ಪತ್ನಿ ಕೊಂದು ಸೂಟ್‌ಕೇಸ್‌ಗೆ ತುಂಬಿದ ಪ್ರಕರಣ; ಆರೋಪಿ ಪತಿಗೆ 14 ದಿನ ನ್ಯಾಯಾಂಗ ಬಂಧನ
ಪತ್ನಿಯನ್ನು ಕೊಂದು ಸೂಟ್‌ಕೇಸ್ ನಲ್ಲಿ ಇರಿಸಿದ್ದ ಹಂತಕ ಪತಿಯನ್ನು ಕೊರಮಂಗಲದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.;
ಕೋರಮಂಗಲದಲ್ಲಿ ಪತ್ನಿಯನ್ನು ಹತ್ಯೆ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಪ್ರಕರಣದ ಆರೋಪಿ ಪತಿ ರಾಕೇಶ್‌ನನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ನಿ ಗೌರಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ ಆರೋಪದ ಮೇಲೆ ರಾಕೇಶ್‌ನನ್ನು ಶಿರವಾಲಾ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಶನಿವಾರ ರಾತ್ರಿ ಆರೋಪಿಯನ್ನು ಕೊರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರುಪಡಿಸಲಾಯಿತು. ವಿಚಾರಣೆಯ ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಆರೋಪಿ ರಾಕೇಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕಡೆಕರ್, ಮೃತ ಗೌರಿ ತನ್ನ ಸಹೋದರಿಯ ಮಗಳು. ರಾಕೇಶ್ ಮತ್ತು ಗೌರಿಯ ಮದುವೆಗೆ ಕುಟುಂಬ ಒಪ್ಪದಿದ್ದರೂ ವಿರೋಧದ ನಡುವೆ ಎರಡು ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆದರೆ, ಗೌರಿ ಆಗಿಂದಾಗ್ಗೆ ರಾಕೇಶ್ ಮತ್ತು ಕುಟುಂಬಸ್ಥರ ಜೊತೆ ಜಗಳಾಡುತ್ತಿದ್ದಳು. ದಂಪತಿಯ ಮನಸ್ತಾಪ ಪೊಲೀಸ್ ಠಾಣೆವರೆಗೂ ಹೋಗಿತ್ತು ಎಂದು ಹೇಳಿದ್ದಾರೆ.
ಘಟನೆಗೂ ಮುನ್ನ ದಿನ ಗುರುವಾರ ರಾಕೇಶ್ ನನಗೆ ಕರೆ ಮಾಡಿದ್ದ. ನಾನು ಕೊಲೆ ಮಾಡಿದ್ದೇನೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ. ಆಗ ನಾನು ಅವನಿಗೆ ಬುದ್ದಿಮಾತು ಹೇಳಿದೆ. ಗೌರಿ ಹತ್ಯೆಯ ಕುರಿತು ನಾನೇ ಅವರ ತಾಯಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.
ರಾಜೇಂದ್ರ ಅವರು ಮುಂಬೈನ ಮೆಗವಾಡಿ ಪೊಲೀಸರಿಗೆ ಹತ್ಯೆ ವಿಷಯ ತಿಳಿಸಿದ ಬಳಿಕ ಶಿರವಾಲಾ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ದಂಪತಿ ನಡುವಿನ ಮನಸ್ತಾಪವೇ ಕೊಲೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.