ಬೆಳಗಾವಿ ಅಧಿವೇಶನ | ಹೊಸ ಮಸೂದೆಗೆ ಅಂಗೀಕಾರ: ಕೊಳವೆ ಬಾವಿ ಮುಚ್ಚದಿದ್ದರೆ ಜೈಲು
ವಿಫಲ ಕೊಳವೆಬಾವಿಗಳನ್ನು ಮುಚ್ಚಿ, ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಅನುಷ್ಠಾನ ಏಜೆನ್ಸಿ ಮತ್ತು ಕೊಳವೆಬಾವಿ ಕೊರೆಯುವವರಿಗೆ ನಿಗದಿಪಡಿಸಲಾಗಿದೆ. ವಿಫಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.;
ಕೊಳವೆಬಾವಿಗಳಲ್ಲಿ ಮಕ್ಕಳು ಬೀಳುವುದನ್ನು ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 25,೦೦೦ ರೂ ದಂಡ ವಿಧಿಸಲು ಅವಕಾಶ ಕಲ್ಪಿಸುವ 'ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಯಮ ಹಾಗೂ ನಿಯಂತ್ರಣ) (ತಿದ್ದುಪಡಿ) ಮಸೂದೆ-2024ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.
ಸೋಮವಾರ ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೇಯಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಮಾತನಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ವಿಫಲ ಕೊಳವೆ ಬಾವಿಗಳನ್ನು ಮುಚ್ಚದೇ ಇರುವ ಮೂಲಕ ಹಲವಾರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಯಲು ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದ್ದು ಇಂದು ವಿಧಾನಸಭೇಯಲ್ಲಿ ಅಂಗೀಕಾರವಾಗಿದೆ ಎಂದರು.
15 ದಿನಗಳ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯ
'ಈ ಮಸೂದೆಯು, ಕೊಳವೆಬಾವಿಗಳನ್ನು ಕೊರೆಯುವವರು ಸಕ್ಷಮ ಪ್ರಾಧಿಕಾರಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡಿ, ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಿದೆ. ವಿಫಲ ಕೊಳವೆಬಾವಿಗಳನ್ನು ಮುಚ್ಚಿ, ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಅನುಷ್ಠಾನ ಏಜೆನ್ಸಿ ಮತ್ತು ಕೊಳವೆಬಾವಿ ಕೊರೆಯುವವರಿಗೆ ನಿಗದಿಪಡಿಸಲಾಗಿದೆ. ವಿಫಲವಾದಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಮಸೂದೆಯ ಮೇಲಿನ ಚರ್ಚೆಯ ವೇಳೆ, ಈ ಮಸೂದೆಯು ರೈತರಿಗೆ ಕಿರುಕುಳ ನೀಡುವುದಕ್ಕೆ ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಒತ್ತಾಯಿಸಿದರು. ಪಂಚಾಯಿತಿ ಅಧಿಕಾರಿಗಳನ್ನೂ ಹೊಣೆ ಮಾಡಬೇಕು ಎಂದು ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಆಗ್ರಹಿಸಿದರು.
ವಿಫಲ ಕೊಳವೆ ಬಾವಿಗಳನ್ನು ಮುಚ್ಚುವುದು ಕಡ್ಡಾಯ
ಕೊಳವೆ ಬಾವಿಗಳನ್ನು ಕೊರೆದ ನಂತರ ಡ್ರಿಲಿಂಗ್ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಸ್ಟೀಲ್ ಕ್ಯಾಪ್ ಹಾಕಿ ಮುಚ್ಚವುದು ಕಡ್ಡಾಯವಾಗಿದೆ. ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು ತುಂಬಿ ಮುಚ್ಚಬೇಕು ಹಾಗೂ 2×2 ಅಡಿಯ ದಿಬ್ಬ ಮಾಡಿ ದಿಬ್ಬಕ್ಕೆ ಫೆನ್ಸಿಂಗ್ ಹಾಕಬೇಕು. ಡ್ರಿಲಿಂಗ್ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕೊಳವೆ ಬಾವಿ ಕೊರೆದ 24 ಗಂಟೆಯೊಳಗೆ ಮುಚ್ಚಿರುವ ಬಗ್ಗೆ ಫೋಟೋ ತಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ತಪಾಸಣೆ ಮಾಡಿ ಧೃಢೀಕರಿಸಬೇಕು. ಈ ಬಗ್ಗೆ ಜಾಯಿಂಟ್ ಡಿಕ್ಲರೇಷನ್ ಅನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.
