ಗೋವಾ-ತಮ್ನಾರ್ ವಿದ್ಯುತ್ ಮಾರ್ಗ | ಅರಣ್ಯ ಇಲಾಖೆ ನಿಲುವಿನಿಂದ‌ ಪಶ್ಚಿಮ ಘಟ್ಟ ಜೀವ ವೈವಿಧ್ಯಕ್ಕೆ ಹಾನಿ

ತಮ್ನಾರ್ ವಿದ್ಯುತ್ ಮಾರ್ಗದ ಯೋಜನೆಯಿಂದ ಕರ್ನಾಟಕದ ಹುಲಿ ಕಾರಿಡಾರ್, ಕಾಳಿ ಹುಲಿ ಮೀಸಲು ಪ್ರದೇಶ, ದಾಂಡೇಲಿ ಅಭಯಾರಣ್ಯ ಹಾಗೂ ದಾಂಡೇಲಿ ಆನೆಪಥಕ್ಕೆ ಸಮಸ್ಯೆ ಆಗಲಿದೆ. 72000 ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ.;

Update: 2025-04-02 04:04 GMT

ಪಶ್ಚಿಮ ಘಟ್ಟಗಳಲ್ಲಿ ಪ್ರಸ್ತಾವಿತ ಗೋವಾ- ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗದ ಯೋಜನೆಗೆ ರಾಜ್ಯ ಅರಣ್ಯ ಇಲಾಖೆ ಅನುಮೋದನೆ ನೀಡಿರುವ ಕ್ರಮಕ್ಕೆ ಪರಿಸರವಾದಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯದ ಪಶ್ಚಿಮ ಘಟ್ಟಗಳ 435 ಎಕರೆ ಅರಣ್ಯ ಪ್ರದೇಶದಲ್ಲಿ ಸುಮಾರು 72 ಸಾವಿರ ಮರಗಳ ನಾಶಕ್ಕೆ ಕಾರಣವಾಗುವ ಕೇಂದ್ರದ ಈ ಯೋಜನೆ(GOA TAMNAR TRANSMISSION PROJECT LIMITED)ಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.

2024 ಮಾರ್ಚ್ ತಿಂಗಳಲ್ಲೂ ಎರಡನೇ ಬಾರಿಗೆ ಪ್ರಸ್ತಾವ ತಿರಸ್ಕರಿಸಿದ್ದ ಅರಣ್ಯ ಇಲಾಖೆ ಇದೀಗ ಯೋಜನೆಗೆ ಅನುಮೋದನೆ ನೀಡಿರುವುದು ಪರಿಸರಾಸಕ್ತರ ಕೆಂಗಣ್ಣಿಗೆ ಗುರಿಯಾಗಿದೆ. 

ಗೋವಾ-ತಮ್ನಾರ್ ವಿದ್ಯುತ್‌ ವಿತರಣಾ ಜಾಲದ ಯೋಜನೆಯನ್ನು ಖುದ್ದು ಪ್ರಧಾನಿ ಕಾರ್ಯಾಲಯವೇ ಮೇಲ್ವಿಚಾರಣೆ ನಡೆಸುತ್ತಿದೆ. ರಾಜ್ಯದಲ್ಲಿ ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಪತ್ರ ಬರೆದಿದ್ದರು. ಆದರೆ, ಆರಂಭದಲ್ಲಿ  ಮಣಿಯದ ರಾಜ್ಯ ಸರ್ಕಾರವು ಮಹದಾಯಿ ಯೋಜನೆಗೆ ಅನುಮತಿ ಕೊಟ್ಟರೆ, ಗೋವಾ -ತಮ್ನಾರ್ ವಿದ್ಯುತ್ ಮಾರ್ಗಕ್ಕೆ ಸಹಕಾರ ನೀಡುವುದಾಗಿ ಹೇಳಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಅನುಮೋದನೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಏನಿದು ವಿದ್ಯುತ್ ಮಾರ್ಗ ಯೋಜನೆ?

