ಗಿಣಿಗೇರಾ -ರಾಯಚೂರು ರೈಲ್ವೆ ಕಾಮಗಾರಿಗೆ 26 ವರ್ಷ! ಪೂರ್ಣಗೊಳ್ಳಲು ಬೇಕು ಮೂವತ್ತಾರು ತಿಂಗಳು
ಈ ಹೊಸ ಯೋಜನೆಯು ಹೈದರಾಬಾದ್ ಹಾಗೂ ಕಲ್ಯಾಣ ಕರ್ನಾಟಕದ ನೇರ ಸಂಪರ್ಕದ ಆಸೆ ಈಡೇರಿಸಲಿದೆ. ಜತೆಗೆ ಗಣಿಗಾರಿಕೆ ಜಿಲ್ಲೆಗಳಿಂದ ಈ ಪರ್ಯಾಯ ಮಾರ್ಗದ ಮೂಲಕ ಹೈದರಾಬಾದ್‌ಗೆ ಕಬ್ಬಿಣದ ಅದಿರು, ಸಿಮೆಂಟ್ ಇತರೆ ವಸ್ತುಗಳ ಸಾಗಾಟ ಸುಲಭವಾಗಲಿದೆ.;
ಎಲ್ಲವೂ ಅಂದುಕೊಂಡಂತೆ ಸಾಗಿದರೆ ಕಳೆದ 26 ವರ್ಷಗಳಿಂದ ಕುಂಟುತ್ತಾ ತೆವಳುತ್ತಾ ಸಾಗುತ್ತಿರುವ ಬಹುನಿರೀಕ್ಷಿತ ಗಿಣಗೇರಾ ಹಾಗೂ ರಾಯಚೂರ್ ಹೊಸ ರೈಲ್ವೆ ಲೈನ್ ( ಮುನೀರಾಬಾದ್- ಮೆಹಬೂಬ್ ನಗರ ಹೊಸ ರೈಲ್ವೆ ಲೈನ್ ಕಾಮಗಾರಿಯ ಭಾಗ) ಕಾಮಗಾರಿ 2027ಕ್ಕೆ ಸಂಪೂರ್ಣಗೊಳ್ಳಲಿದೆ. ಒಂದು ವೇಳೆ ಯೋಜನೆ ಪೂರ್ತಿಯಾದರೆ ಕಲ್ಯಾಣ ಕರ್ನಾಟಕದ ಭಾಗಗಳಾದ ಹುಬ್ಬಳ್ಳಿ-ರಾಯಚೂರು ಮೂಲಕ ಹೈದರಾಬಾದ್‌ಗೆ ನೇರ ಸಂಪರ್ಕ ಸಾಧಿಸುವ ಈ ಭಾಗದ ಜನರ ಕನಸು ಈಡೇರಲಿದೆ.
ಈ ಹೊಸ ರೈಲ್ವೆ ಮಾರ್ಗದ ಸಿಂಧನೂರುವರೆಗೆ ಮುಕ್ತಾಯಗೊಂಡಿದ್ದು, ಹುಬ್ಬಳ್ಳಿಯಿಂದ ರೈಲುಗಳು ಸಿಂಧನೂರು ವರೆಗೂ ಚಲಿಸುತ್ತಿವೆ. ಸಿಂಧನೂರಿನಿಂದ ರಾಯಚೂರು ವರೆಗಿನ ಸುಮಾರು 80 ಕಿಲೋಮೀಟರ್ ನಷ್ಟು ರೈಲ್ವೆ ಹಳಿ ನಿರ್ಮಾಣ ಕಾರ್ಯ ಇನ್ನೇನು ಆರಂಭಗೊಳ್ಳಬೇಕಿದೆ. ಈ ಕಾರ್ಯ ಮುಕ್ತಾಯಗೊಂಡರೆ ಹೈದರಾಬಾದ್‌ನಿಂದ ಹುಬ್ಬಳ್ಳಿ, ಗೋವಾ ನಡುವಿನ ಅಂತರ ಸುಮಾರು ೧೦೨ ಕಿಲೋಮೀಟರ್ ನಷ್ಟು ಕಡಿಮೆಯಾಗಲಿದೆ. ಪ್ರಸ್ತುತ ಹುಬ್ಬಳ್ಳಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರಗಳ ಪ್ರಯಾಣಿಕರು ಹೈದರಾಬಾದ್ ತಲುಪಲು ವೆಚ್ಚದಾಯಕ ಬಸ್ ಪ್ರಯಾಣ ಅವಲಂಬಿಸಿದ್ದಾರೆ.
