ಬೆಳಗಾವಿ ʼಗಾಂಧಿ ಭಾರತʼ | ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನ ಉದ್ಘಾಟನೆ

ಸ್ವಾತಂತ್ರ್ಯದ ಹೋರಾಟ ಸ್ಮರಣೆ ಮಾಡುವ ಈ ಸ್ಮಾರಕ ಭವನವನ್ನು 15 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

Update: 2024-12-26 08:45 GMT
ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನಕ್ಕೆ ಮಾಲಾರ್ಪಣೆ ಮಾಡಿದ ಸಿಎಂ ಸಿದ್ದರಾಮಯ್ಯ.

‘ಗಾಂಧಿ ಭಾರತ’ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಿರ್ಮಿಸಿದ ‘ಗಂಗಾಧರರಾವ್‌ ದೇಶಪಾಂಡೆ ಅವರ ಸ್ಮಾರಕ ಭವನ‌’ ಮತ್ತು ಫೋಟೊ ಗ್ಯಾಲರಿಯನ್ನು ಸಿಎಂ ಸಿದ್ದರಾಮಯ್ಯ ಗುರುವಾರ ಲೋಕಾರ್ಪಣೆಗೊಳಿಸಿದರು.

ಸ್ವಾತಂತ್ರ್ಯದ ಹೋರಾಟ ಸ್ಮರಣೆ ಮಾಡುವ ಈ ಸ್ಮಾರಕ ಭವನವನ್ನು 15 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ₹1.58 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಪೋಟೊ ಗ್ಯಾಲರಿ, ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನ ನಿರ್ಮಾಣಗೊಂಡಿದೆ.

ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆ "ಕರ್ನಾಟಕದ ಸಿಂಹ" ಯಾರು?

ಗಂಗಾಧರರಾವ್ ಬಾಲಕೃಷ್ಣ ದೇಶಪಾಂಡೆ (ಮಾರ್ಚ್ 21, 1871- ಜುಲೈ 30, 1960) ಕರ್ನಾಟಕದ ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರ. "ಕರ್ನಾಟಕದ ಸಿಂಹ" ಎಂಬ ಖೈಆತಿ ಹೊಂದಿದವರು ಅವರು.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದಿಂದ ಪ್ರಮುಖ ನಾಯಕರಾಗಿದ್ದರು. ಬೆಳಗಾವಿಯ ಹುದಲಿಯಲ್ಲಿ ಜನಿಸಿದ ಅವರು ಆರಂಭದಲ್ಲಿ ಸಾಮಾಜಿಕ ಸುಧಾರಣೆಗಳನ್ನೂ ಕೈಗೊಂಡಿದ್ದರು. ಆದರೆ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರಿಂದ ಸ್ಫೂರ್ತಿ ಪಡೆದು ಸ್ವರಾಜ್ಯ ಹೋರಾಟಕ್ಕೆ ಧುಮುಕಿದ್ದರು. ನಂತರ, ಅವರು ಗಾಂಧೀಜಿಯವರ ದೃಷ್ಟಿಕೋನವನ್ನು ಅಳವಡಿಸಿಕೊಂಡರು, ಉಪ್ಪಿನ ಸತ್ಯಾಗ್ರಹ ಮತ್ತು ಸ್ವದೇಶಿ ಚಳವಳಿಯಂತಹ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.

ದೇಶಪಾಂಡೆಯವರು ಖಾದಿ ಚಳುವಳಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. "ಕರ್ನಾಟಕದ ಖಾದಿ ಭಗೀರಥ" ಎಂಬ ಬಿರುದನ್ನು ಹೊಂದಿದ್ದಾರೆ. ದಕ್ಷಿಣ ಭಾರತದ ಮೊದಲ ಖಾದಿ ಕೇಂದ್ರವನ್ನು ಅವರು ಹುದಲಿಯಲ್ಲಿ ಸ್ಥಾಪಿಸಿದ್ದರು. ಅವರು ಸ್ವಾವಲಂಬನೆ ಮತ್ತು ದೇಶಭಕ್ತಿಯನ್ನು ಪ್ರತಿಪಾದಿಸುವ ಮೂಲಕ ಬ್ರಿಟಿಷ್ ಸರಕುಗಳ ಬಹಿಷ್ಕಾರದ ನೇತೃತ್ವ ವಹಿಸಿದ್ದರು.

ಗಂಗಾಧರ ರಾವ್‌ ಸ್ಮಾರಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳ, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಹಾಗೂ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್.ಕೆ ಪಾಟೀಲ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು ವೀರಪ್ಪ ಮೊಯ್ಲಿ, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ ಸೇಠ್‌, ಚಿಕ್ಕೋಡಿ– ಸದಲಗಾ ಶಾಸಕ ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮತ್ತಿತರರು ಹಾಜರಿದ್ದರು.

Tags:    

Similar News