ಹನಿಟ್ರ್ಯಾಪ್‌ ಪ್ರಕರಣ | ʻರಾಜ್ಯವೇ ಖುಷಿ ಪಡೋ ಸುದ್ದಿʼ ಎಂದು ಟ್ರೋಲ್‌ ಆಗಿದ್ದ ನಿರೂಪಕಿ ದಿವ್ಯಾ ವಸಂತ ಅರೆಸ್ಟ್‌

ಕನ್ನಡದ ನಟಿಯೊಬ್ಬಳು ಮದುವೆಯಾಗಿ ಗರ್ಭಿಣಿಯಾದಾಗ ''ಇದು ಇಡೀ ರಾಜ್ಯವೇ ಖುಷಿಪಡುವ ಸುದ್ದಿ'' ಎಂದು ಹೇಳುವ ಮೂಲಕ ಟ್ರೋಲ್ ಗೆ ಒಳಗಾಗಿದ್ದ ನಿರೂಪಕಿ ದಿವ್ಯಾ ವಸಂತ ವಿರುದ್ದ ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣ ದಾಖಲಾಗಿದೆ.

Update: 2024-07-11 14:02 GMT
ದಿವ್ಯಾ ವಸಂತ್‌

ಹನಿಟ್ರ್ಯಾಪ್‌, ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕನ್ನಡ ಸುದ್ದಿವಾಹಿನಿ ನಿರೂಪಕಿ ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿ ದಿವ್ಯಾ ವಸಂತ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡದ ನಟಿಯೊಬ್ಬಳು ಮದುವೆಯಾಗಿ ಗರ್ಭಿಣಿಯಾದಾಗ ''ಇದು ಇಡೀ ರಾಜ್ಯವೇ ಖುಷಿಪಡುವ ಸುದ್ದಿ'' ಎಂದು ಹೇಳುವ ಮೂಲಕ ಭಾರೀ ಟ್ರೋಲ್ ಗೆ ಒಳಗಾಗಿದ್ದು, ನಿರೂಪಕಿ ಇದೀಗ  ಹನಿಟ್ರ್ಯಾಪ್‌, ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಸಿಲುಕಿದ್ದಾಳೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆಕೆಯನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಇಂದಿರಾ ನಗರದ ಬ್ಯೂಟಿ ಪಾರ್ಲರ್ ನ ಮಾಲೀಕರೊಬ್ಬರು ಇವರ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದರು. ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಬೆನ್ನಲ್ಲೇ ಆಕೆ ಕಾಣೆಯಾಗಿದ್ದಳು. ತಲೆಮರೆಸಿಕೊಂಡಿದ್ದ ಆಕೆಯನ್ನು ಜು.11ರಂದು ಕೇರಳದಲ್ಲಿ ಬಂಧಿಸಲಾಗಿದೆ. ತಮಿಳುನಾಡಿನಿಂದ ಕೇರಳಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ ದಿವ್ಯಾಳನ್ನು ಬಂಧಿಸಿ ಪೊಲೀಸರು ಕರೆತಂದಿದ್ದಾರೆ. ಸದ್ಯ ಇದೀಗ ಕೇಸ್‌ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಜೆ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸ್ಪಾ’ವೊಂದರ ವ್ಯವಸ್ಥಾಪಕನನ್ನು ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಈ ಮುಂಚೆ ಪೊಲೀಸರು ಮೂವರನ್ನು ಬಂಧಿಸಿದ್ದರು. ರಾಜ್‌ನ್ಯೂಸ್ ಸುದ್ದಿವಾಹಿನಿ ಸಿಇಓ ಎನ್ನಲಾಗುತ್ತಿದ್ದ ವೆಂಕಟೇಶ್ ಹಾಗೂ ದಿವ್ಯಾ ವಸಂತ ಸಹೋದರ ಸಂದೇಶ್ ಬಂಧನವಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿತ್ತು. ವೆಂಕಟೇಶ್ ಹಾಗೂ ದಿವ್ಯಾ ಸೇರಿ ‘ಸ್ಪೈ ರೀಸರ್ಚ್ ಟೀಂ’ ಹೆಸರಿನ ವಾಟ್ಸಪ್‌ ಗ್ರೂಪ್ ಮಾಡಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ವರದಿಯಾಗಿತ್ತು.

ಶ್ರೀಮಂತರು, ಮಸಾಜ್ ಪಾರ್ಲರ್‌ಗಳು ಹಾಗೂ ವೈದ್ಯರೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದ್ದರು. ಹನಿಟ್ರ್ಯಾಪ್ ಮಾಡಿ ಹಣವಂತರನ್ನು ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿತ್ತು. ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ವಸಂತ ಮನೆ ಮೇಲೆ ದಾಳಿ ನಡೆಸಿ ಕ್ಯಾಮೆರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

Tags:    

Similar News