Mysore MUDA Case | ಮುಡಾ ಮಾಜಿ ಆಯುಕ್ತರು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ
Mysore MUDA Case ಮುಡಾ ನಿವೇಶನ ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿರುವ ಮುಡಾ ಮಾಜಿ ಆಯುಕ್ತ ಮತ್ತು ಇತರ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.;
ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ.
ಈಗಾಗಲೇ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿ ಅವರಿಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಡಿ ನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಮುಡಾದ ಮಾಜಿ ಆಯುಕ್ತ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚನೆ ನೀಡಿದೆ.
ಮುಡಾ ಅಕ್ರಮ ಹಂಚಿಕೆಯಲ್ಲಿ ಭಾಗಿಯಾಗಿರುವ ಮುಡಾ ಮಾಜಿ ಆಯುಕ್ತ ಮತ್ತು ಇತರ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ರಾಜ್ಯ ಸರ್ಕಾರ ನಿರ್ದೇಶನ ನೀಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
2025ರ ಜ.10ರಂದು ಬರೆದ ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಲತಾ ಅವರು ಮುಡಾ ಆಯುಕ್ತ ಎ.ಎನ್.ರಘುನಂದನ್ ಅವರಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ನಿರ್ದೇಶನವು ಹಿಂದಿನ ಕಮಿಷನರ್ ಹಾಗೂ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ - ಅವರ ಹೆಸರು, ಹುದ್ದೆ, ಅವರು ಸೇವೆ ಸಲ್ಲಿಸಿದ ವಿಭಾಗ, ಜವಾಬ್ದಾರಿಗಳು, ಪೋಷಕ ಇಲಾಖೆ ಮುಂತಾದ ಎಲ್ಲಾ ವಿವರಗಳೊಂದಿಗೆ - ಮೂರು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಹೇಳಲಾಗಿದೆ.
ಮಾಜಿ ಮುಡಾ ಆಯುಕ್ತ ಜಿಟಿ ದಿನೇಶ್ ಕುಮಾರ್, ಮಾರ್ಚ್ 18, 2023 ರಂದು, ಒಟ್ಟು 75,225 ಚದರ ಅಡಿ ನಿವೇಶನಗಳನ್ನು ಮಂಜೂರು ಮಾಡಿ ಎರಡು ಆದೇಶಗಳನ್ನು ಹೊರಡಿಸಿದ್ದರು. ವಿವಿಧ ಪ್ರದೇಶಗಳಲ್ಲಿ ಕ್ಯಾಥೆಡ್ರಲ್ ಪ್ಯಾರಿಷ್ ಸೊಸೈಟಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಸೆಕ್ಷನ್ 2 (ಡಿ) ಮತ್ತು 3 ರ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲಿಗೆ ನಿವೇಶನಗಳ ಹಂಚಿಕೆ ಮಾಡಲಾಗಿದೆ.
ಮೈಸೂರು ತಾಲೂಕಿನ ಕಸಬಾ ಹೋಬಳಿಯ ದೇವನೂರು ಗ್ರಾಮದ ಸರ್ವೆ ನಂ.180ರಲ್ಲಿ 5.02 ಎಕರೆ ಹಾಗೂ ಕಸಬಾ ಹೋಬಳಿಯ ಸರ್ವೆ ನಂ.182ರಲ್ಲಿ 2.09 ಎಕರೆ ಭೂಮಿಯನ್ನು ಮುಡಾದಿಂದ ವಸತಿ ಬಡಾವಣೆ, ಉದ್ಯಾನವನ ಹಾಗೂ ಹೊರವರ್ತುಲ ರಸ್ತೆಗಾಗಿ ಔಪಚಾರಿಕವಾಗಿ ಸ್ವಾಧೀನಪಡಿಸಿಕೊಂಡು ಹಣ ಪಾವತಿಸದೆಯೇ ಪರಿಹಾರ ನೀಡಲಾಗಿದೆ.
ಸರ್ಕಾರ ಸೂಕ್ತ ಮಂಜೂರಾತಿ ಪಡೆಯದೆ ಸೊಸೈಟಿಗೆ ಇಷ್ಟೊಂದು ದೊಡ್ಡ ಪ್ರಮಾಣದ ನಿವೇಶನಗಳನ್ನು ಮಂಜೂರು ಮಾಡಿರುವುದು ಸದರಿ ಸೊಸೈಟಿಗೆ ಅನುಕೂಲ ಮಾಡಿಕೊಡುವ ಸ್ಪಷ್ಟ ಉದ್ದೇಶದಿಂದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧೀನ ಕಾರ್ಯದರ್ಶಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.