15 ಲಕ್ಷ ರೂ. ಪರಿಹಾರದ ದುರಾಸೆ ; ಗಂಡನಿಗೆ ವಿಷ ಉಣಿಸಿ ಕೊಂದ ಪತ್ನಿಯ ನಾಟಕ ಬಯಲು !
ನಾಗರಹೊಳೆ ಉದ್ಯಾನವನದ ಅಂಚಿನಲ್ಲಿರುವ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ವೆಂಕಟಸ್ವಾಮಿ (45) ಕೊಲೆಯಾದ ದುರ್ದೈವಿ. ಈತನ ಪತ್ನಿ ಸೊಲ್ಲಾಪುರಿಯನ್ನು ಪೊಲೀಸರು ಬಂಧಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ಅರಣ್ಯ ಇಲಾಖೆಯಲ್ಲಿ ಕಾವಲುಗಾರನಾಗಿರುವ ಪತಿ ಸತ್ತರೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ, ಇದರಿಂದ ಮನೆ ಕಟ್ಟಲು ಮಾಡಿರುವ ಸಾಲ ತೀರಲಿದೆ ಎಂಬ ಯೋಜಿಸಿದ ಮಹಿಳೆಯೊಬ್ಬರು ಪತಿಗೆ ವಿಷವುಣಿಸಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಹುಣಸೂರಿನ ಚಿಕ್ಕ ಹೆದ್ದೂರು ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ಉದ್ಯಾನವನ ಅಂಚಿನಲ್ಲಿರುವ ಅರಣ್ಯ ಇಲಾಖೆ ತೋಟದಲ್ಲಿ ಮಂಡ್ಯ ಮೂಲದ ವೆಂಕಟಸ್ವಾಮಿ (45) ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ವೆಂಕಟಸ್ವಾಮಿ ಹಾಗೂ ಸೊಲ್ಲಾಪುರಿ ದಂಪತಿಯು ತಮ್ಮ ಸ್ವಗ್ರಾಮವಾದ ಚಿಕ್ಕ ಹೆದ್ದೂರು ಗ್ರಾಮದಲ್ಲಿ ಮನೆ ಕಟ್ಟಲು 15 ಲಕ್ಷ ರೂ. ಸಾಲ ಮಾಡಿದ್ದರು. ಈ ಸಾಲದ ವಿಚಾರವಾಗಿ ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ವನ್ಯಜೀವಿ ದಾಳಿಗೆ ಒಳಗಾಗಿ ಮೃತಪಟ್ಟವರಿಗೆ ಸರ್ಕಾರದಿಂದ 15 ಲಕ್ಷ ರೂ.ಪರಿಹಾರ ಸಿಗಲಿದೆ ಎಂಬ ಮಾಹಿತಿ ಪಡೆದ ವೆಂಕಟಸ್ವಾಮಿ ಪತ್ನಿ ಸೊಲ್ಲಾಪುರಿ ಅವರು, ಪತಿಯ ಹತ್ಯೆಗೆ ಯೋಜನೆ ರೂಪಿಸಿದ್ದಳು. ಮಂಗಳವಾರ ರಾತ್ರಿ ಕುಡಿದು ಮನೆಗೆ ಬಂದ ಪತಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಬೆರೆಸಿ ಊಟ ಮಾಡಿಸಿದ್ದಾಳೆ. ಆತ ಮೃತಪಟ್ಟ ನಂತರ ಪ್ರಕರಣವನ್ನು ವನ್ಯಜೀವಿ ದಾಳಿ ಎಂದು ಬಿಂಬಿಸುವ ಸಲುವಾಗಿ ಶವವನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಲು ಯತ್ನಿಸಿದ್ದಾಳೆ. ಆದರೆ, ಶವ ಅರೆಬರೆ ಬೆಂದಿದ್ದನ್ನು ಕಂಡು ಗಾಬರಿಗೊಂಡ ಆಕೆ, ಅದನ್ನು ತಿಪ್ಪೆಯಲ್ಲಿ ಮುಚ್ಚಿಹಾಕಿ, "ನನ್ನ ಗಂಡ ನಾಪತ್ತೆಯಾಗಿದ್ದಾನೆ. ಯಾವುದೋ ಕಾಡುಪ್ರಾಣಿ ಎಳೆದೊಯ್ದಿರಬಹುದು" ಎಂದು ಪೊಲೀಸರಿಗೆ ದೂರು ನೀಡಿದ್ದಳು.
ನಾಟಕ ಬಯಲಾಗಿದ್ದು ಹೇಗೆ?
ದೂರಿನನ್ವಯ ಸ್ಥಳ ಪರಿಶೀಲನೆಗೆ ಬಂದ ಪೊಲೀಸರಿಗೆ ವೆಂಕಟಸ್ವಾಮಿ ಪತ್ನಿ ಸೊಲ್ಲಾಪುರಿಯ ವರ್ತನೆಯಿಂದ ಅನುಮಾನ ಬಂದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾಳೆ. ಸಾಲ ತೀರಿಸುವ ಸಲುವಾಗಿ ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹಿಳೆ ಸೊಲ್ಲಾಪುರಿಯನ್ನು ಬಂಧಿಸಿದ್ದಾರೆ.