Karnataka By Election | ಕಟುಕರಿಗೆ ಕಣ್ಣೀರು ಬರದು; ನಿಖಿಲ್ ಟೀಕಿಸಿದ ಕಾಂಗ್ರೆಸ್ ನಾಯಕರ ಟೀಕೆಗೆ ಎಚ್‌ಡಿಕೆ ತಿರುಗೇಟು
ನಾನು ಕಣ್ಣೀರು ಸುರಿಸಿದ್ದು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಅಲ್ಲ. ಮಾತೃ ಹೃದಯ ಇರುವವರಿಗೆ ಸಹಜವಾಗಿಯೇ ಜನರ ಕಷ್ಟ ನೋಡಿ ಕಣ್ಣೀರು ಬರುತ್ತದೆ.
ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮತಯಾಚನೆ ವೇಳೆ ಕಣ್ಣೀರು ಹಾಕಿದ್ದನ್ನು ಟೀಕಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ಮಾರ್ಮಿಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯ ರಾಜಕಾರಣದಲ್ಲಿ ಕೆಲವು ಕಟುಕರಿಗೆ ಕಣ್ಣೀರು ಬರುವುದಿಲ್ಲ. ಭಯ ಭಕ್ತಿ ಇಲ್ಲದ ಅವರಿಗೆ ಕಣ್ಣೀರು ಬರದು. ನಮಗೆ ಜನರ ಬವಣೆ, ಕಷ್ಟ ನೋಡಿದರೆ ಕಣ್ಣೀರು ಬರುತ್ತದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಜನರ ಕಷ್ಟ ನೋಡಿ ಹಲವು ಬಾರಿ ಕಣ್ಣೀರು ಹಾಕಿದ್ದೇನೆ. ನಾನು ಕಣ್ಣೀರು ಸುರಿಸಿದ್ದು ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಅಲ್ಲ. ಮಾತೃ ಹೃದಯ ಇರುವವರಿಗೆ ಸಹಜವಾಗಿಯೇ ಜನರ ಕಷ್ಟ ನೋಡಿ ಕಣ್ಣೀರು ಬರುತ್ತದೆ. ಆದರೆ, ಆ ಮಾತೃ ಹೃದಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ಜನರ ಕಷ್ಟ ಆಲಿಸುವ ಸೌಜನ್ಯವೂ ಇಲ್ಲ ಎಂದು ಟೀಕಿಸಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಖಿಲ್ ಮೇಲಿದೆ. ಚನ್ನಪಟ್ಟಣದಲ್ಲಿ ಚಕ್ರವ್ಯೂಹ ರಚಿಸಲು ಕೆಲ ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪಕ್ಷದ ಚಟುವಟಿಕೆಗಳಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಅವರು ದೂರ ಉಳಿದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿವೆ. ಹಾಗಾಗಿ ಉಪ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಆಗಿಲ್ಲ. ಜಿ.ಟಿ. ದೇವೇಗೌಡರ ವಿಚಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ನಿಮಗೇ ಗೊತ್ತಿದೆ. ಅದನ್ನೇಕೆ ಮತ್ತೆ ನನ್ನ ಬಾಯಲ್ಲಿ ಹೇಳಿಸುತ್ತೀರಿ. ಈ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರನ್ನು ಪುಡಾರಿ ಎಂದು ಕರೆದಿರುವ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಬಳಸಿರುವ ಭಾಷೆ ನೋಡಿ ಆವರನ್ನೂ ಅದೇ ರೀತಿ ಕರೆಯಬಹುದಲ್ಲವೇ ಎಂದರು.
ದೀಪಕ್ಕೆ ಸಿಲುಕಿದ ಪತಂಗದಂತೆ
ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಸ್ಥಿತಿಯು ದೀಪಕ್ಕೆ ಸಿಲುಕಿದ ಪತಂಗದಂತಾಗಿದೆ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಇದೆ. ಮುಡಾ, ವಾಲ್ಮೀಕಿ, ವಕ್ಫ್ ಸೇರಿದಂತೆ ಎಲ್ಲದರಲ್ಲೂ ತಪ್ಪಿನ ಮೇಲೆ ತಪ್ಪು ನಡೆಯುತ್ತಿದೆ. ಆದರೆ, ಈ ವಿಚಾರಗಳು ಉಪಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಈ ಚುನಾವಣೆಯಲ್ಲಿ ಹಣ ಬಲ, ತೋಳ್ಬಲ, ಅಧಿಕಾರ ದುರಪಯೋಗ ಇರುತ್ತದೆ. ಆದರೂ ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.