ಈ ಮಾರ್ಗ ಸಂಪೂರ್ಣಗೊಂಡರೆ ಕಲ್ಯಾಣ ಕರ್ನಾಟಕದ ಪ್ರಮುಖ ನಗರ ರಾಯಚೂರು, ಹುಬ್ಬಳ್ಳಿಯೊಂದಿಗೆ ನೇರ ರೈಲು ಸಂಪರ್ಕ ಹೊಂದಲಿದೆ. ಗಿಣಿಗೇರ- ರಾಯಚೂರು ಹೊಸ ರೈಲ್ವೆ ಹಳಿ ನಿರ್ಮಾಣ ಯೋಜನೆಯು, ಮೆಹಬೂಬ್ ನಗರ- ಮುನಿರಾಬಾದ್ ರೈಲ್ವೆ ಯೋಜನೆಯ ಭಾಗವಾಗಿದ್ದು ಇದಕ್ಕೆ 1997-98 ರಲ್ಲಿ ಹಸಿರು ನಿಶಾನೆ ತೋರಲಾಯಿತು.
ಈ ಹೊಸ ಯೋಜನೆಯು ಹೈದರಾಬಾದ್ ಹಾಗೂ ಕರ್ನಾಟಕದ ಗಣಿಗಾರಿಕೆ ಕಣಜ ದ ನಡುವೆ ರೈಲ್ವೆ ಸಂಪರ್ಕ ವಿಸ್ತರಿಸಲು ಅನುಕೂಲವಾಗಲಿದೆ. ಈ ಪರ್ಯಾಯ ಮಾರ್ಗದ ಮೂಲಕ ಕಬ್ಬಿಣದ ಅದಿರು, ಸಿಮೆಂಟ್ ,ಸ್ಟೀಲ್ ಹಾಗೂ ಇತರೆ ವಸ್ತುಗಳ ಸಾಗಾಟ ಸುಲಭವಾಗಲಿದೆ.
ರೈಲು ಪ್ರಯಾಣಿಕರು ಹುಬ್ಬಳ್ಳಿ ಹಾವೇರಿ ಗದಗ್ ಹಾಗೂ ಬೆಳಗಾವಿಯಿಂದ ರಾಯಚೂರು ತಲುಪಲು ಅಥವಾ ಶಕ್ತಿನಗರ, ಅಥವಾ ಹೈದರಾಬಾದ್ ತಲುಪಲು ಸುತ್ತಿ ಬಳಸಿ ಹೊಸಪೇಟೆ, ಬಳ್ಳಾರಿ, ಗುಂಟ್ಕಲ್ ಮಾರ್ಗವಾಗಿ ತಲುಪಬೇಕಿದೆ. ಈ ಯೋಜನೆಯ ಮೂಲಕ ರೈಲ್ವೆ ಸಂಪರ್ಕವನ್ನೇ ಕಾಣದ ಕಲ್ಯಾಣ ಕರ್ನಾಟಕದ ಪ್ರಮುಖ ನಗರಗಳಾದ ಗಂಗಾವತಿ, ಸಿಂಧನೂರು, ಹಾಗೂ ಮಾನವಿ ರೈಲು ಸಂಪರ್ಕ ಹೊಂದಲಿವೆ.
ಗಿಣಗೇರಾ ಹಾಗೂ ರಾಯಚೂರು ನಡುವೆ ಸುಮಾರು ಭಾಗ ಗಳಾಗಿ ಈ ರೈಲ್ವೆ ಹಳಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು. ಸಿಂಧನೂರು ಹಾಗೂ ರಾಯಚೂರು ನಡುವೆ ಹಳಿ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿಂಧನೂರು ಹಾಗೂ ಹಿರೇಕೊಟಂಗಲ್ ನಡುವಿನ ೩೧ ಕಿಮೀ ನಡುವಿನ ಹಳಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು ಶ ಕಾಮಗಾರಿ ಆರಂಭವಾಗಲಿದೆ ಎಂದು ನೈರುತ್ಯ ರೇಲ್ವೆಯ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ ಮಂಜುನಾಥ ಕನಮಡಿ ಹೇಳಿದರು.
