Train Details : ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು : ಅಧಿಕಾರಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಬೆಳಗ್ಗೆ 8 ಗಂಟೆಗೆ ರಾಣಿ ಚೆನ್ನಮ್ಮ (ಬೆಂಗಳೂರು-ಕೊಲ್ಹಾಪುರ ರೈಲು) ಸಂಚರಿಸಬೇಕಿತ್ತು. ರೈಲು ಬರುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ರೈಲನ್ನು ಬೆಳಗಾವಿಯಿಂದ 8 ಕಿ.ಮೀ. ದೂರದಲ್ಲಿರುವ ದೇಸೂರ ನಿಲ್ದಾಣದಲ್ಲಿ ನಿಲುಗಡೆ ಮಾಡಿಸಿದರು.;
ಸಾಂದರ್ಭಿಕ ಚಿತ್ರ
ಬೆಳಗಾವಿ ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಘಟನೆಯಿಂದಾಗಿ ರೈಲ್ವೆ ಸಂಚಾರದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ವ್ಯತ್ಯಯ ಉಂಟಾಯಿತು. ಈ ಘಟನೆಯ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಅಪಘಾತದ ಕೆಲವೇ ನಿಮಿಷಗಳಲ್ಲಿ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಸಕಾಲದಲ್ಲಿ ನಿಲುಗಡೆ ಮಾಡಿಸಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿತು.
ಗೂಡ್ಸ್ ರೈಲು ಬೆಳಗಾವಿಯಿಂದ ಹುಬ್ಬಳ್ಳಿಯತ್ತ ತೆರಳುತ್ತಿತ್ತು. ಈ ರೈಲು ಎರಡು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತಿತ್ತು. ಘಟನೆಯ ಸಂದರ್ಭದಲ್ಲಿ ರೈಲಿನ ಮೂರು ಬೋಗಿಗಳು ಹಳಿಯಿಂದ ಜಾರಿ ಪಕ್ಕಕ್ಕೆ ವಾಲಿದವು. ಈ ಘಟನೆಯಿಂದಾಗಿ ರೈಲ್ವೆ ಮಾರ್ಗದಲ್ಲಿ ತಾತ್ಕಾಲಿಕ ಅಡೆತಡೆ ಉಂಟಾಯಿತು. ಸ್ಥಳಕ್ಕೆ ರೈಲ್ವೆ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮರಳಿ ಹಳಿಗೆ ಸೇರಿಸುವ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಿದ್ದಾರೆ.
ಗೂಡ್ಸ್ ರೈಲು ಹಳಿ ತಪ್ಪಿದ ಕೆಲವೇ ಕ್ಷಣಗಳಲ್ಲಿ, ಅದೇ ಮಾರ್ಗದಲ್ಲಿ ಬೆಂಗಳೂರು-ಕೊಲ್ಹಾಪುರ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಂಚರಿಸುವುದರಲ್ಲಿತ್ತು. ಈ ರೈಲು ಬೆಳಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಡಬೇಕಿತ್ತು. ಆದರೆ, ಗೂಡ್ಸ್ ರೈಲಿನ ಅಪಘಾತದ ಸುದ್ದಿ ತಿಳಿದ ಕೂಡಲೇ, ರೈಲ್ವೆ ಅಧಿಕಾರಿಗಳು ತಕ್ಷಣವೇ ರೈಲನ್ನು ಬೆಳಗಾವಿಯಿಂದ 8 ಕಿಲೋಮೀಟರ್ ದೂರದಲ್ಲಿರುವ ದೇಸೂರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸಿದರು.
ಗೂಡ್ಸ್ ರೈಲು ಹಳಿ ತಪ್ಪಿದ ಘಟನೆಯಿಂದಾಗಿ ಕನಿಷ್ಠ ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ (ಬೆಂಗಳೂರು-ಕೊಲ್ಹಾಪುರ), ದಾದರ್ ಎಕ್ಸ್‌ಪ್ರೆಸ್ (ಮುಂಬೈ-ಹುಬ್ಬಳ್ಳಿ), ಚಾಲುಕ್ಯ ಎಕ್ಸ್‌ಪ್ರೆಸ್ (ಮುಂಬೈ-ಬೆಂಗಳೂರು), ಗೋವಾ-ಮಿರಜ್ ಪ್ಯಾಸೆಂಜರ್ ರೈಲು, ಬೆಳಗಾವಿ-ಬೆಂಗಳೂರು-ಮೈಸೂರು ರೈಲಿನ ಸಂಚಾರದಲ್ಲಿ ಸಮಸ್ಯ ಉಂಟಾಯಿತು.
ಈ ರೈಲುಗಳ ಸಂಚಾರ ಸುಮಾರು ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡಿತು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ರೈಲ್ವೆ ಇಲಾಖೆ ಕ್ಷಮೆಯಾಚಿಸಿದೆ.
ಗೂಡ್ಸ್ ರೈಲು ಹಳಿ ತಪ್ಪಲು ನಿಖರ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲ. ಆದರೆ, ಈ ಘಟನೆಗೆ ಹಳಿಯ ದೋಷ ಕಾರಣವಿರಬಹುದೆಂದು ರೈಲ್ವೆ ಇಲಾಖೆ ಶಂಕಿಸಿದೆ. ಈ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.