ಪೆನ್‌ಡ್ರೈವ್ ಲೈಂಗಿಕ ಹಗರಣ | ಪ್ರಜ್ವಲ್‌ ಪರಾರಿಯಾಗಿರುವುದಕ್ಕೂ ನನಗೂ ಸಂಬಂಧವಿಲ್ಲ: ಹೆಚ್‌ಡಿ ಕುಮಾರಸ್ವಾಮಿ

ಲೈಂಗಿಕ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾಗಿರುವುದಕ್ಕೂ ನನಗೂ ಸಂಬಂಧವಿಲ್ಲ, ಸರ್ಕಾರ ಅವರನ್ನು ಕರೆದುಕೊಂಡು ಬರಲಿ ಎಂದು ಮಾಜಿ ಸಿಎಂ ಹೆಚ್‌ಡಿಕೆ ಹೇಳಿದ್ದಾರೆ,

Update: 2024-04-28 10:56 GMT

ಹಾಸನದ ಹಾಲಿ ಜೆಡಿಎಸ್‌ ಸಂಸದ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಲೈಂಗಿಕ ಹಗರಣದ ಬಗ್ಗೆ ಪ್ರಜ್ವಲ್‌ ಚಿಕ್ಕಪ್ಪ, ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದು, “ಉಪ್ಪು ತಿಂದವನು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವನು ನೆಲದ ಕಾನೂನಲ್ಲಿ ಶಿಕ್ಷೆ ಅನುಭವಿಸಲೇಬೇಕು” ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್‌ ಡಿಕೆ, “ನಾನಾಗಲಿ, ಎಚ್‌.ಡಿ ದೇವೇಗೌಡರಾಗಲೀ ಇಂತಹ ಕೆಲಸ ಮಾಡಿಲ್ಲ. ಹೆಣ್ಣುಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ, ತಪ್ಪು ಮಾಡಿದವರನ್ನು ನಾವು ಕ್ಷಮಿಸುವುದಿಲ್ಲ” ಎಂದು ಹೇಳಿದ್ದಾರೆ.

"ಹಾಸನ ಚುನಾವಣಾ ಪ್ರಚಾರ ವೇಳೆ ಈ ಪ್ರಕರಣ ಹೊರ ಬಂದಿದೆ. ಈಗಾಗಲೆ, ಮುಖ್ಯಮಂತ್ರಿಗಳು ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ. ತನಿಖೆಯ ವರದಿ ಬಂದ ಮೇಲೆ ಮಾತನಾಡುತ್ತೇನೆ" ಎಂದು ಅವರು ಹೇಳಿದ್ದಾರೆ.

ಎಸ್‌ಐಟಿ ರಚನೆಯಾಗುತಿದ್ದಂತೆ, ಆರೋಪಿ ಪ್ರಜ್ವಲ್‌ ರೇವಣ್ಣ ಅವರು ವಿದೇಶಕ್ಕೆ ತೆರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ. ಅವರು ವಿದೇಶಕ್ಕೆ ಹೋಗಿದ್ದರೆ ಕರೆದುಕೊಂಡು ಬರುವ ಜವಾಬ್ದಾರಿ ಸರ್ಕಾರದ್ದು. ಎಸ್‌ಐಟಿ ರಚಿಸಲಾಗಿದೆ, ಅವರೇ ಕರೆದುಕೊಂಡು ಬರ್ತಾರೆ” ಎಂದು ಹೇಳಿದ್ದಾರೆ.

ಏನಿದು ಪ್ರಕರಣ?

ಲೋಕಸಭಾ ಚುನಾವಣೆ ಕಾವು ಪಡೆಯುತ್ತಿರುವ ಹೊತ್ತಿನಲ್ಲೇ ಹಾಸನ ಸಂಸದ ಹಾಗೂ ಬಿಜೆಪಿ-ಜೆಡಿಎಸ್‌ ಹಾಲಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಸುಮಾರು 3 ಸಾವಿರದಷ್ಟು ಲೈಂಗಿಕ ಹಗರಣದ ವಿಡಿಯೋಗಳು ವೈರಲ್‌ ಆಗಿದ್ದವು. ಉದ್ದೇಶಪೂರ್ವಕವಾಗಿ ಪ್ರಜ್ವಲ್‌ ರೇವಣ್ಣ ಅವರ ವಿಡಿಯೋಗಳನ್ನು ಪೆನ್‌ ಡ್ರೈವ್‌ ನಲ್ಲಿ ತುಂಬಿಸಿ ಹಾಸನದಲ್ಲಿ ಹಂಚಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಮಹಿಳಾ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಹೆಂಗಸರನ್ನು ಸಂಸದ ಪ್ರಜ್ವಲ್‌ ರೇವಣ್ಣ ಅವರು ಲೈಂಗಿಕತೆಗಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ, ಸಂತ್ರಸ್ತೆ ಮಹಿಳೆಯೊಬ್ಬರು ಪ್ರಜ್ವಲ್‌ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸರ್ಕಾರವನ್ನು ಮಹಿಳಾ ಆಯೋಗವು ಒತ್ತಾಯಿಸಿದ್ದು, ಪ್ರಕರಣದ ತನಿಖೆಗಾಗಿ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು ರಚಿಸಿರುವುದಾಗಿ ಸರ್ಕಾರ ಹೇಳಿದೆ.

Tags:    

Similar News