವಿಳಂಬವಾಯಿತು.

ಮತ್ತೆ ನಾಗಮೋಹನದಾಸ್ ಆಯೋಗ ರಚನೆ

ಪರಿಶಿಷ್ಟ ಜಾತಿಯಲ್ಲಿನ ಉಪ ಪಂಗಡಗಳ ಎಂಫರಿಕಲ್ ಡಾಟಾ ಪಡೆದು ಒಳ ಮೀಸಲಾತಿ ಜಾರಿಗೆ ಎಡಗೈ ಹಾಗೂ ಬಲಗೈ ಗುಂಪುಗಳು ಒಪ್ಪಿಗೆ ಸೂಚಿಸಿದ ಬಳಿಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಿದೆ.

ಎರಡು ತಿಂಗಳ ಕಾಲ ಅಧ್ಯಯನ ನಡೆಸಿದ ಆಯೋಗವು ಇತ್ತೀಚೆಗೆ ತನ್ನ ಮಧ್ಯಂತರ ವರದಿ ಸಲ್ಲಿಸಿದ್ದು, ನಾಲ್ಕು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

ಉಪಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಹೊಸ ಸಮೀಕ್ಷೆ ನಡೆಸಿ ದತ್ತಾಂಶ ನಡೆಸಬೇಕೆಂಬ ಶಿಫಾರಸನ್ನು ಸಂಪುಟ ಸಭೆ ಅಂಗೀಕರಿಸಿದ್ದು, ಮತ್ತೆ ನಾಗಮೋಹನದಾಸ್ ನೇತೃತ್ವದಲ್ಲಿ ಹೊಸ ಸಮೀಕ್ಷೆ ಸೂಚಿಸಿದೆ. ದತ್ತಾಂಶ ಸಂಗ್ರಹಿಸಿ ವರದಿ ನೀಡಲು ಎರಡು ತಿಂಗಳ ಕಾಲಮಿತಿ ನಿಗದಿ ಮಾಡಿದೆ.

ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಉಪಜಾತಿಗಳ ವರ್ಗೀಕರಣ ಮಾಡಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡಬೇಕು ಎಂದು ಆಯೋಗ ಶಿಫಾರಸುಗಳಲ್ಲಿ ಒಂದಾಗಿದೆ. ಆದರೆ, ಒಳ ಮೀಸಲಾತಿ ಅನುಷ್ಠಾನವಾಗುವವರೆಗೂ ದಲಿತ ಸಮುದಾಯದ ಉಪ ಜಾತಿಗಳಲ್ಲೇ ನಂಬಿಕೆ ಇಲ್ಲದಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

Tags:    

Similar News