BJP-JDS ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ದರಾಗಿ: ಸಿದ್ದರಾಮಯ್ಯ ಭಾವನಾತ್ಮಕ ಕರೆ

ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಎಂದು ನೆರೆದಿದ್ದ ಲಕ್ಷಾಂತರ ಜನಸಮೂಹದ ಮುಂದೆ ಭಾವನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟರು

Update: 2024-10-05 12:45 GMT
ಮುಖ್ಯಮಂತ್ರಿ ಸಿದ್ದರಾಮಯ್ಯ
Click the Play button to listen to article

ಮಾನ್ವಿಯಲ್ಲಿ ಶನಿವಾರ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ವಿರುದ್ಧ ಭಾವನಾತ್ಮಕ ದಾಳವನ್ನು ಉರುಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವತ್ತೂ ಮನೆಯಿಂದ ಆಚೆಗೆ ಬಂದು ರಾಜಕಾರಣದ ಕಡೆ ಮುಖ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಅವರ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸ್ತೀರಾ? ಎಂದು ಜನ ಸಮುದಾಯಕ್ಕೆ ಪ್ರಶ್ನಿಸಿದರು. 

ಮಾನ್ವಿಯಲ್ಲಿ ಶೋಷಿತ-ದಮನಿತ-ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳನ್ನು, ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು? ಎಂದು ನೆರೆದಿದ್ದ ಲಕ್ಷಾಂತರ ಜನಸಮೂಹದ ಮುಂದೆ ಭಾವನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟರು.

ಬಿಜೆಪಿ-ಜೆಡಿಎಸ್‌ ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ದರಾಗಿ ಎಂದು ಸಿ.ಎಂ.ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಜನರಿಗೆ ಕರೆ ನೀಡಿದರು. ಆ ಮೂಲಕ ಮೈಸೂರು ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಪ್ರತಿಪಕ್ಷ ಮೈತ್ರಿಕೂಟ ತಮ್ಮ ವಿರುದ್ಧ ಸಾರಿರುವ ರಾಜಕೀಯ ಸಮರಕ್ಕೆ ಭಾವನಾತ್ಮಕ ಆಯಾಮ ನೀಡುವ ಪ್ರಯತ್ನ ಮಾಡಿದರು.

ಕೊಟ್ಟ ಕುದುರೆ ಏರಲಾರದ ಕುಮಾರಸ್ವಾಮಿ ವೀರನೂ ಅಲ್ಲ, ಶೂರನೂ ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ರಾಜ್ಯದ ಅಭಿವೃದ್ಧಿ ಮಾಡುವ ಅವಕಾಶವೂ ಇತ್ತು. ಅಧಿಕಾರ, ಅವಕಾಶ ಇದ್ದಾಗ ಜನಪರ ಕೆಲಸ ಮಾಡದ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಈಗ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಬೊಕ್ಕಸ ಖಾಲಿ, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗಲೂ ಜನರ ಕೆಲಸ ಮಾಡಲಿಲ್ಲ. ಬಿಜೆಪಿ ಸ್ವಂತ ಶಕ್ತಿ ಮೇಲೆ ಇವತ್ತಿನವರೆಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏನಿದ್ದರೂ ಆಪರೇಷನ್ ಕಮಲದ ಮೂಲಕ ಮಾತ್ರ ಬಿಜೆಪಿ ಅಧಿಕಾರ ಹಿಡಿದಿದೆ. ಹೀಗಾಗಿ ಅವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ಬೈಪಾಸ್ ಹಾದಿಯಲ್ಲೇ ಅಧಿಕಾರ ಹಿಡಿಯಲು ಕಾದು ಕುಳಿತಿದ್ದಾರೆ ಎಂದು ಟೀಕಿಸಿದರು.

ಸಾಕಾಗಿದೆ; ಆದರೆ ಹೋರಾಟ ಮುಂದುವರಿಸುವೆ

ಕಾರಣವೇ ಇಲ್ಲದೆ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ. ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರಿಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗೋನೂ ಅಲ್ಲ. ಬಗ್ಗೋನೂ ಅಲ್ಲ. ಹೋರಾಟ ಮುಂದುವರಿಸ್ತೀನಿ ಎಂದರು.

ನನ್ನನ್ನು ಕೆಳಗೆ ಇಳಿಸುವ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಸೋಲಿಸ್ತೀನಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ಬಿಜೆಪಿಗೆ ನೀವೂ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ ಸಿದ್ದರಾಮಯ್ಯ, ಬೃಹತ್ ಸ್ವಾಭಿಮಾನಿ ಜನ ಸಮಾವೇಶ ಸಂಘಟಿಸಿದ ಬೋಸರಾಜು ಮತ್ತು ರವಿ ಬೋಸರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ ಎಂದರು.

Tags:    

Similar News