ಅಧಿಕಾರಿಗಳ ಪ್ರಕಾರ ಈ ಎರಡು ನಿಲ್ದಾಣಗಳ ನಡುವಿನ ಹಳಿ ನಿರ್ಮಾಣ ಕಾಮಗಾರಿ ಡಿಸೆಂಬರ್ ೨೦೨೬ ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹಿರೇಕೊಂಟಗಲ್ ಹಾಗೂ ಮಮದಾಪೂರ ( ಸುಮಾರು ೪೩ ಕಿಮೀ) ಈ ಎರಡು ನಿಲ್ದಾಣಗಳ ನಡುವಿನ ಹಳಿ ಹಾಕುವ ಕಾರ್ಯ ಬಹುತೇಕ ಇದೇ ಸಮಯದಲ್ಲಿ ಮುಗಿಯಲಿದ್ದು, ಮಮದಾಪೂರ ಹಾಗೂ ರಾಯಚೂರು ನಡುವಿನ ಕಾರ್ಯ ೨೦೨೭ (೯ ಕಿಮೀ) ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಿರೀಕ್ಷೆಗಳು ಇಲ್ಲ
ಗಿಣಿಗೇರಾ ರಾಯಚೂರು ರೈಲ್ವೆ ಲೈನು 2027 ಕ್ಕೆ ಸಂಪೂರ್ಣಗೊಳ್ಳುತ್ತೆ ಎನ್ನುವ ಅಧಿಕಾರಿಗಳ ಮಾತು ನನಗೆ ಹಾಸ್ಯಸ್ಪದವಾಗಿ ಕಾಣಿಸುತ್ತಿದೆ ಎಂದು ದಾವಣಗೆರೆಯ ಎಸ್ ಡಬ್ಲ್ಯು ಆರ್ ಪ್ಯಾಸೆಂಜರ್ ಕಮೀಟಿ ಪ್ರಧಾನ ಕಾರ್ಯದರ್ಶಿ ರೋಹಿತ್ ಎಸ್ ಜೈನ್ ಹೇಳಿದರು.
ನಮ್ಮ ಸಂಸದರು ಕಾಲಕಾಲಕ್ಕೆ ಬಹಳ ದಿನಗಳಿಂದ ನಡೆಯುತ್ತಿರುವ ಕಾಮಗಾರಿಗಳ ಕುರಿತು ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರೆ, ಹಾಗೂ ಜೆಡ್ ಆರ್ ಯು ಸಿ ಸಿ ಸದಸ್ಯರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದರೆ ಬಹಳ ವರ್ಷಗಳಿಂದ ಮುಂದುವರಿಯುತ್ತಿರುವ ಕಾಮಗಾರಿಗಳು ಶೀಘ್ರದಲ್ಲಿ ಮುಕ್ತಾಯಗೊಳ್ಳಬಹುದು. ಆದರೆ ನಮ್ಮ ಸಂಸದರು ಈ ರೀತಿಯ ಸಭೆಗಳಲ್ಲಿ ಭಾಗವಹಿಸುವುದು ತೀರಾ ಕಡಿಮೆ ಎಂದರು ರೋಹಿತ್ ಜೈನ್.
ಹೊಸ ಯೋಜನೆಗಳ ಘೋಷಣೆಗಿಂತಲೂ ಈಗಿರುವ ಹಳೆಯ ಯೋಚನೆಗಳನ್ನು ತುರ್ತುಗತಿಯಲ್ಲಿ ಪೂರ್ಣ ಗೊಳಿಸಿಲು ಆಲೋಚಿಸುವುದು ಉತ್ತಮ. ಕರ್ನಾಟಕದಲ್ಲಿ ಬಹಳಷ್ಟು ಹಳೆಯ ಕಾಮಗಾರಿಗಳು ಆಮೆಗತಿಗಿಂತಲೂ ತೀರಾ ನಿಧಾನವಾಗಿ ಸಾಗುತ್ತಿವೆ, ಅದರಲ್ಲಿ ಗದಗ- ವಾಡಿ, ತುಮಕೂರು-ದಾವಣಗೆರೆ, ಇನ್ನು ಹಲವು ಕಾಮಗಾರಿಗಳು ಇವೆ ಎಂದರು.
ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗಳು ಮುಕ್ತಾಯವಾದರೆ, ರಾಜ್ಯವು ಇತರ ಉತ್ತರ ಭಾರತದ ರಾಜ್ಯಗಳೊಂದಿಗೆ ಉತ್ತಮ ಸಂಪರ್ಕ ಸಾಧ್ಯವಾಗಲಿದೆ. ಈ ಬಗ್ಗೆ ಕರ್ನಾಟಕದ ಸಂಸದರು ನಿಯಮಿತವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟೂ ಬೇಗ ಕಾಮಗಾರಿ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಕಾಮಗಾರಿ ವಿಳಂಭ ವಾದಷ್ಟು ಕಾಮಗಾರಿಯ ವೆಚ್ಚ ಹೆಚ್ಚುತ್ತಾ ಹೋಗುತ್ತದೆ, ಹೀಗಾಗಿ ಸರಕಾರವು ಹೊಸ ಯೋಜನೆಗಳನ್ನು ಘೋಷಿಸುವ ಬದಲು, ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರೈಸಿದರೆ ಉತ್ತಮ ಎಂದರು.
