ತುಮಕೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಡಿಕ್ಕಿ, ಮೂವರು ಯಾತ್ರಿಕರು ದುರ್ಮರಣ

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರಲ್ಲಿ ಮೂವರು ಪ್ರಾಣ ಬಿಟ್ಟಿದ್ದಾರೆ. ಘಟನೆಯ ನಂತರ ಖಾಸಗಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Update: 2025-10-05 05:13 GMT

ಧರ್ಮಸ್ಥಳಕ್ಕೆ ದರ್ಶನಕ್ಕೆ ತೆರಳುತ್ತಿದ್ದ ಕಾರಿಗೆ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ತುಮಕೂರು ತಾಲೂಕಿನ ಬೆಳಧರ ಗ್ರಾಮದ ಬಳಿ ನಡೆದಿದೆ.

ತುಮಕೂರಿನಿಂದ ಪಾವಗಡದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್, ಕೊರಟಗೆರೆ ಕಡೆಯಿಂದ ತುಮಕೂರಿನತ್ತ ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಐವರಲ್ಲಿ ಮೂವರು ಪ್ರಾಣ ಬಿಟ್ಟಿದ್ದಾರೆ. ಘಟನೆಯ ನಂತರ ಖಾಸಗಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಮೃತರು ಮತ್ತು ಗಾಯಾಳುಗಳ ವಿವರ

ಮೃತರನ್ನು ಕೊರಟಗೆರೆ ತಾಲೂಕಿನ ನಿವಾಸಿಗಳಾದ ಶಿವಕುಮಾರ್ (27), ಗೋವಿಂದಪ್ಪ (50), ಮತ್ತು ಭೈಚಾರಪುರದ ಶಿವಶಂಕರ್ (30) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನಕ್ಕಾಗಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಶಂಕರ್ (28) ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಮತ್ತು ವೇಣುಗೋಪಾಲ್ (28) ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಹಾಗೂ ಗಾಯಾಳುಗಳು ಕೊರಟಗೆರೆ ತಾಲೂಕಿನ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳು ಎಂದು ತಿಳಿದುಬಂದಿದೆ.

ಪ್ರಕರಣ ದಾಖಲು, ಚಾಲಕನಿಗಾಗಿ ಶೋಧ

ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಬಸ್ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. 

Tags:    

Similar News