ಅಕ್ಷಯ ತೃತೀಯಕ್ಕೂ ಮುನ್ನ 1 ಲಕ್ಷ ರೂಪಾಯಿ ಗಡಿ ದಾಟಿದ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ 1 ರೂ. ಲಕ್ಷ ದಾಟಿದೆ.;

Update: 2025-04-22 10:52 GMT

ಚಿನ್ನದ ಬೆಲೆ ಒಂದು ಲಕ್ಷ ಗಡಿ ದಾಟಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ನಡುವಿನ ಸಾರ್ವಜನಿಕ ಘರ್ಷಣೆಯ ಪರಿಣಾಮ ಭಾರತದಲ್ಲಿ ಮಂಗಳವಾರ (ಏಪ್ರಿಲ್ 22) ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ 1 ಲಕ್ಷ ರೂಪಾಯಿ ದಾಟಿದೆ. 

ಜಾಗತಿಕ ಮಾರುಕಟ್ಟೆಗಳಲ್ಲಿ ಹಳದಿ ಲೋಹವು ಔನ್ಸ್‌ಗೆ ದಾಖಲೆಯ 3,500 ಡಾಲರ್‌ ದಾಟಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಮತ್ತು ಟ್ರಂಪ್ ಅವರ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಸ್ವತ್ತಿನ ಮೇಲೆ ಹೂಡಿಕೆ ಮಾಡುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.  

ಚಿನ್ನದ ಬೆಲೆ ಏರಿಕೆ

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 10,150 ರೂ. ಮತ್ತು ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ 10,135 ರೂ. ಇದೆ. ಆದರೆ ಶುದ್ಧ ಚಿನ್ನವನ್ನು ಆಭರಣಗಳಲ್ಲಿ ಬಳಸಲಾಗುವುದಿಲ್ಲ. ಸಾಮಾನ್ಯವಾಗಿ ಆಭರಣಗಳಲ್ಲಿ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಗಳು ಪ್ರತಿ ಗ್ರಾಂಗೆ ರೂ. 9,290- 9,305 ರೂ. ಆಸುಪಾಸಿನಲ್ಲಿವೆ.

ಅಕ್ಷಯ ತೃತೀಯಕ್ಕೆ ಸ್ವಲ್ಪ ಮುಂಚಿತವಾಗಿ ಚಿನ್ನದ ದರ ಏರಿಕೆ ಕಂಡಿದ್ದು, ವಿಶೇಷವಾಗಿ ಭಾರತದ ಮಧ್ಯಮ ವರ್ಗ ಮತ್ತು ಚಿನ್ನದ ಉಳಿತಾಯಕ್ಕೆ ಹೆಸರುವಾಸಿಯಾದ ಗೃಹಿಣಿಯರ ಚಿನ್ನ ಖರೀದಿಸುವ ಆಸೆಗೆ ನೀರೆರಚಿದಂತಾಗಿದೆ. 

ಟ್ರಂಪ್ vs ಪೊವೆಲ್

ಟ್ರಂಪ್ ಅವರ ವಿದೇಶಾಂಗ ನೀತಿಗಳ ಕುರಿತಾದ ಜಾಗತಿಕ ಅನಿಶ್ಚಿತತೆಗಳು ಮಾರುಕಟ್ಟೆಗಳನ್ನು ಚಿಂತೆಗೀಡು ಮಾಡಿವೆ. ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಸ್ವತ್ತುಗಳತ್ತ ಸಾಗುವಂತೆ ಮಾಡಿದೆ. ಟ್ರಂಪ್ ಅವರ ಸುಂಕಗಳ ಪರಿಣಾಮದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬರುವವರೆಗೆ ಬಡ್ಡಿದರಗಳನ್ನು ಬದಲಾಯಿಸದೆ ಇರಿಸುವ ಫೆಡ್ ಮುಖ್ಯಸ್ಥ ಪೊವೆಲ್ ಅವರ ನಿರ್ಧಾರಕ್ಕೆ ವಿರುದ್ಧವಾಗಿ, ಬಡ್ಡಿದರಗಳನ್ನು ಕಡಿಮೆ ಮಾಡಲು ಟ್ರಂಪ್ ಪದೇ ಪದೇ ಕರೆ ನೀಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದರಗಳನ್ನು ಕಡಿತಗೊಳಿಸದಿದ್ದರೆ ಅಮೆರಿಕದ ಆರ್ಥಿಕತೆಯು ಮಂದಗತಿಯನ್ನು ಎದುರಿಸಬಹುದು ಎಂದು ಈಗಾಗಲೇ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. 

 

Tags:    

Similar News