Caste Census |ಸಮೀಕ್ಷೆಯೋ; ಜಾತಿಗಣತಿಯೋ? ಸ್ಪಷ್ಟತೆಯ ಕೊರತೆ; ಕಾನೂನು ತಜ್ಞರ ಮೊರೆ ಹೋದ ಸಿಎಂ
ಕೇಂದ್ರ ಸರ್ಕಾರ ಜಾತಿ ಜನಗಣತಿ ಸಮೀಕ್ಷೆ ನಡೆಸಿದರೆ ರಾಜ್ಯದ ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಏನಾಗಲಿದೆ, ಹಿಂದುಳಿದ ವರ್ಗಗಳ ಒತ್ತಡ ಹಾಗೂ ಪ್ರಬಲ ಸಮುದಾಯಗಳ ವಿರೋಧದ ಮಧ್ಯೆ ವರದಿ ಜಾರಿಗೆ ಸಿಎಂ ಮನಸ್ಸು ಮಾಡಲಿದ್ದಾರೆಯೇ ಎಂಬ ಪ್ರಶ್ನೆಗಳು ಚರ್ಚೆಗೆ ಒಳಗಾಗಿವೆ.;
ಕೇಂದ್ರ ಸರ್ಕಾರ ಜಾತಿವಾರು ಜನಗಣತಿಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿಗಣತಿ ವರದಿ ಜಾರಿ, ರಾಜ್ಯ ಸರ್ಕಾರಕ್ಕೆ ದೊಡ್ಡ ಸಂಕಷ್ಟವಾಗಿದೆ.
ಕೇಂದ್ರ ಸರ್ಕಾರ ಜಾತಿ ಜನಗಣತಿ ಸಮೀಕ್ಷೆ ನಡೆಸಿದರೆ ರಾಜ್ಯದ ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಏನಾಗಲಿದೆ, ಹಿಂದುಳಿದ ವರ್ಗಗಳ ಒತ್ತಡ ಹಾಗೂ ಪ್ರಬಲ ಸಮುದಾಯಗಳ ವಿರೋಧದ ಮಧ್ಯೆ ವರದಿ ಜಾರಿಗೆ ಸಿಎಂ ಮನಸ್ಸು ಮಾಡಲಿದ್ದಾರೆಯೇ, ಸರ್ಕಾರದ ಮುಂದಿರುವ ರಾಜಕೀಯ ಹಾಗೂ ಕಾನೂನಾತ್ಮಕ ಸಮಸ್ಯೆಗಳೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಎಲ್ಲಾ ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ವರದಿ ಜಾರಿ ಸಂಬಂಧ ಕೈಗೊಳ್ಳಬೇಕಾಗಿರುವ ಮುಂದಿನ ಕ್ರಮಗಳು ಹಾಗೂ ನಿರ್ಧಾರದ ಬಗ್ಗೆ ಆಪ್ತರು ಹಾಗೂ ಕಾನೂನು ತಜ್ಞರ ಅಭಿಪ್ರಾಯ ಆಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಸಮೀಕ್ಷೆ ನಡೆದು ಬಂದ ದಾರಿ
2015ರಲ್ಲಿ ಎಚ್.ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಿತ್ತು. 2018 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಆಯೋಗದ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದ ಕಾರಣ ವರದಿ ಸ್ವೀಕಾರವಾಗಿರಲಿಲ್ಲ. ಆಯೋಗದ ಅಧ್ಯಕ್ಷರಾಗಿ ನೇಮಕವಾದ ಜಯಪ್ರಕಾಶ್ ಹೆಗ್ಡೆ ಅವರು ಮೂಲ ಪ್ರತಿ ನಾಪತ್ತೆಯಾಗಿರುವ ಕುರಿತು ಪ್ರಸ್ತಾಪಿಸಿದ್ದರು.ಇದು ವಿವಾದಕ್ಕೂ ಕಾರಣವಾಗಿತ್ತು. ಜಯಪ್ರಕಾಶ್ ಹೆಗ್ಡೆ ಅವರು 2024 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈಗ ಆ ವರದಿ ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದಿದೆ. ಆದರೆ, ವರದಿ ವಿಳಂಬ ಹಿನ್ನೆಲೆಯಲ್ಲಿ ಅಂಕಿ ಅಂಶಗಳ ಬಗ್ಗೆ ಹಲವು ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಅಂಗೀಕಾರ ಕಗ್ಗಂಟಾಗಿದೆ.
ಇನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಗೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ನಾಯಕರಲ್ಲೇ ಅಪಸ್ವರಗಳು ಕೇಳಿ ಬರುತ್ತಿವೆ. ಆದರೆ, ವರದಿ ಜಾರಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಕಾರಣ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಜಾರಿಯ ಸಂಕಷ್ಟ ಎದುರಾಗಿದೆ.
ಗಣತಿಯೋ, ಸಮೀಕ್ಷೆಯೋ?
ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಸ್ಪಷ್ಟತೆ ಇಲ್ಲದಿರುವುದು ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿ ಎಂದು ಹೇಳುತ್ತಿದೆ. ಆದರೆ, ಜಾತಿವಾರು ಜನಸಂಖ್ಯೆ ಬಹಿರಂಗಪಡಿಸಿರುವುದರಿಂದ ಇದು ಜಾತಿಗಣತಿ ಎಂಬುದು ಪ್ರತಿಪಕ್ಷಗಳು ಸೇರಿದಂತೆ ವಿವಿಧ ಸಮುದಾಯಗಳ ವ್ಯಾಖ್ಯಾನವಾಗಿದೆ. ಈ ಮಧ್ಯೆ, ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ನಿರ್ಧರಿಸಿರುವುದು ಸದ್ಯದ ಮಟ್ಟಿಗೆ ರಾಜ್ಯ ಸರ್ಕಾರಕ್ಕೂ ಆತಂಕ ತಂದೊಡ್ಡಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಲ್ಲೂ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅರ್ಥಾತ್ ಜಾತಿಗಣತಿ ವರದಿ ಕುರಿತಂತೆ ಸ್ಪಷ್ಟತೆಯ ಕೊರತೆ ಎದುರಾಗಿದ್ದು, ಸಮಾಲೋಚನೆಯಲ್ಲಿ ತೊಡಗಿದ್ದಾರೆ.
ಒಂದು ವೇಳೆ ರಾಜ್ಯ ಸರ್ಕಾರವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿಯನ್ನು ಜಾತಿಗಣತಿಯಲ್ಲ ಎಂದು ಹೇಳುವುದಾದರೆ ಜಾತಿವಾರು ಜನಸಂಖ್ಯೆಯ ಮಾಹಿತಿ ಬಹಿರಂಗಪಡಿಸಿದ್ದೇಕೆ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಏಕೆ ಮುನ್ನೆಲೆಗೆ ತರಲಿಲ್ಲ ಎಂಬ ಪ್ರಶ್ನೆಗಳಿಗೂ ಉತ್ತರಿಸಬೇಕಾಗುತ್ತದೆ. ಸಂವಿಧಾನದ ಪರಿಚ್ಛೇದ 15(4) ರಡಿ ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ, ಈ ಪರಿಚ್ಛೇಧದ ಅಡಿ ಆರ್ಥಿಕ ಸಮೀಕ್ಷೆ ಸಾಧ್ಯತೆ ಎಂಬ ಪ್ರಶ್ನೆ ಎದ್ದಿದ್ದು, ಚರ್ಚೆಗೆ ಗ್ರಾಸವಾಗಿದೆ.
15(4) ಏನು ಹೇಳುವುದೇನು?
ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಸಂಪುಟದಲ್ಲಿ ಮಂಡನೆಯಾಗಿದೆ. ಈ ವರದಿಯಲ್ಲಿರುವ ಜಾತಿಗಳ ಮಾಹಿತಿ ಈಗಾಗಲೇ ಸೋರಿಕೆಯಾಗಿದೆ. ಪರಿಚ್ಛೇದ 15(4) ರಡಿಯಲ್ಲಿ ಸರ್ಕಾರ ಸಮೀಕ್ಷೆ ನಡೆಸಿದೆ. ತಾಂತ್ರಿಕವಾಗಿ ನೋಡುವುದಾದರೆ 15(4) ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಮಾತ್ರ ಸಿದ್ದಪಡಿಸಬಹುದು. 15( 6) ಪ್ರಕಾರ ಆರ್ಥಿಕ ಸಮೀಕ್ಷೆ ಮಾಡಬಹುದು. ಸರ್ಕಾರವೇ ಹೇಳುವಂತೆ ಸಮೀಕ್ಷೆಯು ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯಾಗಿದೆ. ಹೀಗಿರುವಾಗ ಆರ್ಥಿಕ ಸಮೀಕ್ಷೆಗೆ ಒಳಪಡುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಸರ್ಕಾರಕ್ಕಿರುವ ಆತಂಕ ಏನು?
