ಧರ್ಮಸ್ಥಳ ಪ್ರಕರಣ: ದೂರುದಾರನಿಗೆ ಎಸ್ಐಟಿ ಇನ್​ಸ್ಪೆಕ್ಟರ್​ನಿಂದ ಬೆದರಿಕೆ ಆರೋಪ

ತನಿಖಾಧಿಕಾರಿಯೇ ದೂರುದಾರನಿಗೆ ಬೆದರಿಕೆ ಹಾಕಿ, ದೂರು ಹಿಂಪಡೆಯುವಂತೆ ಒತ್ತಡ ಹೇರುವುದು ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ. ಇದು ನ್ಯಾಯಯುತ ಮತ್ತು ಪಾರದರ್ಶಕ ತನಿಖೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಪಿಸಲಾಗಿದೆ.;

Update: 2025-08-02 07:39 GMT

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದಲ್ಲಿ ಅಸ್ಥಿಪಂಜರಗಳನ್ನು ಹೂತು ಹಾಕಿದ ಪ್ರಕರಣದ ತನಿಖೆ ಮಹತ್ವದ ತಿರುವು ಪಡೆದುಕೊಂಡಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (ಎಸ್ಐಟಿ) ಇನ್​​ಸ್ಪೆಕ್ಟರ್ ಒಬ್ಬರು ಪ್ರಕರಣದ ದೂರುದಾರನಿಗೆ ಬೆದರಿಕೆ ಹಾಕಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಕುರಿತು ದೂರು ನೀಡಿದ್ದ ಅನಾಮಿಕ ವ್ಯಕ್ತಿಗೆ, ಎಸ್‌ಐಟಿ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರ ಪರ ವಕೀಲೆ ಅನನ್ಯಾ ಗೌಡ ಆರೋಪಿಸಿದ್ದಾರೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ವಕೀಲೆ ಅನನ್ಯಾ ಗೌಡ, ಆರೋಪಿತ ಇನ್ಸ್‌ಪೆಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಐಟಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, "ತನಿಖೆ ನಡೆಸಬೇಕಾದ ಅಧಿಕಾರಿಯೇ ದೂರುದಾರನಿಗೆ ಬೆದರಿಕೆ ಹಾಕಿ, ದೂರು ಹಿಂಪಡೆಯುವಂತೆ ಒತ್ತಡ ಹೇರುವುದು ತನಿಖೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನವಾಗಿದೆ. ಇದು ನ್ಯಾಯಯುತ ಮತ್ತು ಪಾರದರ್ಶಕ ತನಿಖೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ," ಎಂದು ಉಲ್ಲೇಖಿಸಲಾಗಿದೆ.

ಇದೇ ವೇಳೆ, ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರಿದಿದ್ದು, ದೂರುದಾರನ ಮಾಹಿತಿ ಆಧರಿಸಿ ನೇತ್ರಾವತಿ ನದಿ ತೀರದಲ್ಲಿ 13 ಸ್ಥಳಗಳನ್ನು ಗುರುತಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಕೆಲವು ಸ್ಥಳಗಳಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಈ ಪ್ರಕರಣದ ತನಿಖೆ ಸೂಕ್ಷ್ಮ ಹಂತದಲ್ಲಿರುವಾಗಲೇ, ತನಿಖಾಧಿಕಾರಿಯ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ತನಿಖೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Tags:    

Similar News