Hindi Imposition | ಸಮಾವೇಶದಲ್ಲಿ ಕನ್ನಡ ಕಡಗಣನೆ: ಆರ್‌ಎಸ್‌ಎಸ್ ವಿರುದ್ಧ ನೆಟ್ಟಿಗರ ಆಕ್ರೋಶ
ಕನ್ನಡದ ನೆಲ ಬೆಂಗಳೂರಿನಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಕೇವಲ ಹಿಂದಿ ಬಳಸುವ ಮೂಲಕ ಆರ್‌ಎಸ್‌ಎಸ್ ಕನ್ನಡವನ್ನು ಕಡೆಗಣಿಸಿ ಕನ್ನಡಿಗರಿಗೆ ಅವಮಾನಿಸಿದೆ ಎಂದು ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ;
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಅಖಿಲ ಭಾರತೀಯ ಪ್ರತಿನಿಧಿ ಸಭೆ ವಿವಾದಕ್ಕೀಡಾಗಿದೆ.
ಕನ್ನಡ ನೆಲದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ, ಈ ನೆಲದ ಸಂಸ್ಕೃತಿ, ಭಾಷೆ, ಪರಂಪರೆ, ಧರ್ಮದ ಕುರಿತು ಕೆಲಸ ಮಾಡುವ ಆರ್ಎಸ್ಎಸ್ನಂತಹ ಸಂಸ್ಥೆ ಕನ್ನಡವನ್ನೇ ಕಡೆಗಣಿಸಿದೆ. ಆ ಮೂಲಕ ಕನ್ನಡ ಭಾಷೆ, ಕನ್ನಡ ನೆಲದ ಸಂಸ್ಕೃತಿಯನ್ನು ಗಾಳಿಗೆ ತೂರಿದೆ. ಕಾರ್ಯಕ್ರಮದ ವೇದಿಕೆ ಸೇರಿದಂತೆ ಸಮಾವೇಶದ ಕುರಿತ ಬೋರ್ಡು, ಮಾರ್ಗಸೂಚಿ ಮತ್ತಿತರ ಪ್ರಚಾರ ಸಾಮಗ್ರಿಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣ ಉಪೇಕ್ಷಿಸಲಾಗಿದೆ. ಹಿಂದಿಯಲ್ಲೇ ಎಲ್ಲವನ್ನೂ ಬರೆದು ಒಂದೇ ಒಂದು ಕನ್ನಡ ಪದವನ್ನು ಬಳಸದೆ ಕನ್ನಡಿಗರಿಗೆ ಅವಮಾನಿಸಲಾಗಿದೆ ಎಂಬ ಟೀಕೆ ಕೇಳಿಬಂದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಮಾರ್ಚ್ 21ರಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮತ್ತೊಬ್ಬ ಪ್ರಮುಖರೂ ಕನ್ನಡಿಗರೂ ಆದ ದತ್ತಾತ್ರೇಯ ಹೊಸಬಾಳೆ ಮತ್ತಿತರ ಗಣ್ಯರು ಭಾಗವಹಿಸಿದ್ದಾರೆ. ಆದರೆ, ಇಡೀ ಕಾರ್ಯಕ್ರಮದ ವೇದಿಕೆ ಸೇರಿದಂತೆ ಎಲ್ಲಿಯೂ ಒಂದೇ ಒಂದು ಕನ್ನಡ ಪದ ಬಳಸದೆ ಕೇವಲ ಹಿಂದಿ ಬಳಸುವ ಮೂಲಕ ಆರ್ಎಸ್ಎಸ್ ತಾನು ಹಿಂದಿ ಹೇರಿಕೆಯ ಪರ ಎಂದು ಸಾರಿ ಹೇಳುತ್ತಿದೆ. ಇದು ನಿಜವಾಗಿಯೂ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು, ಬೆಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ನೆಲದಲ್ಲಿ ಕಾರ್ಯಕ್ರಮ ನಡೆಸಿ ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸುವುದು ಸರಿಯೇ? ಎಂದು ಪ್ರಶ್ನಿಸಿರುವ ನೆಟ್ಟಿಗರು, ಆರ್ಎಸ್ಎಸ್ ಧೋರಣೆಯ ವಿರುದ್ಧ ಕಿಡಿಕಾರಿದ್ದಾರೆ.
“ಆರ್ಎಸ್ಎಸ್ ಬೆಂಗಳೂರಿನಲ್ಲಿ ಅದರ ಅಖಿಲ ಭಾರತೀಯ ಪ್ರತಿನಿಧಿ ಸಭೆ ಎಂಬ ಸಮಾವೇಶ ನಡೆಸುತ್ತಿದೆ. ಆದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬಳಸಿರುವ ನಾಮಫಲಕಗಳು, ಸಾಮಾವೇಶದ ವೇದಿಕೆ ಹಿನ್ನೆಲೆಯ ಫಲಕಗಳು ಸೇರಿದಂತೆ ಎಲ್ಲಾ ಕಡೆ ಹಿಂದಿ ಬಳಸಲಾಗಿದೆ ವಿನಃ ಕನ್ನಡಕ್ಕೆ ಅವಕಾಶ ನೀಡಿಲ್ಲ. ಬೆಂಗಳೂರು ಕನ್ನಡಿಗರ ನಗರ. ಆದರೂ ಆರ್ಎಸ್ಎಸ್ ಹಿಂದಿ ಹೇರಿಕೆ ಮಾಡಿದೆ. ಸಾಂಸ್ಕೃತಿಕ ಹೆಮ್ಮೆ, ಸಂಸ್ಕೃತಿಯ ಬಗ್ಗೆ ಬೋಧಿಸುವ ಆರ್ಎಸ್ಎಸ್ ಕನ್ನಡ ಸಂಸ್ಕೃತಿ, ಭಾಷೆ, ಪರಂಪರೆಗೆ ನೀಡುವ ಗೌರವ ಇದೆಯೇ?” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನೂ ಕೆಲವರು, “ಇದು ಕನ್ನಡದ ನೆಲ. ಇಲ್ಲಿ ಕನ್ನಡ ನುಡಿಗೆ ಆದ್ಯತೆ. ಇದು ನಮ್ಮ ನಾಡು, ನಮ್ಮ ಭಾಷೆಗೆ ಇಲ್ಲಿ ಮಾನ್ಯತೆ, ಹಿಂದಿ ಹೇರಿಕೆಗೆ ಇಲ್ಲಿ ಜಾಗವಿಲ್ಲ. ಕರ್ನಾಟಕ ಹಿಂದಿಯ ವಸಾಹತು ಅಲ್ಲ” ಎಂದು ಆರ್ಎಸ್ಎಸ್ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.