ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌, ನಾಲ್ಕು ಲವ್ ಬರ್ಡ್ಸ್​​ಗೆ 444 ರೂ.!

ತಮಗೂ ತಮ್ಮ ಮೊಮ್ಮಗಳಿಗೂ ಫ್ರೀ ಟಿಕೆಟ್ ಪಡೆದ ಅಜ್ಜಿ ನಾಲ್ಕು ಲವ್ ಬರ್ಡ್ಸ್ ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್ ಶುಲ್ಕ ಪಾವತಿಸಿದ್ದಾರೆ.

Update: 2024-03-27 13:24 GMT
ನಾಲ್ಕು ಲವ್ ಬರ್ಡ್ಸ್ ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್
Click the Play button to listen to article

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ 'ಶಕ್ತಿ ಯೋಜನೆ'ಯಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ನೀವು ನಿಮ್ಮ ಪ್ರೀತಿಯ ಸಾಕು ಪ್ರಾಣಿ-ಪಕ್ಷಿಗಳನ್ನು ಬಸ್ ನಲ್ಲಿ ಕರೆದೊಯ್ದರೆ ಅದಕ್ಕಾಗಿ ನೀವು ಶುಲ್ಕ ಪಾವತಿಸಬೇಕಾಗುತ್ತದೆ. ಇದೀಗ ಅಂತಹುದ್ದೇ ಒಂದು ಘಟನೆ ಕೆ‌ಎಸ್‌ಆರ್‌ಸಿ‌ಟಿ ಬಸ್ ಒಂದರಲ್ಲಿ ನಡೆದಿದೆ.

1 ಹಕ್ಕಿಗೆ 111 ರೂಪಾಯಿ ಟಿಕೆಟ್

ಬುಧವಾರ( ಮಾರ್ಚ್‌ 27) ಬೆಳಿಗ್ಗೆ 08-18 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಕೆ‌ಎಸ್‌ಆರ್‌ಸಿ‌ಟಿ ಬಸ್‌ನಲ್ಲಿಅಜ್ಜಿ-ಮೊಮ್ಮಗಳು ಹೊರಟಿದ್ದರು. ಅವರಿಗೆ ಫ್ರೀ ಟಿಕೆಟ್‌ ಇತ್ತು. ಆದರೆ ಅವರು ತಮ್ಮೊಂದಿಗೆ ನಾಲ್ಕು ಲವ್ ಬರ್ಡ್ಸ್ ಹಕ್ಕಿ ಗಳನ್ನು ತೆಗೆದುಕೊಂಡು ಹೋಗಿದ್ದರು. ತಮಗೂ ತಮ್ಮ ಮೊಮ್ಮಗಳಿಗೂ ಫ್ರೀ ಟಿಕೆಟ್ ಪಡೆದ ಅಜ್ಜಿ ನಾಲ್ಕು ಲವ್ ಬರ್ಡ್ಸ್ ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್ ಶುಲ್ಕವನ್ನು ಪಾವತಿಸಿದ್ದಾರೆ. ನಾಲ್ಕು ಲವ್ ಬರ್ಡ್ಸ್ ಗಳಿಗೆ ಟಿಕೆಟ್ ನೀಡುವಾಗ ನಾಲ್ಕು ಮಕ್ಕಳು ಎಂದು ಟಿಕೆಟ್ ನಲ್ಲಿ ನಮೂದಿಸಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಕು ಪ್ರಾಣಿಗಳಿಗೆ ಟಿಕೆಟ್‌ ಪಡೆಯಬೇಕು

ಸಾಕು ಪ್ರಾಣಿ, ಪಕ್ಷಿಗಳನ್ನು ನಗರ, ಸಾಮಾನ್ಯ, ಹೊರವಲಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಮಾತ್ರ ಸಾಗಾಣಿಕೆ ಮಾಡಲು ಅನುಮತಿಸಿದೆ. ಪ್ರತಿಷ್ಠಿತ ಸಾರಿಗೆಗಳಾದ ಕರ್ನಾಟಕ ವೈಭವ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್ ಮತ್ತು ಎಲ್ಲಾ ರೀತಿಯ ಹವಾನಿಯಂತ್ರಿತ ಸಾರಿಗೆಗಳಲ್ಲಿ ಸಾಕು ಪ್ರಾಣಿ/ ಪಕ್ಷಿಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಮೊಲ, ನಾಯಿಮರಿ, ಬೆಕ್ಕು, ಪಕ್ಷಿ, ಪಂಜರದಲ್ಲಿನ ಪಕ್ಷಿ ಇತ್ಯಾದಿಗಳಿಗೆ ಮಕ್ಕಳಿಗೆ ವಿಧಿಸುವಂತೆ ಅರ್ಧ ಟಿಕೆಟ್‌ ಶುಲ್ಕ ವಿಧಿಸಲಾಗುತ್ತದೆ.

ಹಾಗಾಗಿ ನಿಯಮದಂತೆ ಬಸ್ಸಿನ ಕಂಡಕ್ಟರ್‌ ನಾಲ್ಕು ಪಕ್ಷಿಗಳಿಗೆ ನಾಲ್ಕು ಮಕ್ಕಳ ಲೆಕ್ಕದಲ್ಲಿ ಟಿಕೆಟ್‌ ನೀಡಿದ್ದಾರೆ. ಈ ಟಿಕೆಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಮಹಿಳೆ ಮತ್ತು ಮಗು ಉಚಿತ ಪ್ರಯಾಣ, ನಾಲ್ಕು ಪಕ್ಷಿಗಳಿಗೆ 444 ರೂ ತೆರಬೇಕು ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

Tags:    

Similar News