Haveri Accident | ಲಾರಿ ಪಾರ್ಕಿಂಗ್‌ ಲೋಪವೇ ದುರಂತಕ್ಕೆ ಕಾರಣ: ಹೆಚ್‌ ಡಿ ಕುಮಾರಸ್ವಾಮಿ

Update: 2024-06-28 08:25 GMT

ಹದಿಮೂರು ಮಂದಿಯನ್ನು ಬಲಿತೆಗೆದುಕೊಂಡಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಶುಕ್ರವಾರ ಬೆಳಗಿನಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಮನಸೋಇಚ್ಛೆ ಪಾರ್ಕ್‌ ಮಾಡಿದ್ದೇ ದುರಂತದ ಕಾರಣ ಎಂದು ಹೇಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕುಮಾರಸ್ವಾಮಿ ಅವರು, ʻʻಹಾವೇರಿ ಜಿಲ್ಲೆಯ ಬ್ಯಾಡಗಿ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 13 ಜನ ದುರ್ಮರಣ ಹೊಂದಿರುವ ಸುದ್ದಿ ಕೇಳಿ ನನಗೆ ತೀವ್ರ ದುಃಖ ಉಂಟಾಗಿದೆ. ತಾಯಿ ಸವದತ್ತಿ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಈ ದುರಂತ ಸಂಭವಿಸಿದೆ. ಮೃತಪಟ್ಟ ಎಲ್ಲರ ಆತ್ಮಕ್ಕೂ ಚಿರಶಾಂತಿ ಸಿಗಲಿ ಹಾಗೂ ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜ್ಯ ಸರಕಾರವು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕುʼʼ ಎಂದು ಹೇಳಿದ್ದಾರೆ.

ʻʻಲಾರಿ ಚಾಲಕನ ದೋಷಪೂರಿತ ಪಾರ್ಕಿಂಗ್ ಅಪಘಾತಕ್ಕೆ ಕಾರಣ ಎಂದು ಹಾವೇರಿ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. ಚಾಲಕರು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈ ಬಗ್ಗೆ ತೋರುವ ನಿರ್ಲಕ್ಷ್ಯ ಜೀವಕ್ಕೆ ಎರವಾಗುತ್ತಿರುವುದು ನೋವಿನ ಸಂಗತಿ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿʼʼ ಎಂದು ಆಗ್ರಹಿಸಿದ್ದಾರೆ.

ಹಾವೇರಿಯ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಕೂಡ ಘಟನೆಗೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಇಂದು ಬೆಳಗಿನ ಜಾವ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಳ್ಳಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ 13 ಜನರು ಸಾವಿಗೀಡಾಗಿರುವ ಸುದ್ದಿ ಕೇಳಿ ಆಘಾತವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆʼʼ ಎಂದಿದ್ದಾರೆ.

ʻʻರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ‌ ನೀಡಬೇಕು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕುʼʼ ಎಂದು ಬೊಮ್ಮಾಯಿ ಅವರು ಆಗ್ರಹಿಸುತ್ತೇನೆ.

ಘಟನೆ ವಿವರ

ರಸ್ತೆಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಟೆಂಪೋ ಟ್ರಾವೆಲ್ಲರ್ (ಟಿಟಿ) ಡಿಕ್ಕಿ ಹೊಡೆದು ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಒಂದೇ ಕುಟುಂಬದ 13 ಜನರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಶುಕ್ರವಾರ ಬೆಳಗಿನಜಾವ ನಡೆದಿದೆ.

ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು ಎಂದು ಗುರುತಿಸಲಾಗಿದೆ. ಪೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ‌ ನಿಂತಿದ್ದ ಲಾರಿಗೆ ಅತಿವೇಗದಲ್ಲಿ ಬಂದ ಟಿಟಿ, ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟಿಟಿಯಲ್ಲಿದ್ದವರ ಪೈಕಿ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಟಿಟಿಯಲ್ಲಿದ್ದವರ ದೇಹಗಳು ನಜ್ಜುಗುಜ್ಜಾಗಿದ್ದು ವಾಹನದ ಭಾಗಗಳಿಗೆ ಅಂಟಿಕೊಂಡಿವೆ.

Tags:    

Similar News