ಮುಂದುವರಿದ ಬಿರುಮಳೆ | ಚಾರ್ಮಾಡಿ, ಶಿರಾಡಿಯಲ್ಲಿ ಗುಡ್ಡ ಕುಸಿತ: ಹಲವೆಡೆ ರೈಲು ವ್ಯತ್ಯಯ

ಮಳೆ ಮತ್ತು ಭಾರೀ ಬಿರುಗಾಳಿಯಿಂದಾಗಿ ಹಲವೆಡೆ ರಸ್ತೆ, ರೈಲು ಮಾರ್ಗಗಳಿಗೆ ಬೃಹತ್‌ ಮರಗಳು ಉರುಳಿವೆ. ಮಲೆನಾಡಿನ ಹಲವು ಭಾಗದಲ್ಲಿ ಗಾಳಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ವ್ಯತ್ಯಯವಾಗಿದೆ. ಗಾಳಿ-ಮಳೆಯಿಂದಾಗಿ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರಕನ್ನಡ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.

Update: 2024-07-27 06:20 GMT

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿರುಗಾಳಿಸಹಿತ ಕುಂಭದ್ರೋಣ ಮಳೆ ಸುರಿಯುತ್ತಿದೆ. ಮಳೆ ಮತ್ತು ಭಾರೀ ಬಿರುಗಾಳಿಯಿಂದಾಗಿ ಹಲವೆಡೆ ರಸ್ತೆ, ರೈಲು ಮಾರ್ಗಗಳಿಗೆ ಬೃಹತ್‌ ಮರಗಳು ಉರುಳಿವೆ. ಮಲೆನಾಡಿನ ಹಲವು ಭಾಗದಲ್ಲಿ ಗಾಳಿ ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ವ್ಯತ್ಯಯವಾಗಿದೆ. ಗಾಳಿ-ಮಳೆಯಿಂದಾಗಿ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರಕನ್ನಡ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.

ರಾಜ್ಯಾದ್ಯಂತ ಮಳೆ ಹಾಗೂ ಶೀತ ಗಾಳಿಯು ಮುಂದುವರೆದಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ರಾಜ್ಯದ ಕೆಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಕೊಡಗು, ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಕೆಲವು ತಾಲ್ಲೂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೂಡ ವರುಣಾರ್ಭಟ ಹೆಚ್ಚಾಗಿರುವುದರಿಂದ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಕೊಡಗು ಜಿಲ್ಲೆಯಲ್ಲಿಯಲ್ಲಿ ಮೂರು ದಿನಗಳ ಬಿಡುವು ನೀಡಿದ್ದ ವರುಣ, ಶುಕ್ರವಾರದಿಂದ ಮತ್ತೆ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜುಲೈ 27ರ ಶನಿವಾರದಂದು ರಜೆ ಘೋಷಿಸಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಶಾಲೆ ಹಾಗೂ ಕಾಲೇಜುಗಳಿಗೆ ತಹಶೀಲ್ದಾರ್ ಅವರು ರಜೆ ಘೋಷಣೆ ಮಾಡಿದ್ದಾರೆ. ಮಲೆನಾಡು ಶಿವಮೊಗ್ಗದಲ್ಲಿ ಮಳೆ ಗಾಳಿ ಹೆಚ್ಚಾಗಿದ್ದು ಜಿಲ್ಲೆಯ ಹೊಸನಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಶನಿವಾರ ರಜೆ ನೀಡಿರುವುದಾಗಿ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಆದೇಶ ಹೊರಡಿಸಿದ್ದಾರೆ.

ಧಾರವಾಡ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಶೀತಗಾಳಿ ಬೀಸುತ್ತಿರುವದರಿಂದ ಈಗಾಗಲೇ ಜುಲೈ 25, 26 ರಂದು ಎರಡು ದಿನ ಧಾರವಾಡ ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ನೀಡಿದ ರಜೆಯನ್ನು ನಾಳೆ ಜುಲೈ 27, 2024 ರವರೆಗೆ ಮುಂದುವರೆಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಸಂಜೆ ಆದೇಶಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬಹುತೇಕ ಕಡೆಗೆ ನಿರಂತರವಾಗಿ ಮಳೆ ಆಗುತ್ತಿದೆ. ಮತ್ತು ಶೀತಗಾಳಿ ಬಿಸುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ಜೋಯಿಡಾ, ಯಲ್ಲಾಪುರ, ಭಟ್ಕಳ ಹಾಗೂ ದಾಂಡೇಲಿ ತಾಲ್ಲೂಕುಗಳ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ. ಹಳಿಯಾಳ ಹಾಗೂ ಮುಂಡಗೋಡು ತಾಲ್ಲೂಕಿನ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲಿವೆ.

ಚಿಕ್ಕಮಗಳೂರಿನಲ್ಲೂ ರಜೆ ಚಿಕ್ಕಮಗಳೂರಿನಲ್ಲಿ ಭಾರೀ ಗಾಳಿ-ಮಳೆ ಆಗುತ್ತಿದ್ದು, ಜಿಲ್ಲೇಯ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್‌.ಪರ ತಾಲೂಕಿನ ಅಂಗನವಾಡಿ ,ಪ್ರಾಥಮಿಕ , ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿಗೆ ರಜೆ ಇರುವುದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ನೀಡಿದ್ದಾರೆ.

