2011ರ ನಂತರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚ್ಯುಟಿ : ಸರ್ಕಾರದ ಚಿಂತನೆ

2011ರ ನಂತರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚ್ಯುಟಿ ನೀಡುವ ಸಂಬಂಧ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ ನೀಡಿದ್ದಾರೆ.;

Update: 2025-03-21 01:00 GMT

2011ರ ನಂತರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚ್ಯುಟಿ ನೀಡುವ ಸಂಬಂಧ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌  ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ 2011ರ ನಂತರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರ್ಯಾಚ್ಯುಟಿ ಪಾವತಿ ಮಾಡುವ ಕುರಿತು, ಅಂಗನವಾಡಿಯ ವಿವಿಧ ಸಂಘಟನೆಗಳೊಂದಿಗೆ ಅವರು ಗುರುವಾರ ಚರ್ಚೆ ನಡೆಸಿದರು.

ಗೌರವಧನ ಹೆಚ್ಚಳ, ನಿವೃತ್ತಿಯಾದ ಎಲ್ಲರಿಗೂ ಗ್ರ್ಯಾಚುಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹಿತಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ‌ ಜೊತೆ ಚರ್ಚೆ ನಡೆಸಿ‌‌ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಹಿತಕಾಯಲು ಸದಾ ಬದ್ಧವಾಗಿದೆ," ಎಂದರು.

ಈಗಾಗಲೇ ಸರ್ಕಾರ 2023-24ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ನಿವೃತ್ತಿ ಬಳಿಕ ಗ್ರ್ಯಾಚ್ಯುಟಿಗೆ ಆಡಳಿತಾತ್ಮಕ ಅನುಮತಿ ನೀಡಲಾಗಿದೆ. ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಸಂಘಟನೆಗಳ ಬೇಡಿಕೆಯಂತೆ 2011ರಿಂದ ಗ್ರ್ಯಾಚ್ಯುಟಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.


ಸಭೆಯಲ್ಲಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ‌ಬಿ.ಎಚ್‌.ನಿಶ್ಚಲ್, ಇಲಾಖೆಯ ನಿರ್ದೇಶಕರಾದ ರಾಘವೇಂದ್ರ, ಎಐಟಿಯುಸಿ ಅಂಗನವಾಡಿ ಸಂಘಟನೆಯ ಅಧ್ಯಕ್ಷರಾದ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಅಂಗನವಾಡಿ ನೌಕರರ‌ ಸಂಘದ ರಾಜ್ಯಾಧ್ಯಕ್ಷರಾದ ವರಲಕ್ಷ್ಮೀ, ಟಿಯುಸಿಸಿ ನೇತೃತ್ವದ ಅಂಗನವಾಡಿ ಸಂಘಟನೆಯ ಅಧ್ಯಕ್ಷ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ನಾಗರತ್ನ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Tags:    

Similar News