ಹೊತ್ತಿ ಉರಿದ ಎಲೆಕ್ಟ್ರಿಕ್‌ ಶೋರೂಂ: ಹುಟ್ಟುಹಬ್ಬದ ಮುನ್ನಾದಿನವೇ ಸುಟ್ಟುಕರಕಲಾದ ಪ್ರಿಯಾ

ಬೆಂಗಳೂರಿನ ರಾಜ್‌ಕುಮಾರ್‌ ರಸ್ತೆಯʻಮೈ ಇವಿ ಎಲೆಕ್ಟ್ರಿಕ್‌ ಸ್ಕೂಟರ್‌ʼ ಶೋರೂಂನಲ್ಲಿ ಮಂಗಳವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಶೋರೂಮ್ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Update: 2024-11-20 07:16 GMT
ಬೆಂಕಿಗಾಹುತಿಯಾದ ಶೋ ರೂಂನಲ್ಲಿ ಪ್ರಾಣ ಕಳೆದುಕೊಂಡ ಯುವತಿ ಪ್ರಿಯಾ

ಬೆಳಗ್ಗೆ ಕೆಲಸಕ್ಕೆಂದು ಮನೆಬಿಟ್ಟ ಯುವತಿ ಸಿಕ್ಕಿದ್ದು ಸುಟ್ಟುಕರಕಲಾಗಿ. ಬುಧವಾರ ಆಕೆ ಹುಟ್ಟುಹಬ್ಬವನ್ನು ಆಚರಿಸಬೇಕಿತ್ತು. ಜನ್ಮದಿನಕ್ಕೆಂದು ಸೋಮವಾರ ಹೊಸ ಬಟ್ಟೆ ಖರೀದಿಸಿದ್ದರು. ಎಲ್ಲಾ ಸರಿಯಿದ್ದರೆ ಪ್ರಿಯಾ ಬುಧವಾರ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು.

ಆದರೆ ಜನ್ಮದಿನ ಆಚರಿಸಿಕೊಳ್ಳಲು ಈಗ ಅವಳೇ ಇಲ್ಲ. ರಾಜಾಜಿನಗರದ ಇಲೆಕ್ಟ್ರಿಕ್ ಸ್ಕೂಟರ್ ಶೋ ರೂಮ್‌ಗೆ ಮಂಗಳವಾರ  ಬೆಂಕಿ ತಗುಲಿದ್ದ ಪರಿಣಾಮ ಅಲ್ಲೇ ಅಕೌಂಟ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಪ್ರಿಯಾ ಹೊರಬರಲಾರದೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾಳೆ. 

ಪ್ರತಿನಿತ್ಯ ಬೆಳಗ್ಗೆ 10ಗಂಟೆ ಸುಮಾರಿಗೆ ಮನೆಯಿಂದ ಕೆಲಸಕ್ಕೆ ಹೊರಡುವ ಪ್ರಿಯಾ ರಾತ್ರಿ 8ಗಂಟೆಗೆ ಮನೆ ಸೇರುತ್ತಿದ್ದರು. ಆದರೆ ಮಂಗಳವಾರ ವಿಧಿಯಾಟವೇ ಬೇರೆಯಾಗಿತ್ತು. ತನ್ನ ಹುಟ್ಟಹಬ್ಬದ ಮುನ್ನಾದಿನವೇ ಬಾರದ ಲೋಕಕ್ಕೆ ತೆರಳಿದ್ದಾರೆ.  ಪ್ರಿಯಾ ಬೆಂಗಳೂರಿನ ಓಕಳಿಪುರದ ನಿವಾಸಿಯಾಗಿದ್ದು, ತಂದೆ ತಾಯಿ ಹಾಗೂ ಸಹೋದರರ ಜೊತೆ ವಾಸಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಈ ಕಂಪೆನಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಏಕಾಏಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲ್ಲಾ ನೌಕರರು ಹೊರಗೆ ಧಾವಿಸಿದರೆ, ದಟ್ಟ ಹೊಗೆ ಮತ್ತು ಬೆಂಕಿಯಿಂದಾಗಿ ಪ್ರಿಯಾಗೆ ಹೊರಬರಲಾಗಲಿಲ್ಲ. ಗಾಬರಿಕೊಂಡ ಪ್ರಿಯಾ ಕ್ಯಾಶಿಯರ್‌ ರೂಂಗೆ ಹೋಗಿ ಲಾಕ್‌ ಮಾಡಿಕೊಂಡಿದ್ದಾರೆ. ಆದರೆ ದಟ್ಟ ಹೊಗೆ ಮತ್ತು ಬೆಂಕಿಗೆ ಪ್ರಿಯಾ ಸುಟ್ಟು ಕರಕಲಾಗಿದ್ದಾರೆ. 

