ಸಿ.ಪಿ. ಯೋಗೇಶ್ವರ್ ವಿರುದ್ಧ ಮಾನಹಾನಿಕರ ಹೇಳಿಕೆ: ಪುತ್ರಿ ನಿಶಾ ನಿರಾಳ
ತಂದೆ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಿರಲು ಪುತ್ರಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಕ್ಕೆ ವಿಧಿಸಿದ ನಿರ್ಬಂಧವನ್ನು ಹೈಕೋರ್ಟ್ ರದ್ದುಗೊಳಿಸಿದೆ.;
ಕಾಂಗ್ರೆಸ್ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಅವರ ಕುಟುಂಬದ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಪುತ್ರಿ ನಿಶಾ ಯೋಗೇಶ್ವರ್ ಅವರ ಸಾಮಾಜಿಕ ಜಾಲತಾಣಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನಿಶಾ ಅವರ ತಾಯಿ ಪಿ.ವಿ. ಶೀಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿದೆ.
ಕಳೆದ ಒಂಬತ್ತು ತಿಂಗಳಿಂದ ಹೇರಲಾಗಿದ್ದ ಈ ನಿರ್ಬಂಧವನ್ನು ರದ್ದುಗೊಳಿಸುವ ಮೂಲಕ, ನಿಶಾ ಯೋಗೇಶ್ವರ್ ಅವರ ಸಾಮಾಜಿಕ ಜಾಲತಾಣಗಳು ಮುಕ್ತವಾದಂತಾಗಿವೆ. ಕಳೆದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿ.ಪಿ. ಯೋಗೇಶ್ವರ್ ಮತ್ತು ಎನ್‌ಡಿಎ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ಇತ್ತು. ಈ ಸಂದರ್ಭದಲ್ಲಿ, ನಿಶಾ ಯೋಗೇಶ್ವರ್‌ಗೆ ತಂದೆ ಸಿ.ಪಿ. ಯೋಗೇಶ್ವರ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಇದೀಗ ಆ ತೀರ್ಪನ್ನು ರದ್ದುಗೊಳಿಸಲಾಗಿದೆ.
ಈ ಕುರಿತು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ನಿಶಾ ಯೋಗೇಶ್ವರ್, "ಕಳೆದ ನವೆಂಬರ್ ತಿಂಗಳಲ್ಲಿ ಹೈಕೋರ್ಟ್‌ನಿಂದ ನನ್ನ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ತಂದಿದ್ದರು. ಆಗಿನಿಂದಲೂ ನಿಷೇಧ ಹೇರಲಾಗಿತ್ತು. ಕುಟುಂಬದ ವಿರುದ್ಧ ಹಲವು ರೀತಿಯಲ್ಲಿ ಸಿ.ಪಿ. ಯೋಗೇಶ್ವರ್ ಕಿರುಕುಳ ನೀಡುವ ಪ್ರಯತ್ನ ಮಾಡಿದ್ದರು. ಒಂಬತ್ತು ತಿಂಗಳ ಕಾಲ ಸಾಮಾಜಿಕ ಜಾಲತಾಣ ನಿರ್ಬಂಧಿಸಲಾಗಿತ್ತು. ಈಗ ನ್ಯಾಯಾಲಯವು ಅವುಗಳನ್ನು ರದ್ದು ಮಾಡಿದೆ. ದೃಢತೆಯಲ್ಲಿ ಮುಂದುವರಿದರೆ ನ್ಯಾಯ ಸಿಗಲಿದೆ ಎಂಬುದಕ್ಕೆ ನನಗೆ ಸಿಕ್ಕ ಜಯವೇ ಸಾಕ್ಷಿ. ಕಾನೂನಿನಲ್ಲಿ ಶಕ್ತಿ ಇದ್ದು, ಈ ಮೂಲಕ ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳಲಾಗಿದೆ," ಎಂದು ಹೇಳಿದರು.