ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ತನಿಖೆಗೆ ಸರ್ಕಾರದಿಂದ ಸಮಿತಿ ರಚನೆ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳ ಸಮಿತಿ ರಚಿಸಿ ಕನ್ನಡ ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.;
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳ ಸಮಿತಿ ರಚಿಸಿ ಕನ್ನಡ ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಶಾಖೆಯ ಜಂಟಿ ನಿರ್ದೇಶಕರು, ಬೆಂಗಳೂರು ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರು, ಲೆಕ್ಕಾಧಿಕಾರಿ ಹಾಗೂ ಪತ್ರಾಂಕಿತ ವ್ಯವಸ್ಥಾಪಕರನ್ನೊಳಗೊಂಡು ಆರು ಮಂದಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವಧಿಯಲ್ಲಿ ಅನೇಕ ಹಣಕಾಸಿನ ಅವ್ಯವಹಾರ ಹಾಗೂ ಕಸಾಪ ಸದಸ್ಯರಿಗೆ ವಿನಾಕಾರಣ ನೋಟಿಸ್ ನೀಡಿ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, 30 ದಿನಗಳಲ್ಲಿ ತನಿಖಾ ವರದಿ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯ ದರ್ಜೆ ಸಚಿವ ಸ್ಥಾನಮಾನ ರದ್ದು
ಮಹೇಶ್ ಜೋಶಿ ಅವರಿಗೆ ನೀಡಿದ್ದ ರಾಜ್ಯ ದರ್ಜೆ ಸಚಿವ ಸ್ಥಾನಮಾನವನ್ನು ವ್ಯಾಪಕ ವಿರೋಧ ಹಾಗೂ ಅರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ವಾಪಸ್ ಪಡೆದಿತ್ತು. ಅದಾದ ಬಳಿಕ ಪ್ರಗತಿಪರ ಸಾಹಿತಿಗಳು, ಚಿಂತಕರು ಹಾಗೂ ಮಂಡ್ಯ ಭಾಗದ ಸಾಹಿತ್ಯಾಭಿಮಾನಿಗಳು ಸಂಭ್ರಮಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಬೈಲಾ ತಿದ್ದುಪಡಿ ಸೇರಿದಂತೆ ಹಲವು ಬದಲಾವಣೆಗಳಿಗೆ ಮುಂದಡಿ ಇಟ್ಟು ಸಾಹಿತಿಗಳ ವಿರೋಧಕ್ಕೆ ಕಾರಣವಾಗಿದ್ದರು. ಹಲವು ಪ್ರಗತಿ ಪರ ಸಾಹಿತಿಗಳು ಮಹೇಶ್ ಜೋಷಿ ತಂದಿರುವ ತಿದ್ದುಪಡಿಗಳನ್ನು ತಿರಸ್ಕರಿಸಿ, ಅವರಿಗೆ ನೀಡಿರುವ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆಯುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಕಸಾಪ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಂಘ ಪರಿವಾರದ ನಿಲುವುಗಳನ್ನು ಕಸಾಪದ ಸಂಘಟನೆಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಕನ್ನಡದ ಸಾರಸ್ವತ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಹೋರಾಟಗಾರರು ಮಹೇಶ್ ಜೋಶಿ ಪದಚ್ಯುತಿಗೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಈಗ ಸರ್ಕಾರ ಅವರಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಿಂಪಡೆದಿರುವುದರಿಂದ ಸಾಹಿತಿಗಳಿಗೆ ಜಯ ಸಿಕ್ಕಂತಾಗಿತ್ತು.
ಸಾಹಿತಿಗಳಿಂದ ಜನಾಂದೋಲನ
ಮಹೇಶ್ ಜೋಶಿ ವಿರುದ್ಧ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಾಹಿತಿಗಳು ಬೃಹತ್ ಜನಾಂದೋಲನ ರೂಪಿಸಿದ್ದರು. ಅಲ್ಲದೇ ಕಸಾಪ ಅಧ್ಯಕ್ಷರನ್ನು ಆರ್ಥಿಕ ಅಶಿಸ್ತಿಗೆ ಸಂಬಂಧಿಸಿ ವಿಚಾರಣೆ ನಡೆಸುವಂತೆಯೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.
ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಸೇರಿದಂತೆ ಹಲವರು ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವಾಧಿಕಾರಿಯ ಕಪಿಮುಷ್ಠಿಯಿಂದ ರಕ್ಷಿಸುವಂತೆ ಒತ್ತಾಯಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಲಂಗು ಲಗಾಮಿಲ್ಲದೇ ಓಡುವ ಹುಚ್ಚು ಕುದುರೆಯಂತಾಗಿದೆ. ಅಧ್ಯಕ್ಷರು ಸಾಹಿತ್ಯ ಚಟುವಟಿಕೆ ಬಿಟ್ಟು ಆಜೀವ ಸದಸ್ಯರು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಮೇಲೆ ಕ್ರಮ ಜರುಗಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಾಹಿತಿಗಳ ವಿರೋಧಕ್ಕೆ ಕಾರಣವೇನು?
ಪರಿಷತ್ತಿನ ಬೈಲಾವನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿಕೊಂಡಿದ್ದರು ಏಂಬ ಆರೋಪ ಕೇಳಿ ಬಂದಿತ್ತು. ಸಾಹಿತ್ಯ ಪರಿಷತ್ತು ಮೋಜು ಮತ್ತು ಲೂಟಿ ಮಾಡುವ ಕೇಂದ್ರವಾಗಿದೆ. ಪರಿಷತ್ತಿನ ಅಧ್ಯಕ್ಷರ ಅವಧಿಯನ್ನು 5 ವರ್ಷದ ಬದಲಾಗಿ 3 ವರ್ಷಕ್ಕೆ ಇಳಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಕಸಾಪ ಅಧ್ಯಕ್ಷರ ಆಡಳಿತ ಅವಧಿಯಲ್ಲಿ ಮಾಡಲಾಗಿರುವ 2 ತಿದ್ದುಪಡಿಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ನಿರ್ಣಯ ಕೈಗೊಂಡಿದ್ದ ಸಮಾನ ಮನಸ್ಕರ ಒಕ್ಕೂಟ
ಕಸಾಪ ಅಧ್ಯಕ್ಷರ ಆರ್ಥಿಕ ಅಶಿಸ್ತು ಹಾಗೂ ಸಮ್ಮೇಳನಗಳ ಹಣ ದುರುಪಯೋಗದ ಬಗ್ಗೆ ವಿಚಾರಣೆ ನಡೆಸಿ, ಸರ್ವಾಧಿಕಾರದ ಅಧಿಕಾರ ನಡೆಸುತ್ತಿರುವ ಅಧ್ಯಕ್ಷಗಿರಿ ಅಮಾನತ್ತಿನಲ್ಲಿಟ್ಟು, ಆಡಳಿತಾಧಿಕಾರಿ ನೇಮಿಸಬೇಕು. ಅಧ್ಯಕ್ಷರಿಗೆ ಹಿಂದಿನ ಸರ್ಕಾರ ಕೊಟ್ಟಿರುವ ಸಂಪುಟ ದರ್ಜೆ ಸ್ಥಾನಮಾನ ತಕ್ಷಣ ಹಿಂಪಡೆಯಬೇಕು.
ಹಿಂದೆ ಆಗಿರುವ ಬೈಲಾಗಳಿಗೆ ಆಗಿರುವ ಎರಡು ತಿದ್ದುಪಡಿಗಳನ್ನು ರದ್ದುಪಡಿಸಬೇಕು. ಅಮಾನತು ಮಾಡಿರುವ ಕೆಲ ಆಜೀವ ಸದಸ್ಯರ ಸದಸ್ಯತ್ವವನ್ನು ವಾಪಸು ಪಡೆಯಬೇಕು.
ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ 40 ಕೋಟಿ ರೂ.ಕೇಳಲಾಗಿದ್ದು, ಅಷ್ಟು ದೊಡ್ಡ ಮೊತ್ತ ತೆರಿಗೆದಾರರ ಹಣವಾದ್ದರಿಂದ ಸರ್ಕಾರ ಹಣ ನೀಡುವ ಅಗತ್ಯ ಇಲ್ಲ. ಪರಿಷತ್ ಹಣ ಕ್ರೋಢೀಕರಣ ಮಾಡಿಕೊಂಡೇ ಸರಳವಾಗಿ ಸಮ್ಮೇಳನ ನಡೆಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.