ಅಲ್ಲದೇ ಜಮೀನಿನ ಮಾಲೀಕರು ಕೊಳವೆ ಬಾವಿ ರಿಪೇರಿ ಮಾಡಲು ಪಂಪ್ ಅನ್ನು ಹೊರ ತಗೆದಾಗ ಕೊಳವೆಬಾವಿಗೆ ಕ್ಯಾಪ್ ಹಾಕಿ ಮುಚ್ಚಬೇಕು. ಕೊಳವೆ ಬಾವಿಯನ್ನು ಪುನಃಶ್ಚೇತನ ಮಾಡಲು ಇಚ್ಚಿಸಿದಲ್ಲಿ ಜಮೀನು ಮಾಲೀಕರು ಕೊಳವೆ ಬಾವಿಗೆ ಮುಚ್ಚಳದಿಂದ ಮುಚ್ಚಿ ಸುರಕ್ಷತೆಯನ್ನು ಕಾಪಾಡಬೇಕು ಎಂದು ಅವರು ತಿಳಿಸಿದರು.
ಕೊಳವೆ ಬಾವಿ ಕೊರೆಯುವಾಗ ಸೈನ್ ಬೋರ್ಡ್ ಕಡ್ಡಾಯ
ಕೊಳವೆ ಬಾವಿಯನ್ನು ಕೊರೆಯುವಾಗ ಎಲ್ಲರಿಗೂ ಕಾಣುವ ರೀತಿಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ಎಚ್ಚರಿಕೆಯ ಬೋರ್ಡ್ ಅನ್ನು ಪ್ರದರ್ಶಿಸಬೇಕು. ಯಾವುದೇ ಅವಘಡಗಳು ಆಗದಂತೆ ಎಚ್ಚರವಹಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಸುತ್ತಲೂ ಫೆನ್ಸಿಂಗ್ ನಿರ್ಮಿಸಿಕೊಳ್ಳಬೇಕು.
ಸ್ಥಳೀಯ ಪ್ರಾಧಿಕಾರ/ ಅಧಿಕಾರಿಗಳ ಜವಾಬ್ದಾರಿ:
ಸ್ಥಳೀಯ ಪ್ರಾಧಿಕಾರ ಅಥವಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಯ ಅಂಶಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಕೊರೆಸಲಾಗುತ್ತಿರುವ ಕೊಳವೆ ಬಾವಿಗಳ ಬಗ್ಗೆ ಅಂತರ್ಜಲ ಅಭಿವೃದ್ದಿ ಇಲಾಖೆಗೆ ಮಾಹಿತಿಯನ್ನು ಸಲ್ಲಿಸಬೇಕು. ಇಂಪ್ಲಿಮೆಂಟಿಂಗ್ ಏಜೆನ್ಸಿಯವರು ಸಹ ಕೊಳವೆ ಬಾವಿಯನ್ನು ಮುಚ್ಚುವ ಬಗ್ಗೆ ನಿಗಾವಹಿಸುವಬೇಕು. ಅಲ್ಲದೇ ಪಿಡಿಓ ಗಳು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೊಳವೆ ಬಾವಿ ಮುಚ್ಚುವ ವಿಧಾನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿವೆ ಎಂದು ಸಚಿವರು ಸದನಕ್ಕೆ ವಿವರಿಸಿದರು.