ಮಂತ್ರಾಲಯದಲ್ಲಿ ಹೈ ಅಲರ್ಟ್, ಬಾಂಬ್ ಸ್ಕ್ವಾಡ್‌ನಿಂದ ತಪಾಸಣೆ
ತಿರುಪತಿ ಹಾಗೂ ತಿರುಮಲದಲ್ಲಿಯೂ ಅಗತ್ಯ ಕಟ್ಟೆಚ್ಚರ ವಹಿಸಲಾಗಿದ್ದು, ಇದೀಗ ಮಂತ್ರಾಲಯದಲ್ಲಿಯೂ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ.;
ಮಂತ್ರಾಲಯದ ರಾಘವೇಂದ್ರಸ್ವಾಮಿ ದೇವಾಲಯದ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾದವರಂ ಠಾಣೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ತಪಾಸಣೆ ನಡೆಸಿದೆ.
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ಮಂತ್ರಾಲಯ ಪೊಲೀಸರು, ನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ನೀಡುವ ಮಂತ್ರಾಲಯ ದೇವಾಲಯದ ಆವರಣ, ತುಂಗಭದ್ರಾ ನದಿ ತೀರಾ, ಪ್ರಾರಂಗಣ ಹಾಗೂ ಭೋಜನ ಶಾಲೆ, ವಸತಿ ನಿಲಯಗಳು, ವ್ಯಾಪಾರಿ ಮಳಿಗೆಗಳು, ಬಸ್ ನಿಲ್ದಾಣ, ಮಂತ್ರಾಲಯಕ್ಕೆ ಬರುವ ಕಾರುಗಳು, ಭಕ್ತರ ಬ್ಯಾಗುಗಳು ಸೇರಿದಂತೆ ಎಲ್ಲೆಡೆ ತೀವ್ರ ತಪಾಸಣೆ ನಡೆಸಿದ್ದಾರೆ.
ಈಗಾಗಲೇ ತಿರುಪತಿ ಹಾಗೂ ತಿರುಮಲದಲ್ಲಿಯೂ ಅಗತ್ಯ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ಮಂತ್ರಾಲಯದಲ್ಲಿಯೂ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಿ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಏಪ್ರಿಲ್ 22 ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಮೃತಪಟ್ಟಿದ್ದು ಹಲವು ಮಂದಿ ಗಾಯಗೊಂಡಿದ್ದರು. ಮೃತಪಟ್ಟ ಕರ್ನಾಟಕದ ಮೂವರಿಗೆ ಮಂತ್ರಾಲಯದ ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಮೃತಪಟ್ಟ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಯನ್ನು ಮಂತ್ರಾಲಯ ಮಠ ವಹಿಸಿಕೊಳ್ಳಲಿದೆ ಎಂದು ತಿಳಿಸಿದ್ದರು.
ದೇಶದಲ್ಲಿ ಅಶಾಂತಿಯನ್ನು ಸೃಷ್ಠಿಸಲು ಕೆಲವರು ಬಯಸುತ್ತಿದ್ದು. ಅದಕ್ಕೆ ನಾವು ಅವಕಾಶ ಕೊಡಬಾರದು. ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರು ಸಹ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡ ನೋವು ನಮಗಿದೆ ಎಂದು ಮೃತ ಕುಟುಂಬದವರಿಗೆ ಸ್ವಾಮೀಜಿ ಸಾಂತ್ವನ ಹೇಳಿದ್ದರು.