ಅನಾಹುತ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪ್ರಿಯಾಳ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಮಳಿಗೆ ಕಡೆಗೆ ಕೈ ತೋರಿಸಿಕೊಂಡು ತಾಯಿ, ಪ್ರಿಯಾ.. ಪ್ರಿಯಾ ಎಲ್ಲಿದ್ದೀಯಮ್ಮ ಎಂದು ಕಣ್ಣೀರು ಸುರಿಸುತ್ತ ಚೀರಾಡುತ್ತಿದ್ದುದು ಎಲ್ಲರ ಕಣ್ಣು ಒದ್ದೆಯಾಗಿಸಿತು. ತಂದೆ ಆರ್ಮುಗಂ ಸಹ, ಮಗಳಿಗೆ ಏನಾಯಿತು ಎಂದು ಅಧಿಕಾರಿಗಳ ಮುಂದೆ ಅಂಗಲಾಚುತ್ತಿದ್ದ ದೃಶ್ಯ ಮನಕಲಕುವಂತಿತ್ತು.

"ನವೆಂಬರ್‌ 20ಕ್ಕೆ ಆಕೆಯ ಜನ್ಮ ದಿನ. ಬರ್ತ್‌ಡೇ ಅಂದ್ಕೊಂಡು ಬಟ್ಟೆ ಎಲ್ಲಾ ತರಿಸಿ ಇಟ್ಟಿದ್ದೆ ಸರ್‌. ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹೋಗಿದ್ಲು. ಏನು ಅರ್ಥ ಆಗ್ತಿಲ್ಲ ಸರ್. ಅದರ ಓನರ್‌ ಎಲ್ಲಿದ್ದಾನೆ ಸರ್ ಅವನು. 6.30ಗೆ ನನ್ನ ಮಗನಿಗೆ ಫೋನ್‌ ಮಾಡಿದ್ದಾರೆ. ಮಾಮೂಲಿ 7 ಅಥವಾ 7.30 ಹಾಗೆ ಮನೆಯಲ್ಲಿ ಇರುತ್ತಿದ್ದಳು . ನನ್ನ ಫ್ರೆಂಡ್‌ ಫೋನ್‌ ಮಾಡಿ ನನಗೆ ವಿಚಾರ ತಿಳಿಸಿದರು. 5.15 ಬೆಂಕಿ ಬಿದ್ದಿದೆ. ಯಾರೂ ತಿಳಿಸಲಿಲ್ಲ. 20 ಜನ ಇಲ್ಲಿ ಕೆಲಸ ಮಾಡ್ತಾರೆ,"  ಎಂದು ಪ್ರಿಯಾಳ ತಂದೆ ಆರ್ಮುಗಂ ಮಾಧ್ಯಮಗಳ ಜತೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ರಾಜಾಜಿನಗರದ  ರಾಜ್‌ಕುಮಾರ್‌ ರಸ್ತೆಯಲ್ಲಿರುವ ʻಮೈ ಇವಿ ಎಲೆಕ್ಟ್ರಿಕ್‌ ಸ್ಕೂಟರ್‌ʼ ಶೋರೂಂನಲ್ಲಿ ಮಂಗಳವಾರ ಸಂಜೆ  ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕಟ್ಟಡವೇ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯು ಆಕಸ್ಮಿಕವಾಗಿ ತಗುಲಿದೆ ಎನ್ನಲಾಗಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮಳಿಗೆಗೆ ಚಾಚಿಕೊಂಡಿತು. ಕೂಡಲೇ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಅವರೊಂದಿಗೆ ರಾಜಾಜಿನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳದಲ್ಲಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಸುಟ್ಟು ಕರಕಲಾಗಿದ್ದ ಪ್ರಿಯಾ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. 

ಸಂಜೆ 5:30ರ ಸುಮಾರಿಗೆ ಶಾರ್ಟ್‌ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಶೋರೂಂನಲ್ಲಿದ್ದ 45ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಅವಗಢದಲ್ಲಿ ಶೋ ರೂಮ್‌ನ ಸಿಬ್ಬಂದಿ ದಿಲೀಪ್‌ ಎನ್ನುವವನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಎರಡೂ ಕೈಗಳಿಗೆ ಬ್ಯಾಂಡೇಜ್‌ ಹಾಕಲಾಗಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿಂತೆ ಮಾಲೀಕ ಹಾಗೂ ಮ್ಯಾನೇಜರ್‌ ಆಗಿರುವಂತಹ ಪುನೀತ್‌ ಹಾಗೂ ಯುವರಾಜ್‌ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಜಾಜಿನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಮೋದ್‌ ʻದ ಫೆಡರಲ್‌ ಕರ್ನಾಟಕʼ ಕ್ಕೆ ತಿಳಿಸಿದ್ದಾರೆ. 

Tags:    

Similar News