Cylender Blast | ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಸಿಲಿಂಡರ್‌ ಸ್ಫೋಟ; ನಾಲ್ವರಿಗೆ ಗಾಯ, 3 ಮನೆಗಳಿಗೆ ಹಾನಿ

ನಜೀರ್‌ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಸಿಲಿಂಡರ್‌ಗೆ ಬಳಸಿದ್ದ ರೆಗ್ಯುಲೇಟರ್‌ 2016ಕ್ಕೆ ಅವಧಿ ಮುಗಿದಿತ್ತು. ಹಾಗಾಗಿ ಅನಿಲ ಸೋರಿಕೆಯಾಗಿ, ಸಿಲಿಂಡರ್‌ ಸ್ಫೋಟಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.;

Update: 2024-12-01 06:12 GMT

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸಿಲಿಂಡರ್‌ ಸ್ಫೋಟಗೊಂಡು ಮೂರು ಮನೆಗಳು ಛಿದ್ರಗೊಂಡಿವೆ. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿ.ಜೆ. ಹಳ್ಳಿಯ ಆನಂದ ಥಿಯೇಟರ್ ಸಮೀಪದ ಮನೆಯಲ್ಲಿ ರಾತ್ರಿ 11,30ರ ಸುಮಾರಿಗೆ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಿಸಿದೆ. ನಜೀರ್, ಅವರ ಪತ್ನಿ ಕಲ್ಸುಮ್, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮೂರು ಮನೆಗಳು ಕೂಡ ಛಿದ್ರಗೊಂಡು, ಬೆಂಕಿ ಹೊತ್ತಿಕೊಂಡಿದೆ. ಘಟನಾ ಸ್ಥಳಕ್ಕೆ ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಜೀರ್‌ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಸಿಲಿಂಡರ್‌ಗೆ ಬಳಸಿದ್ದ ರೆಗ್ಯುಲೇಟರ್‌ 2016ಕ್ಕೆ ಅವಧಿ ಮುಗಿದಿತ್ತು, ಹಾಗಾಗಿ ಅನಿಲ ಸೋರಿಕೆಯಾಗಿ, ಸಿಲಿಂಡರ್‌ ಸ್ಫೋಟವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಜೀರ್‌ ಮನೆಯ ಸುತ್ತಲಿನ ಮನೆಗಳ ಶೀಟುಗಳು ಛಿದ್ರವಾಗಿವೆ

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಬಿಟಿಎಂ ಲೇಔಟ್‌ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು 36 ವರ್ಷದ ವ್ಯಕ್ತಿಗೆ ಸುಟ್ಟ ಗಾಯಗಳಾಗಿದ್ದವು. ಸ್ಫೋಟದ ರಭಸಕ್ಕೆ ಮನೆಯ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದವು.  ಜುಲೈ ತಿಂಗಳಲ್ಲಿ ಬೆಂಗಳೂರಿನ ಹುಳಿಮಾವು ಅಂಗಡಿಯೊಂದರಲ್ಲಿ ಸಿಲಿಂಡರ್‌ ಸ್ಫೋಟಿಸಿತ್ತು. ಸುರೇಶ್‌ ದಾಸ್‌ ಎಂಬುವರ ಅಂಗಡಿಯಲ್ಲಿ ಸಿಲಿಂಡರ್‌ ಸ್ಫೋಟದ ಪರಿಣಾಮ ಸುತ್ತಲಿನ ಮನೆಗಳ ಕಿಟಕಿ ಗಾಜುಗಳು, ಬಾಗಿಲಗಳಿಗೆ ಹಾನಿಯಾಗಿತ್ತು. ಅಂಗಡಿಯ ಶೆಟರ್‌ ನಜ್ಜುಗುಜ್ಜಾಗಿತ್ತು, ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೂ ಹಾನಿಯಾಗಿತ್ತು.

ಉಡುಪಿಯಲ್ಲಿ ಕಳೆದ ತಿಂಗಳು ಪಾರ್ಟಿ ಮಾಡುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಬಡಗುಪೇಟೆ ರಸ್ತೆಯ ಅಪಾರ್ಟ್ ಮೆಂಟ್‌ನಲ್ಲಿ ಘಟನೆ ನಡೆದಿತ್ತು. ಆದರೆ, ಯಾವುದೇ ಪ್ರಾಣಾಪಾಯ ಸಂಭಿಸಿರಲಿಲ್ಲ.

Tags:    

Similar News