Health Alert | ರೆಡ್ ವೆಲ್ವೆಟ್, ಬ್ಲಾಕ್ ಫಾರೆಸ್ಟ್ ಕೇಕ್ ಕ್ಯಾನ್ಸರ್‌ಕಾರಕ: ಸರ್ಕಾರದ ಎಚ್ಚರಿಕೆ
ಬೆಂಗಳೂರಿನ 12 ವಿಧದ ಕೇಕ್‌ಗಳು ಕ್ಯಾನ್ಸರ್‌ಗೆ ಕಾರಣವಾಗುವ ವಸ್ತುಗಳನ್ನು ಒಳಗೊಂಡಿರುವ ಅಂಶ ಇದೀಗ ಪತ್ತೆಯಾಗಿದ್ದು, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಕೇಕ್ ವಿಷಯದಲ್ಲಿ ಜನರು ಎಚ್ಚರಿಕೆ ವಹಿಸುವಂತೆ ಮುನ್ನೆಚ್ಚರಿಕೆ ನೀಡಿದೆ;
ಹುಟ್ಟುಹಬ್ಬದಿಂದ ಸಣ್ಣಪುಟ್ಟ ಖುಷಿ, ಸಂಭ್ರಮದ ಸಂದರ್ಭಗಳಲ್ಲೂ ಕೇಕ್ ಕತ್ತರಿಸಿ ಸಂಭ್ರಮಿಸುವುದು ಈಗ ವಾಡಿಕೆಯಾಗಿದೆ. ಆದರೆ ಅದೇ ಕೇಕ್‌ಗಳು ನಮ್ಮ ಆರೋಗ್ಯಕ್ಕೂ ಮಾರಕವಾಗಬಹುದು. ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಗೂ ಕಾರಣವಾಗಬಹುದು ಎಂಬ ಸಂಗತಿ ಈಗ ಬಯಲಾಗಿದೆ.
ಬೆಂಗಳೂರಿನಲ್ಲಿ ಸಂಗ್ರಹಿಸಿದ 12 ಮಾದರಿಯ ಕೇಕ್‌ಗಳು ಕ್ಯಾನ್ಸರ್‌ಗೆ ಕಾರಣವಾಗುವ ಅಪಾಯಕಾರಿ ವಸ್ತುಗಳನ್ನು ಒಳಗೊಂಡಿರುವ ಅಂಶ ಇದೀಗ ಪತ್ತೆಯಾಗಿದ್ದು, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಪರೀಕ್ಷೆಯಲ್ಲಿ ಬಹಿರಂಗ
ರಾಜ್ಯದಲ್ಲಿ ಬೇಕರಿಗಳು ತಯಾರಿಸುವ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುಗಳ ಬಳಕೆ ಬಗ್ಗೆ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ಬೆಂಗಳೂರಿನ ಹಲವಾರು ಬೇಕರಿಗಳ ಕೇಕ್‌ಗಳ ಮಾದರಿ ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ 12 ವಿವಿಧ ಕೇಕ್‌ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳಿವೆ ಎಂದು ತಿಳಿದುಬಂದಿದೆ.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಬೇಕರಿಗಳಿಗೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕೇಕ್‌ಗಳಲ್ಲಿ ಬಳಕೆಯಾಗುತ್ತಿರುವ ಕೃತಕ ಬಣ್ಣಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದಲ್ಲದೆ ವಿವಿಧ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಒತ್ತಿ ಹೇಳಿದೆ.
ರೆಡ್ ವೆಲ್ವೆಟ್, ಬ್ಲ್ಯಾಕ್ ಫಾರೆಸ್ಟ್‌ನಲ್ಲಿ ಕ್ಯಾನ್ಸರ್‌ಕಾರಕ ಪತ್ತೆ
ಈ ಆಘಾತಕಾರಿ ಸಂಗತಿಯು ಕೇಕ್ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಜನಪ್ರಿಯ ಕೇಕ್ ಪ್ಲೇವರ್‌ಗಳಾದ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್‌ಗಳಲ್ಲಿ ಜನರನ್ನು ಆಕರ್ಷಿಸಲು ಕೃತಕ ಬಣ್ಣಗಳನ್ನು ಯತೇಚ್ಛವಾಗಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಅಪಾಯ ತಂದೊಡ್ಡಲಿದೆ. ಅಂತಹ ಕೇಕ್‌ಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಕೃತಕ ಬಣ್ಣಗಳಾದ ಅಲ್ಲುರಾ ರೆಡ್, ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್, ಪೊನ್ಸೊ 4ಆರ್, ಟಾರ್ಟ್ರಾಜಿನ್ ಮತ್ತು ಕಾರ್ಮೊಯಿಸಿನ್ ಇರುವುದು ಕೇಕ್ ಮಾದರಿಯಗಳ ಪರೀಕ್ಷೆಯಲ್ಲಿ ಬಹಿರಂಗಗೊಂಡಿದೆ.