ಭಾರೀ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ ತಡ ರಾತ್ರಿ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಘಾಟಿ ಮಾರ್ಗದಲ್ಲಿ ಹಲವು ತಾಸುಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಕಡೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು ಬಿದ್ದಿದೆ. ಇದರಿಂದಾಗಿ ಕೊಟ್ಟಿಗೆಹಾರದಲ್ಲಿ ‌ಕಿ.ಮೀ ಗಟ್ಟಲೆ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ 3-4 ಕಡೆ ಬಂಡೆಗಳು ರಸ್ತೆಗೆ ಬಿದ್ದಿವೆ. 

ಶಿರಾಡಿ ಘಾಟಿ ಪ್ರದೇಶದಲ್ಲೂ ಗುಡ್ಡ ಕುಸಿತ

ಶಿರಾಡಿ ಘಾಟಿ ಪ್ರದೇಶದ ಎಡಕುಮರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲ ರೈಲು ಸಂಚಾರ ರದ್ದುಗೊಳಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಸಂಚಾರವನ್ನು ಮಾರ್ಪಡಿಸಲಾಗಿದೆ.

ಕಾರವಾರದಿಂದ ನಿನ್ನೆ ಹೊರಡಬೇಕಾಗಿದ್ದ ರೈಲು ಸಂಖ್ಯೆ 06568 ಕಾರವಾರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ನಿನ್ನೆ ರದ್ದುಗೊಳಿಸಲಾಗಿದೆ.

ಬೆಂಗಳೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 16595 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕುಣಿಗಲ್,ಪಡೀಲು ಬೈಪಾಸ್ ಬದಲು ಯಶವಂತಪುರ, ಬಾಣಸವಾಡಿ, ಜೋಲಾರ್‌ಪೇಟೆ ಕ್ಯಾಬಿನ್, ಸೇಲಂ, ಪೊದನೂರು, ಶೋರನೂರು, ಮಂಗಳೂರು ಜಂಕ್ಷನ್, ಸುರತ್ಕಲ್‌ ಮೂಲಕ ಸಂಚರಿಸಿದೆ.

ಇನ್ನೊಂದೆಡೆ, ಮಂಗಳೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಆಗಿದ್ದು, ಹಾಸನದ ಬದಲು ಸುಬ್ರಹ್ಮಣ್ಯ ರಸ್ತೆ, ಪಡೀಲ್, ಸುರತ್ಕಲ್, ಕಾರವಾರ, ಮಡಗಾಂವ್, ಕೂಲಂ, ಕ್ಯಾಸ್ಟಲ್ ರಾಕ್, ಲೊಂಡಾ, ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮೂಲಕ ಸಂಚರಿಸಿದೆ.

ಮುರುಡೇಶ್ವರದಿಂದ ನಿನ್ನೆ ಹೊರಟ ರೈಲು ಸಂಖ್ಯೆ 16586 ಮುರಡೇಶ್ವರ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ,ಮೈಸೂರು ಮಾರ್ಗದ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್‌ಪೇಟೆ ಕ್ಯಾಬಿನ್ ಮೂಲಕ ಸಂಚರಿಸಿದೆ.

ಕಣ್ಣೂರಿನಿಂದ ನಿನ್ನೆ ಹೊರಟ ರೈಲು ಸಂಖ್ಯೆ 16512 ಕಣ್ಣೂರು–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕುಣಿಗಲ್ ಬದಲು ಮಂಗಳೂರು ಸೆಂಟ್ರಲ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಪ್ರಯಾಣಿಸಿದೆ.

ಕಾರವಾರದಿಂದ ನಿನ್ನೆ ಹೊರಟ ರೈಲು ಸಂಖ್ಯೆ 16596 ಕಾರವಾರ-ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲು ಬೈಪಾಸ್ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಸಂಚರಿಸಿದೆ.

ಹೀಗೆ ಸುಮಾರು ರೈಲುಗಳು ಬದಲಿ ಇಮಾರ್ಗದಿಂದ ಸಂಚರಿಸಿದರೆ ಕೆಲವನ್ನು ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.. ಈ ನಡುವೆ ಸುಬ್ರಹ್ಮಣ್ಯ‌- ಸಕಲೇಶಪುರ ಮಧ್ಯೆ ಭೂಕುಸಿತ ಸಂಭವಿಸಿ ರೈಲು ರದ್ದುಪಡಿಸಿದ ಕಾರಣ ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮರ್ಪಕ ಬಸ್ಸಿನ ವ್ಯವಸ್ಥೆ ಮಾಡಿಲ್ಲ ಎಂದು ಕುಕ್ಕೆ ಸುಬ್ರಹ್ಮಣ್ಯ(ನೆಟ್ಟಣ) ರೈಲು ನಿಲ್ದಾಣದಲ್ಲಿ ಪ್ರವಾಸಿಗರು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭದಲ್ಲಿ ವಿಷಯ ತಿಳಿದ ತಕ್ಷಣ ಅಲ್ಲಿಗೆ ಬಂದ ರೈಲು ಬಳಕೆದಾರರ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪ್ರಯಾಣಿಕರಿಗೆ ಸೂಕ್ತ ಸಲಹೆ ನೀಡಿ ಬಸ್ಸಿನ ವ್ಯವಸ್ಥೆ ಮಾಡಿದರು ಎಂದು ತಿಳಿದು ಬಂದಿದೆ.

Tags:    

Similar News