ಸುಹಾಸ್ ಶೆಟ್ಟಿ ರೌಡಿಶೀಟರ್ ಎಂಬ ಮಾಹಿತಿ; ಸಮಗ್ರ ತನಿಖೆಗೆ ಸೂಚನೆ-ಸಿಎಂ
ಕೊಲೆಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.;
ಮಂಗಳೂರಿನಲ್ಲಿ ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಆತ ರೌಡಿಶೀಟರ್ ಎಂಬ ಮಾಹಿತಿ ಇದೆ. ಕೊಲೆ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಪದೇ ಪದೇ ಕೋಮು ಗಲಭೆಗಳಾಗುತ್ತಿವೆ. ಕೊಲೆಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಮನುಷ್ಯನ ಪ್ರಾಣ ಬಹಳ ಮುಖ್ಯ. ಕೂಡಲೇ ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಪೆಹಲ್ಗಾಮ್‌ಗೆ ಪ್ರಧಾನಿ ಏಕೆ ಭೇಟಿ ನೀಡಲಿಲ್ಲ?
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಸ್ಥಳಕ್ಕೆ ಬಿಜೆಪಿಯವರು ಭೇಟಿ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ಯಾವಾಗಲೂ ರಾಜಕೀಯವಾಗಿ ಇಂಥ ಪ್ರಕ್ರಣಗಳನ್ನೇ ಹುಡುಕುತ್ತಾರೆ. ಒಂದು ವಾರದಿಂದ ಪೆಹಲ್ಗಾಮ್ ಪ್ರಕರಣದ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಉಗ್ರರ ದಾಳಿಗೆ 26 ಜನ ಮೃತಪಟ್ಟರೂ ಪ್ರಧಾನಿ ಅಲ್ಲಿಗೆ ಭೇಟಿ ನೀಡಿದ್ದಾರೆಯೇ? ಬಿಜೆಪಿಯವರಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ಇದು ಮುಖ್ಯ ಅನ್ನಿಸುತ್ತಿಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.
ನನಗೂ ಬೆದರಿಕೆ ಕರೆ ಬಂದಿದೆ
ವಿಧಾನಸಭಾಧ್ಯಕ್ಷ ಯು.ಟಿ .ಖಾದರ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ನನಗೂ ಬೆದರಿಕೆ ಕರೆಗಳು ಬರುತ್ತವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.