ಕಟ್ಟಡದಿಂದ ಜಿಗಿದು ಕರ್ನಾಟಕ ಮಾಜಿ ಕ್ರಿಕೆಟಿಗ ಡೇವಿಡ್‌ ಜಾನ್ಸನ್ ಆತ್ಮಹತ್ಯೆ

ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ಡೇವಿಡ್ ಜಾನ್ಸನ್(52) ಅವರು ಗುರುವಾರ ( ಜೂನ್‌ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್‌ಮೆಂಟಿನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Update: 2024-06-20 10:20 GMT
ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ಡೇವಿಡ್ ಜಾನ್ಸನ್
Click the Play button to listen to article

ಖಿನ್ನತೆಯಿಂದ ಬಳಲುತ್ತಿದ್ದ ಟೀಮ್‌​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ಡೇವಿಡ್ ಜಾನ್ಸನ್(52) ಅವರು ಗುರುವಾರ ( ಜೂನ್‌ 20) ಬೆಂಗಳೂರಿನ ಕೊತ್ತನೂರು ಬಳಿ ಇರುವ ಅಪಾರ್ಟ್ಮೆಂಟ್‌ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಪರೀತ ಕುಡಿತದ ಚಟ ಹೊಂದಿದ್ದ ಡೇವಿಡ್ ಜಾನ್ಸನ್ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. 

ಹಾಸನದ ಅರಸಿಕೆರೆ ಮೂಲದ ಡೇವಿಡ್ ಜಾನ್ಸನ್ ಅವರು 1996ರಲ್ಲಿ ಭಾರತ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಇದಾಗಿತ್ತು. ಬ್ಯಾಟಿಂಗ್ ಆಲ್​ರೌಂಡರ್​ ಆಗಿದ್ದರು. 90ರ ಕಾಲಘಟ್ಟದಲ್ಲಿ  ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಆಸೀಸ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರ ವಿಕೆಟ್​ ಕಿತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅವರಿಗೆ ಭಾರತ ಪರ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರರಿಲ್ಲ.

ಇನ್ನು ಡೇವಿಡ್ ಜಾನ್ಸನ್ ನಿಧನಕ್ಕೆ ಕ್ರಿಕೆಟ್ ವಲಯದಿಂದ  ಸಂತಾಪ ಸಂದೇಶಗಳು ಹರಿದುಬಂದಿವೆ.  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹಿರಿಯ ಕ್ರಿಕೆಟಿಗ ಜಾನ್ಸನ್​ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. . "ನನ್ನ ಕ್ರಿಕೆಟ್ ಸಹೋದ್ಯೋಗಿ ಡೇವಿಡ್ ಜಾನ್ಸನ್ ಅವರ ನಿಧನವನ್ನು ಕೇಳಿ ದುಃಖವಾಯಿತು. ಅವರ ಕುಟುಂಬಕ್ಕೆ ಸಂತಾಪಗಳು. ಬೆನ್ನಿ ಬೇಗ ಹೋದರು" ಎಂದು ಕುಂಬ್ಳೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಘಟನೆಯ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಆರ್ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪರಿಚಯ





ಹಾಸನದ ಅರಸೀಕರೆ ಮೂಲದ ಡೇವಿಡ್‌ ಆರಂಭಿಕ ದಿನಗಳಲ್ಲಿ ಟೆನ್ನಿಸ್​ ಬಾಲ್​ ಕ್ರಿಕೆಟ್​ನಲ್ಲಿ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ವೇಗದ ಬೌಲಿಂಗ್​ ನಡೆಸಿ ವಿಕೆಟ್​ ಕೀಳುತ್ತಿದ್ದರು.  ಬಳಿಕ ಸ್ವಸ್ತಿಕ್​ ಕ್ರಿಕೆಟ್​ ಕ್ಲಬ್​ಗೆ ಸೇರಿ ಸ್ಟಿಚ್​ ಬೌಲಿಂಗ್​ ಅಭ್ಯಾಸ ನಡೆಸಿ ಹಂತ ಹಂತವಾಗಿ ಬೆಳೆದರು. ಕರ್ನಾಟಕ ಪರ ಅಂಡರ್​-19 ಪಂದ್ಯವನ್ನಾಡಿ ಕೇವಲ ಎರಡು ಪಂದ್ಯಗಳಿಂದ 13 ವಿಕೆಟ್​ ಕಿತ್ತು  ದಾಖಲೆ ಮಾಡಿದ್ದರು.  

ರಣಜಿ ತಂಡದಲ್ಲಿ ಕರ್ನಾಟಕ ಪರ  90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡುತ್ತಿದ್ದ ಜಾನ್ಸನ್, 1995-96ರಲ್ಲಿ ಕೇರಳದ ವಿರುದ್ಧದ ಪಂದ್ಯದಲ್ಲಿ ಹತ್ತು ವಿಕೆಟ್​ ಕಿತ್ತ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್​ನಲ್ಲಿ 63ಕ್ಕೆ 6 ವಿಕೆಟ್​ ಮತ್ತು ದ್ವಿತೀಯ ಇನಿಂಗ್ಸ್​ನಲ್ಲಿ 89ಕ್ಕೆ 4 ಕೆಡವಿದ್ದರು. ಇದಾದ ಬಳಿಕ ಬಂಗಾಳದ ವಿರುದ್ಧ 49 ಕ್ಕೆ 4 ಮತ್ತು ಬರೋಡಾ ವಿರುದ್ಧ 91 ಕ್ಕೆ 5 ವಿಕೆಟ್​ ಕಬಳಿಸಿದ್ದರು. ಅವರ ಈ ಬೌಲಿಂಗ್​ ಪ್ರದರ್ಶನ ಕಂಡು ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಗೆ ಟೀಮ್​ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿತ್ತು.

ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ವೆಂಕಟೇಶ್‌ ಪ್ರಸಾದ್‌, ಸುನಿಲ್‌ ಜೋಶಿ  ಜತೆ ರಣಜಿ ಪಂದ್ಯಗಳನ್ನು ಆಡುತ್ತಿದ್ದ ಡೇವಿಡ್‌ ಜಾನ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಲ್ಲಿ ಹೆಚ್ಚಿನ ಅವಕಾಶ ಪಡೆಯಲು ವಿಫಲರಾದರು. ಭಾರತ ಪರ 2 ಟೆಸ್ಟ್​ ಪಂದ್ಯಗಳನ್ನಾಡಿ 8 ರನ್​ ಸಹಿತ 3 ವಿಕೆಟ್​ ಕಿತ್ತಿದ್ದಾರೆ. ಆದರೆ ಬೌಲಿಂಗ್​ ಸಾಧನೆ ತೋರಿದ್ದರೂ ಕೂಡ ಅವರನ್ನು ಕೇವಲ 2 ಪಂದ್ಯಗಳಿಗೆ ಸೀಮಿತರನ್ನಾಗಿ ಮಾಡಿ ಆ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಕೊನೆಯ ಪಂದ್ಯವಾಡಿದ ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್​ ಕಿತ್ತಿದ್ದರು. ಕ್ರಿಕೆಟ್‌ ಮತ್ತು ಖಾಸಗಿ ಬದುಕಿನ ಸಮಸ್ಯೆಗಳಿಂದ ಖಿನ್ನತೆಗೊಳಗಿದ್ದರು ಎನ್ನಲಾಗಿದೆ.

.

Tags:    

Similar News