ಕೇಂದ್ರ ಸರ್ಕಾರದ 'ಒನ್ ನೆಷನ್ ಒನ್ ಗ್ರಿಡ್' ನಡಿ ಛತ್ತೀಸಘಡದ ತಮ್ನಾರ್‌ನಿಂದ ಗೋವಾದ ಕ್ಷೆಲ್ಡಮ್ ವರೆಗೆ ನಿರಂತರ ವಿದ್ಯುತ್ ಪೂರೈಸುವ ಯೋಜನೆ ಇದಾಗಿದೆ. 

ಧಾರವಾಡ ಜಿಲ್ಲೆಯ ನರೇಂದ್ರದಲ್ಲಿರುವ ವಿದ್ಯುತ್ ವಿತರಣಾ ಜಾಲದಿಂದ ಗೋವಾಗೆ ವಿದ್ಯುತ್ ಮಾರ್ಗ ನಿರ್ಮಿಸಲು 'ಗೋವಾ-ತಮ್ಮಾ‌ರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್' (ಜಿ ಟಿ ಟಿ ಪಿ ಎಲ್) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಸರಣ ಮಾರ್ಗದ ಉದ್ದ 94 ಕಿ.ಮೀ ಆಗಿದ್ದು, ಅದರಲ್ಲಿ 72 ಕಿ.ಮೀ ಉದ್ದದ ಮಾರ್ಗವು ಕರ್ನಾಟಕದ ಕಾಡುಗಳ ಮೂಲಕ ಹಾದುಹೋಗಲಿದೆ. ಅಂಶಿ, ದಾಂಡೇಲಿ ಹುಲಿ ಮೀಸಲು ಪ್ರದೇಶದ ಮೂಲಕ 6.6 ಕಿಮೀ ಮಾರ್ಗವೂ ಸೇರಿದೆ.

ಯೋಜನೆಗೆ ಅಗತ್ಯವಾದ ರಾಜ್ಯದ ಅರಣ್ಯ ಬಳಕೆಗೆ ಅವಕಾಶ ನೀಡುವಂತೆ ಕೋರಿದೆ. ಇದರಿಂದ ಧಾರವಾಡ ಜಿಲ್ಲೆಯಲ್ಲಿ 4.70 ಹೆಕ್ಟೇ‌ರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇ‌ರ್ ಅರಣ್ಯವನ್ನು ಯೋಜನೆಗೆ ಬಳಸುವ ಉದ್ದೇಶಿಸಿದೆ. ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್ ದಟ್ಟ ಕಾಡಿನಲ್ಲಿ ಸಾವಿರಾರು ಮರಗಳು ನಾಶವಾಗಲಿವೆ. 

ಯೋಜನೆ ಅನುಷ್ಠಾನಕ್ಕೆ ಗ್ರೀನ್ ಸಿಗ್ನಲ್

ಪ್ರಧಾನಿ ಕಾರ್ಯಾಲಯದ ಒತ್ತಡಕ್ಕೆ ಮಣಿಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಬ್ರಿಜೇಶ್ ಕುಮಾರ್ ಅವರು, 2025 ಮಾ. 25ರಂದು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರಿಗೆ  ಪ್ರಸ್ತಾವ ಸಲ್ಲಿಸಿದ್ದು, ಪರ್ಯಾಯ ಮಾರ್ಗದಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಅಥವಾ ಮರಗಳ ಹನನ ಕಡಿಮೆ ಮಾಡಲು ಆಧುನಿಕ ತಂತ್ರಜ್ಞಾನ ಬಳಸಲು ಯೋಜನಾ ಸಂಸ್ಥೆಗೆ ನಿರ್ದೇಶಿಸಬಹುದು ಎಂದು ಹೇಳುವ ಮೂಲಕ ಯೋಜನೆಗೆ ಅನುಮೋದನೆ ನೀಡಿದ್ದಾರೆ.

