ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಪೂರ್ಣ ಅನುದಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2024-10-15 10:24 GMT
ಮುಖ್ಯಮಂತ್ರಿ ಸಿದ್ದರಾಮಯ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಮಂಗಳವಾರ ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆಯಾಗಬಾರದೆಂದು ಕೋರುತ್ತಾ, ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದರ ಬಗ್ಗೆಯೂ ಸಭೆಯ ಗಮನವನ್ನು ಸೆಳೆದಿರುವುದಾಗಿ ತಿಳಿಸಿದ್ದಾರೆ. 

ಜಾತಿ ಪ್ರಮಾಣ ಪತ್ರದ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಿಗಮದಲ್ಲಿ ಸುಮಾರು 89.63 ಕೋಟಿ ರೂ.ಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂ.ಗಳನ್ನು ವಾಪಸ್ ಪಡೆಯಲಾಗಿದೆ. ಉಳಿದ 84.63 ಕೋಟಿ ರೂ.ಗಳಲ್ಲಿ 71.54 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿದೆ. ಇನ್ನುಳಿದ ಸುಮಾರು 13 ಕೋಟಿಗಳ ಮೊತ್ತವನ್ನು ವಸೂಲು ಮಾಡಿಕೊಡುವುದಾಗಿ ಎಸ್ ಐ ಟಿ ತಿಳಿಸಿದೆ. ಈ ರೀತಿ ಒಟ್ಟು ಅವ್ಯವಹಾರವಾಗಿದ್ದ ಪೂರ್ಣ ಮೊತ್ತವನ್ನೂ ಸಹ ಮರುಪಡೆಯಲಾಗುತ್ತಿದೆ. ಈ ಮಧ್ಯೆ, ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂಬರುವ ತೀರ್ಪಿನಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

ಉಪಚುನಾವಣೆ ಎದುರಿಸಲು ಸಿದ್ಧ

ರಾಜ್ಯದಲ್ಲಿ ನಡೆಯುವ ಉಪಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ದವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.

Tags:    

Similar News