ಕೇಂದ್ರ ಸರ್ಕಾರ ಜಾತಿಗಣತಿ ಸಮೀಕ್ಷೆಗೆ ಮುಂದಾದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ವಿರೋಧದ ಮಧ್ಯೆ ಜಾರಿ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಜೊತೆಗೆ ಆತಂಕವನ್ನೂ ತಂದೊಡ್ಡಿದೆ.
ವರದಿ ಜಾರಿಗೆ ಎದುರಾಗಿರುವ ಕಾನೂನಾತ್ಮಕ ಹಾಗೂ ರಾಜಕೀಯ ವಿರೋಧಗಳನ್ನು ಅಳೆದು ತೂಗಿ ಕ್ರಮ ವಹಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಸರ್ಕಾರದ ಮುಂದೆ ಮೂರು ರಾಜ್ಯಗಳ ಉದಾಹರಣೆ
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ, ಬಿಹಾರ ಹಾಗೂ ಮಧ್ಯಪ್ರದೇಶ ಸರ್ಕಾರ ಮಾಡಿದ ಶಿಫಾರಸು ತಿರಸ್ಕಾರ ಮಾಡಿರುವ ಉದಾಹರಣೆಯನ್ನೂ ಸರ್ಕಾರ ಅವಲೋಕಿಸುತ್ತಿದೆ. ಈ ಹಿನ್ನಲೆಯಲ್ಲಿ ಏನು ಮಾಡಬೇಕೆಂದು ಕಾನೂನಾತ್ಮಕವಾಗಿ ಚರ್ಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಕೇಂದ್ರಕ್ಕೆ ಶಿಫಾರಸು ಮಾಡಿದರೆ, ಅದರಿಂದ ಹಿನ್ನಡೆಯಾಗುವ ಆತಂಕವೂ ಇದೆ. ಹಾಗಾಗಿ, ಯಾವುದೇ ಗೊಂದಲ ಆಗದಂತೆ ವರದಿ ಜಾರಿ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸಿಎಂ ಏನು ಮಾಡಬಹುದು?
ಈಗ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡಿ ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಸಾಧ್ಯತೆ ಇದೆ. ವರದಿಯ ಮಾಹಿತಿ ಬಹಿರಂಗಪಡಿಸಬೇಕಾದರೆ ಸಂಪುಟ ಸಭೆಯಲ್ಲಿ ಅಂಗೀಕಾರ ಮಾಡಬೇಕು. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲೇ ಸಂಪುಟ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ. ಜಾತಿ ಜನಗಣತಿ ವರದಿಗೆ ಒಕ್ಕಲಿಗ ಹಾಗೂ ಲಿಂಗಾಯತ ಸಚಿವರು ವಿರೋಧವಿದೆ. ರಾಜಕೀಯ ಲೆಕ್ಕಾಚಾರ ಹಿನ್ನಲೆ ವರದಿಯ ಬಗ್ಗೆ ತಕ್ಷಣಕ್ಕೆ ಏನು ತೀರ್ಮಾನ ಮಾಡದೇ ಇರುವ ಆಲೋಚನೆಯೂ ಸರ್ಕಾರದ ಮುಂದಿದೆ. ಆದರೆ ಇದೀಗ ಕೇಂದ್ರ ಜನಗಣತಿ ಮಾಡಲು ಮುಂದಾಗಿರುವುದರಿಂದ ಸಿದ್ದರಾಮಯ್ಯ ಅವರು ಸಾಮಾಜಿಕ, ಶೈಕ್ಷಣಿಕ ವರದಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯ ಶುರುವಾಗಿದೆ.
ಕೇಂದ್ರಕ್ಕೆ ಶಿಫಾರಸು ಸಾಧ್ಯತೆ
ರಾಜಕೀಯವಾಗಿ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರದಿಯ ಅಂಕಿ-ಅಂಶ ಹಾಗೂ ವರದಿ ಜಾರಿಯ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ. ನಾವು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಕೇಂದ್ರದ್ದು ಮುಂದಿನ ಜವಾಬ್ದಾರಿ ಎಂದು ಹೇಳುವ ಮೂಲಕ ರಾಜಕೀಯವಾಗಿ ಒತ್ತಡ ಹಾಕುವ ಸಾಧ್ಯತೆ ಕೂಡ ಸಿಎಂ ಮುಂದಿರುವ ಆಯ್ಕೆಯಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.