ಯೋಜನೆ ವಿರೋಧಿಸಿದ್ದ ರಾಜ್ಯ ಸರ್ಕಾರ

2024ರ ಮಾರ್ಚ್ 16ರಂದು ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್ ಅವರು, 'ಯೋಜನೆ ಪ್ರಸ್ತಾಪ ತಿರಸ್ಕರಿಸಬೇಕು. ಅರಣ್ಯಯೇತರ ಪ್ರದೇಶದಲ್ಲಿ ಇಂತಹ ವಿದ್ಯುತ್ ವಿತರಣಾ ಜಾಲ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಪ್ರಸ್ತಾವನೆಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಅಗಾಧ ಪ್ರಮಾಣದ ಅರಣ್ಯ ನಾಶವಾಗುತ್ತಿದ್ದರೂ, ಪ್ರಸ್ತಾವನೆಯನ್ನು ಶಿಫಾರಸು ಮಾಡಿದ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು' ಎಂದು ಸೂಚಿಸಿದ್ದರು.

2024 ಸೆಪ್ಟೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ 79ನೇ ಸಭೆಯಲ್ಲಿ ರಾಜ್ಯ ಸರ್ಕಾರ ಪರ್ಯಾಯ ಆಯ್ಕೆ ಮುಂದಿರಿಸಿತ್ತು. ರಾಜ್ಯದ ಮಹದಾಯಿ ಯೋಜನೆಗೆ ಅನುಮೋದನೆ ನೀಡಿದರೆ ಗೋವಾ-ತಮ್ನಾರ್ ಯೋಜನೆಗೆ ಸಹಕಾರ ನೀಡುವುದಾಗಿ ಹೇಳಿತ್ತು. ಆದರೆ, ಸಭೆಯಲ್ಲಿ ಮಹದಾಯಿ ಯೋಜನೆ ಬದಿಗಿರಿಸಿ, ವಿದ್ಯುತ್ ಮಾರ್ಗ ಯೋಜನೆಗೆ ಅನುಮೋದನೆ ನೀಡಿತ್ತು. 

ಯೋಜನೆಯ ಭಾದಕಗಳೇನು?

400ಕೆ.ವಿ ಸಾಮರ್ಥ್ಯದ ಉದ್ದೇಶಿತ ಗೋವಾ ತಮ್ನಾರ್ ವಿದ್ಯುತ್ ಮಾರ್ಗದ ಯೋಜನೆಯಿಂದ ಹುಲಿ ಕಾರಿಡಾರ್, ಕಾಳಿ ಹುಲಿ ಮೀಸಲಿನ ಪರಿಸರ ಸೂಕ್ಷ್ಮ ಪ್ರದೇಶ, ದಾಂಡೇಲಿ ಅಭಯಾರಣ್ಯ ಹಾಗೂ ದಾಂಡೇಲಿ ಆನೆಪಥಕ್ಕೆ ಸಮಸ್ಯೆ ಆಗಲಿದ್ದು, 72000 ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗುತ್ತದೆ. ಪಶ್ಚಿಮ ಘಟ್ಟದ ಜೀವಸಂಕುಲ ಹಾನಿಯಾಗಲಿದೆ. ಹುಲಿ ಮೀಸಲು ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಕುಸಿತಯಲಿದೆ. ಹುಲಿಗಳ ಆವಾಸ ಸ್ಥಾನಗಳಾದ ಬೆಳಗಾವಿ ಹಾಗೂ ಹಳಿಯಾಳ ವಿಭಾಗದ ಅರಣ್ಯ ಪ್ರದೇಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಅರಣ್ಯಇಲಾಖೆಯ ದ್ವಂದ್ವ ನಿಲುವು 

