ಟೆಲಿಫೋನ್ ಕದ್ದಾಲಿಕೆ | ಕುಮಾರಸ್ವಾಮಿ ಆರೋಪಕ್ಕೆ ಡಿಕೆಶಿ ವ್ಯಂಗ್ಯ
ತಮ್ಮ ಸುತ್ತುಮುತ್ತಲಿನ ಸುಮಾರು 40 ಮಂದಿಯ ದೂರವಾಣಿಗಳನ್ನು ರಾಜ್ಯ ಸರ್ಕಾರ ಕದ್ದಾಲಿಸುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಕುಮಾರಸ್ವಾಮಿ ಅವರಲ್ಲಿ ಏನೋ ಸಮಸ್ಯೆ ಇರಬೇಕು" ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಅವರ ಟೆಲಿಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಮಂಗಳವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು , “ಕುಮಾರಸ್ವಾಮಿ ಅವರು ಹಿಂದೆ ಇಂತಹ ಹೀನಾಯ ಕೆಲಸಗಳನ್ನು ಮಾಡಿರಬೇಕು. ಅದಕ್ಕಾಗಿ ಅದನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದರು. ಆ ಮೂಲಕ ಹಿಂದೆ ಕುಮಾರಸ್ವಾಮಿ ಅವರು ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದರು ಎನ್ನಲಾದ ವಿಷಯದ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ,"ನನ್ನ ಸುತ್ತಮುತ್ತಲಿನ 40 ಜನರ ಫೋನ್‌ಗಳನ್ನು ರಾಜ್ಯ ಸರಕಾರ ಟ್ಯಾಪ್ ಮಾಡುತ್ತಿದೆ. ನನ್ನ ಸೋದರ ಎಚ್.ಡಿ. ರೇವಣ್ಣ ಅವರ ಫೋನ್ ಸೇರಿದಂತೆ ನನ್ನ ಸುತ್ತಮುತ್ತ ಇರುವ ಎಲ್ಲರ ಫೋನ್ ಗಳನ್ನೂ ಸರಕಾರ ಟ್ಯಾಪ್ ಮಾಡಿಸುತ್ತಿದೆ. ನನ್ನ ಫೋನ್ ಕೂಡ ಟ್ಯಾಪ್ ಆಗುತ್ತಿದೆ" ಎಂದು ದೂರಿದ್ದರು. "ರಾಜಕೀಯವಾಗಿ ನಮ್ಮ ಕುಟುಂಬವನ್ನು ಮುಗಿಸಲೇಬೇಕು ಎಂದು ಈ ಸರಕಾರ ತೀರ್ಮಾನಕ್ಕೆ ಬಂದಿದೆ. ಅದು ಆಡಿಯೋ ಟೇಪುಗಳಲ್ಲಿಯೇ ಬಯಲಾಗಿದೆ. ಹೀಗಾಗಿ ನಮ್ಮ ಕುಟುಂಬದ ಎಲ್ಲರ ಮೊಬೈಲ್ ಫೋನ್ ಗಳನ್ನು ಸರಕಾರ ಕದ್ದಾಲಿಕೆ ಮಾಡಿಸುತ್ತಿದೆ. ಯಾರನ್ನೂ ಇವರು ಬಿಟ್ಟಿಲ್ಲ, ಎಲ್ಲರ ಫೋನ್ ಟ್ಯಾಪ್ ಮಾಡುತ್ತಿದ್ದಾರೆ," ಎಂದು ಅವರು ಹೇಳಿದ್ದರು.
"ಫೋನ್ ಟ್ಯಾಪ್ ಮಾಡುವಂಥ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿಲ್ಲ" ಎಂದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ; "ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ ಡಿಕೆಶಿ ಹೇಳೋದು" ಎಂದು ಕುಮಾರಸ್ವಾಮಿ ಕಟಕಿಯಾಡಿದ್ದರು.
ಇದೇ ಮೊದಲಲ್ಲ!
"ಈ ಹಿಂದೆ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಅನ್ನು ಆಗಿನ ಕುಮಾರಸ್ವಾಮಿ ಸರ್ಕಾರ ಮಾಡಿತ್ತು ಮತ್ತು ಆ ಬಗ್ಗೆ ದಾಖಲೆಗಳೂ ಇವೆ" ಎನ್ನವ ಆರೋಪವನ್ನು ಕಳೆದ ಏಪ್ರಿಲ್‌ನಲ್ಲಿ ಡಿ.ಕೆ. ಶಿವಕುಮಾರ್ ಮಾಡಿದ್ದರು.
ಕುಮಾರಸ್ವಾಮಿ ಅವರು ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದರು ಎಂಬ ಸಚಿವ ಚೆಲುವರಾಯಸ್ವಾಮಿ ಆರೋಪಿಸಿದ್ದರು. ಆ ಬಗ್ಗೆ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್, "ಇದು ಗೊತ್ತಿರುವ ವಿಚಾರವೇ. ಈ ಬಗ್ಗೆ ಮಾತನಾಡಲು ನೋವಾಗುತ್ತದೆ. ಈ ವಿಚಾರವಾಗಿ ಎಲ್ಲಾ ದಾಖಲೆಗಳು ಇವೆ. ಆದರೂ ಈ ವಿಚಾರವನ್ನು ಈಗ ಮಾತನಾಡುವುದು ಸೂಕ್ತವಲ್ಲ, ಮುಂದೆ ಮಾತನಾಡುತ್ತೇನೆ" ಎಂದಿದ್ದರು.
ಇದೀಗ ಕುಮಾರಸ್ವಾಮಿ ಅವರ "ಫೋನ್ ಕದ್ದಾಲಿಕೆ" ಆರೋಪಕ್ಕೆ "ಅವರಲ್ಲೇನೋ ಸಮಸ್ಯೆಯಿದೆ" ಎಂದು ಲೇವಡಿ ಮಾಡಿದ್ದಾರೆ.