ಗಂಗಾವತಿ ಯಿಂದ ಸಿಂಧನೂರು ಹಾಗೇ ಮುಂದೆ ರಾಯಚೂರು ವರೆಗೆ ಭೂಸ್ವಾಧೀನ ಪ್ರಕ್ರಿಯೆ ತಡವಾದ ಕಾರಣ, ಕಾಮಗಾರಿ ವಿಳಂಬವಾಗಲು ಪ್ರಮುಖ ಕಾರಣ, ಮುಖ್ಯವಾಗಿ ಈ ಭಾಗವು ನೀರಾವರಿ ಪ್ರದೇಶವಾಗಿರುವದರಿಂದ, ರೈತರು ತಮ್ಮ ಜಮೀನು ನೀಡಲು ಪ್ರಬಲ ವಿರೋಧ ವ್ಯಕ್ತವಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.
ಕಾಮಗಾರಿ ನಡೆದು ಬಂದ ದಾರಿ ಗಿಣಗೇರಾ- ಚಿಕ್ಕಬೆಣಕಲ್ ಕಾಮಗಾರಿ ಪೂರ್ಣ- 31-3-2017 ಚಿಕ್ಕಬೆಣಕಲ್- ಗಂಗಾವತಿ- ಕಾಮಗಾರಿ ಪೂರ್ಣ 4-3-2019 ಗಂಗಾವತಿ- ಕಾರಟಗಿ- ಕಾಮಗಾರಿ ಪೂರ್ಣ- 31-5-202 ಕಾರಟಗಿ-ಸಿಂಧನೂರು- ಕಾಮಗಾರಿ ಪೂರ್ಣ- 12-3-2024 ಇನ್ನೂ ಈ ಕಾಮಗಾರಿಯ ಇನ್ನೊಂದು ಭಾಗ ದಕ್ಷಿಣ ಕೇಂದ್ರ ರೇಲ್ವೆ ಯಿಂದ 5 ಹಂತಗಳಲ್ಲಿ ಸಂಪೂರ್ಣಗೊಂಡಿದೆ. |
ಈ ಹೊಸ ರೈಲು ಮಾರ್ಗ ಯೋಜನೆವು ಐದು ವಿಭಾಗಗಳನ್ನು ಹೊಂದಿದೆ: ದೇವರಕದ್ರ – ಕೃಷ್ಣ, ದೇವರಕದ್ರ – ಜಕ್ಲೈರ್, ಜಕ್ಲೈರ್ – ಮಕ್ತಲ್, ಮಕ್ತಲ್ – ಮಾಗನೂರು ಮತ್ತು ಮಾಗನೂರು – ಕೃಷ್ಣ. ದೇವರಕದ್ರ – ಕೃಷ್ಣ ವಿಭಾಗ: ದೇವರಕದ್ರ – ಕೃಷ್ಣ ನಡುವೆ 66 ಕಿಮೀ ಉದ್ದದ ವಿಭಾಗವು ಕಾರ್ಯಗತಗೊಂಡಿದೆ. ದೇವರಕದ್ರ – ಜಕ್ಲೈರ್ ವಿಭಾಗ: ದೇವರಕದ್ರ ಮತ್ತು ಜಕ್ಲೈರ್ ಸ್ಟೇಷನ್ ನಡುವೆ 28.3 ಕಿಮೀ ಉದ್ದದ ವಿಭಾಗವನ್ನು 2017ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಜಕ್ಲೈರ್ – ಮಕ್ತಲ್ ವಿಭಾಗ: ಜಕ್ಲೈರ್ ಮತ್ತು ಮಕ್ತಲ್ ರೈಲು ನಿಲ್ದಾಣಗಳ ನಡುವೆ 11.5 ಕಿಮೀ ಉದ್ದದ ವಿಭಾಗವನ್ನು 2020ರ ಆಗಸ್ಟ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಮಕ್ತಲ್ – ಮಾಗನೂರು ಭಾಗ: ಮಕ್ತಲ್ – ಮಾಗನೂರು ನಡುವಿನ 13.3 ಕಿಮೀ ಉದ್ದದ ಭಾಗವನ್ನು 2022ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಮಾಗನೂರು – ಕೃಷ್ಣ ಭಾಗ: 12.7 ಕಿಮೀ ಉದ್ದದ ಈ ಭಾಗವನ್ನು ಪೂರ್ಣಗೊಳಿಸಲಾಗಿದೆ. |