Gold Smuggling | ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್‌ಗೆ ಜಾಮೀನು ಮಂಜೂರು; ಆದರೂ ಇಲ್ಲ ಬಿಡುಗಡೆ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಚಿತ್ರ ನಟಿ ರನ್ಯಾ ವಿರುದ್ಧ ಸಿಇಐಬಿ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.;

Update: 2025-05-20 13:15 GMT
ರನ್ಯಾ ರಾವ್‌ 

ಚಿನ್ನ ಕಳ್ಳಸಾಗಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಡಿಜಿಪಿ ರಾಮಚಂದ್ರರಾವ್‌ ಅವರ ಮಲಮಗಳು ನಟಿ ರನ್ಯಾ ರಾವ್‌ಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದರೂ ರನ್ಯಾ ರಾವ್‌ ಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ.

ರನ್ಯಾ ರಾವ್‌ ವಿರುದ್ಧ ಚಿನ್ನ ಕಳ್ಳಸಾಗಾಣಿಕೆ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತಿದೆ. ಆದರೆ, ಆಕೆ ಮೇಲೆ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವುದರಿಂದ ಮತ್ತು ಆ ಪ್ರಕರಣದಲ್ಲಿ ಜಾಮೀನು ನೀಡಲು ಹೈಕೋರ್ಟ್‌ನಲ್ಲಿ ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಆಕೆ ಜೈಲಿನಿಂದ ಬಿಡುಗಡೆಯಾಗುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಆರ್‌ಐ ಪ್ರಕರಣದಲ್ಲಿ 60 ದಿನ ಕಳೆದರೂ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ರನ್ಯಾ ರಾವ್‌ ಜತೆಗೆ ಪ್ರಕರಣದ 2ನೇ ಆರೋಪಿ ತರುಣ್‌ ಕೊಂಡರಾಜುವಿಗೂ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶಿಸಿದೆ.

ಆ ಪ್ರಕಾರ, ಇಬ್ಬರು ಶ್ಯೂರಿಟಿ, 2 ಲಕ್ಷ ರೂ. ಬಾಂಡ್ ಮೇಲೆ ಜಾಮೀನು ನೀಡಲು ನ್ಯಾಯಾಲಯ ಆದೇಶ ನೀಡಿದ್ದು, ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದಂತೆ ಹಾಗೂ ದೇಶ ಬಿಟ್ಟು ಹೊರಗೆ ಹೋಗದಂತೆ ಸೂಚನೆ ನೀಡಿದೆ. ರನ್ಯಾರಾವ್ ಪರ ವಕೀಲ ಗಿರೀಶ್ ವಾದ ಮಂಡಿಸಿದರು. 12 ಕೋಟಿ ರೂ. ಮೌಲ್ಯದ 14 ಕೆ.ಜಿ ಚಿನ್ನದ ಗಟ್ಟಿಗಳನ್ನು ದುಬೈನಿಂದ ಬೆಂಗಳೂರಿಗೆ ತಂದು ನಟಿ ರನ್ಯಾ ರಾವ್‌ ಬಂಧನಕ್ಕೆ ಒಳಗಾಗಿದ್ದರು. ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ತಿಸ್ಕರಿಸಿತ್ತು.

ಏನಿದು ಪ್ರಕರಣ?

ನಟಿ ರನ್ಯಾ ರಾವ್ ಅವರ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣವು ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಮಾರ್ಚ್‌ 3 ರಂದು, ದುಬೈನಿಂದ 14.80 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.

ಕಾಫಿಪೋಸಾ ಪ್ರಕರಣ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಚಿತ್ರ ನಟಿ ರನ್ಯಾ ರಾವ್ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.

ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್‌ ಅಡಿಯಲ್ಲಿ ರನ್ಯಾ ವಿರುದ್ಧ ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್‌ ಏಪ್ರಿಲ್‌ 22ರಂದು ಬಂಧನ ಆದೇಶ ಹೊರಡಿಸಿದ್ದರು. ಕಾಫಿಪೋಸಾ ಪ್ರಕರಣದಲ್ಲಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ.

‘ಈಗಾಗಲೇ ಬಂಧನದಲ್ಲಿ ಇರುವ ಹರ್ಷವರ್ಧಿನಿ ರನ್ಯಾ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿ’ ಎಂದು ಅನುಪಮ್‌ ಪ್ರಕಾಶ್‌ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರು. ಚಿನ್ನ ಕಳ್ಳಸಾಗಣೆ ಮತ್ತು ಇತರ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಹೊತ್ತ ವ್ಯಕ್ತಿಗಳನ್ನು ಕಾಫಿಪೋಸಾ ಅಡಿಯಲ್ಲಿ ಬಂಧಿಸಲಾಗುತ್ತದೆ. ಕಾಫಿಪೋಸಾ ಅಡಿ ಬಂಧನಕ್ಕೆ ಒಳಗಾದವರನ್ನು ಕನಿಷ್ಠ 3 ತಿಂಗಳಿಂದ 1 ವರ್ಷದವರೆಗೂ ಸೆರೆವಾಸದಲ್ಲಿ ಇರಿಸಬಹುದು. ತೀರಾ ಗಂಭೀರ ಪ್ರಕರಣದಲ್ಲಿ ಸೆರೆವಾಸವನ್ನು ಎರಡು ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ ಎಂದು ಹೇಳಲಾಗಿದೆ.

Tags:    

Similar News