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ, ವಿದ್ಯುತ್ ಮಾರ್ಗ ನಿರ್ಮಾಣ, ಭೂಗತ ಕೇಬಲ್ ಅಳವಡಿಕೆ, ರಸ್ತೆ, ಕುಡಿಯುವ ನೀರಿನ ಚಿಕ್ಕ ಪುಟ್ಟ ಯೋಜನೆಗಳಿಗೆ ಸಲ್ಲಿಸುವ ಪ್ರಸ್ತಾವನೆಗಳನ್ನು ಅರಣ್ಯ ನಾಶದ ನೆಪ ಹೇಳಿ ತಿರಸ್ಕಾರ ಮಾಡುವ ಅರಣ್ಯ ಇಲಾಖೆ ಇದೀಗ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಭಾರೀ ಹಾನಿ ಉಂಟು ಮಾಡುವ ಯೋಜನೆಗೆ ಅನುಮೋದನೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಅರಣ್ಯ ಪ್ರದೇಶಗಳಿಗೆ ಶಾಶ್ವತ ಹಾನಿ ಉಂಟು ಮಾಡುವ ಗಣಿಗಾರಿಕೆ, ಹೆದ್ದಾರಿ, ಜಲ ವಿದ್ಯುತ್ ಅಂತಹ ದೊಡ್ಡ ದೊಡ್ಡ ಯೋಜನೆಗಳಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿರುವುದು ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ.ಸೂಕ್ಷ್ಮ ಪರಿಸರ ವ್ಯವಸ್ಥೆ ಹೊಂದಿರುವ ಪಶ್ಚಿಮ ಘಟ್ಟಗಳಿಗೆ ಹಾನಿಯಾದರೆ ಇಡೀ ಮನುಕುಲವೇ ಅದರ ಪರಿಣಾಮ ಎದುರಿಸಲಿದೆ. ಎಚ್ ಎಂ ಟಿ ಭೂ ವಿವಾದ, ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ನಾಶದ ಕುರಿತು ದ್ನಿ ಎತ್ತುವ ಸಚಿವರು ಇಂತಹ ಗಂಭೀರ ವಿಷಯಗಳ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದು ಪರಿಸರವಾದಿ ಎಸ್. ಚಿದಾನಂದ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ವಿದ್ಯುತ್ ಮಾರ್ಗ ಯೋಜನೆ ತಡೆಯಬೇಕು. ಅರಣ್ಯಕ್ಕೆ ಹಾನಿ ಉಂಟು ಮಾಡುವ ಯೋಜನೆಗಳನ್ನು ತಿರಸ್ಕರಿಸಬೇಕು ಒತ್ತಾಯಿಸಿದರು.

ಸುಪ್ರೀಂಕೋರ್ಟ್ ಅಂಗಳ ತಲುಪಿದ್ದ ಪ್ರಕರಣ

ಗೋವಾ -ತಮ್ನಾರ್ ಯೋಜನೆಗೆ ಗೋವಾ ಹಾಗೂ ಕರ್ನಾಟಕ ಪರಿಸರವಾದಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಯೋಜನೆ ಪರಿಶೀಲಿಸಿ ಪರಿಷ್ಕೃತ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ವರದಿ ನೀಡಿತ್ತು. 

ಗಣೇಶಗುಡಿ ಸಬ್‌ಸ್ಟೇಷನ್‌ನಿಂದ ಪೊಂಡಾ ಸಬ್‌ಸ್ಟೇಷನ್‌ಗೆ ಈಗಿರುವ 220 ಕೆವಿ ಕೆಪಿಟಿಸಿಎಲ್ ಕ್ರಿಯಾತ್ಮಕ ಮಾರ್ಗದಲ್ಲಿ ಪ್ರಸರಣ ಮಾರ್ಗವನ್ನು ಮರುಹೊಂದಿಸಲು ಸಂಸ್ಥೆ ಒಪ್ಪಿಕೊಂಡಿತ್ತು. ಆದರೂ, ಸುಮಾರು 25,000 ಮರಗಳನ್ನು ಕಡಿಯಬೇಕಾಗಿದೆ ಎಂದು ಹೇಳಿತ್ತು. ಅರಣ್ಯ ಇಲಾಖೆಯ ಈ ಪ್ರಸ್ತಾಪವನ್ನು ರಾಜ್ಯ ಸರ್ಕಾರ ತಿರಸ್ಕರಿಸಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಧಾರವಾಡ, ಹಳಿಯಾಳ, ದಾಂಡೇಲಿ ವೃತ್ತದಲ್ಲಿ ಯೋಜನೆಗೆ  ಶಿಫಾರಸು ಮಾಡಿ, ಬೆಳಗಾವಿ ವೃತ್ತದಿಂದ ಯೋಜನೆ ತಿರಸ್ಕರಿಸುವ ಮೂಲಕ ಒಟ್ಟಾರೆ ಸಮೀಕ್ಷೆ ಆಧರಿಸಿ ಯೋಜನೆಗೆ ಶಿಫಾರಸು ಮಾಡಿದ್ದರು. 

ಎಲ್ಲೆಲ್ಲಿ ಪರಿಸರ ನಾಶ?

ವಿದ್ಯುತ್ ಮಾರ್ಗ ಯೋಜನೆಯಿಂದ ಹಳಿಯಾಳ ವಿಭಾಗದಲ್ಲಿ 35,445 ಮರಗಳು ಹಾಗೂ ದಾಂಡೇಲಿ ವನ್ಯಜೀವಿ ವಿಭಾಗದಲ್ಲಿ 10,810 ಮರಗಳು ನಾಶವಾಗಲಿವೆ. ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿದೆ. ಈ ಪ್ರದೇಶದಲ್ಲಿ ಹುಲಿ, ಚಿರತೆ, ಮಚ್ಚೆಯುಳ್ಳ ಜಿಂಕೆಗಳು, ಕರಡಿಗಳು, ನಾಗರಹಾವುಗಳು, ಹಾರ್ನ್‌ಬಿಲ್‌ಗಳು ಮತ್ತು ಕ್ಯಾಸಲ್ ರಾಕ್ ನೈಟ್ ಕಪ್ಪೆಗಳಿಗೆ ನೆಲೆಯಾಗಿದೆ. ಯೋಜನೆ ಜಾರಿಯಾದರೆ ಪ್ರಾಣಿ ಹಾಗೂ ಪರಿಸರಕ್ಕೆ ಹಾನಿಯಾಗಲಿದೆ.

ಗೋವಾಗೆ ವಿದ್ಯುತ್ ನೀಡಲು ನಕಾರ

ಮಹದಾಯಿ ಯೋಜನೆಗೆ ತಗಾದೆ ತೆಗೆಡಿರುವ ಗೋವಾಗೆ ಯಾವುದೇ ಕಾರಣಕ್ಕೂ ವಿದ್ಯುತ್ ಪೂರೈಸುವ ಯೋಜನೆಗೆ ಅನುಮತಿ ನೀಡಬಾರದು ಎಂದು ಕನ್ನಡ ಪರ ಹೋರಾಟಗಾರರು ಹಾಗೂ ಪರಿಸರವಾದಿಗಳು ರಾಜ್ಯ ಸರ್ಕಾರವನ್ನು ಅಗ್ರಹಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮಹದಾಯಿ ಯೋಜನೆಯನ್ನು ಗೋವಾ ವಿರೋಧಿಸುತ್ತಿದೆ. ರಾಜ್ಯದ ಜನರಿಗೆ ನೀರು ಒದಗಿಸಲು ಬಿಡದ ಗೋವಾಗೆ ವಿದ್ಯುತ್ ಪೂರೈಸುವ ಮಾರ್ಗಕ್ಕೆ ಅನುಮತಿ ನೀಡಬಾರದು ಎಂದಿದ್ದಾರೆ.

Tags:    

Similar News