ಹುಸಿಯಾದ ಸಿನಿ ಕಲಾವಿದೆಯರ ನಿರೀಕ್ಷೆ; ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯ ತನಿಖೆಗೆ ʻಫೈರ್‌ʼ ಪಟ್ಟು

ಕರ್ನಾಟಕ ಮಹಿಳಾ ಆಯೋಗದ ಸೂಚನೆಯನ್ವಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ನಡೆದ ಸಭೆಯಿಂದ ಕಲಾವಿದೆಯರು, ಮಹಿಳಾ ಕಾರ್ಮಿಕರು ಧನಾತ್ಮಕ ಫಲಿತಾಂಶವನ್ನು ನಿರೀಕ್ಷಿಸಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳಿಗೆ ಕಾದಿದ್ದು ನಿರಾಸೆಯೇ. ನಿವೃತ್ತ ನ್ಯಾಯಾಧೀಶರ ತನಿಖೆಗೆ ಮಂಡಳಿಯಿಂದ ಒಂದರ್ಥದಲ್ಲಿ ಪ್ರತಿರೋಧ ವ್ಯಕ್ತವಾಯಿತು. ಲೈಂಗಿಕ ದೌರ್ಜನ್ಯ ತಡೆಗೆ (Prevention of Sexual Harassment- PoSH) ರಚನೆಗೆ ಕೂಡ ಕಾನೂನು ತಜ್ಞರೊಂದಿಗೆ ಚರ್ಚಿಸಿ, ತೀರ್ಮಾನವನ್ನು ತಿಳಿಸುವುದಾಗಿ ಮಂಡಳಿ ಹೇಳಿತು.

Update: 2024-09-18 03:13 GMT

ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರು ಎದುರಿಸುತ್ತಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹಾಗೂ ಚಿತ್ರೀಕರಣದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಲು ಉಚ್ಛ ನ್ಯಾಯಾಲಯದ ಅಥವಾ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣಾ ಸಮಿತಿಯೊಂದನ್ನು ನೇಮಿಸಬೇಕೆಂದು Film Industry for Rights and Equality (FIRE) ಒಕ್ಕೂಟದ ನಿಯೋಗವೊಂದು ಇತ್ತೀಚೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿಯೊಂದನ್ನು ಸಲ್ಲಿಸಿತ್ತು. ಕನ್ನಡ ಚಿತ್ರರಂಗದೊಂದಿಗೆ ಅತ್ಯುತ್ತಮ ಸಂಬಂಧವಿರುವ ಸಿದ್ದರಾಮಯ್ಯ ನವರು ಸಕಾರಾತ್ಮಕ ಪ್ರತಿಕ್ರಿಯಿಸಿದರು. ಈ ಕುರಿತು ಕರ್ನಾಟಕ ಮಹಿಳಾ ಆಯೋಗದ ಸೂಚನೆಯ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯೊಂದನ್ನು ಕರೆದಿತ್ತು (ಹೀಗೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ-KFCC ಯ ಅಧ್ಯಕ್ಷ ಎನ್.‌ ಎಂ. ಸುರೇಶ್‌ ಅವರೇ ಒಪ್ಪಿಕೊಂಡಿದ್ದಾರೆ).

ಹುಸಿಯಾಗದ ನಿರಾಸೆಯ ನಿರೀಕ್ಷೆ

ಆದರೆ, ಈ ಸಭೆಯಲ್ಲಿ ಎಲ್ಲವೂ ನಿರೀಕ್ಷಿಸಿದಂತೆ ಆಯಿತು. ಕೇರಳದ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದ ಮಹಿಳಾ ಕಲಾವಿದರಿಗಾಗುತ್ತಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂಬ FIRE ಬೇಡಿಕೆಯನ್ನು KFCC ಒಪ್ಪಿಕೊಳ್ಳಲಿಲ್ಲ. “ಎಂದಿನಂತೆ KFCC ತನ್ನ ಯಜಮಾನಿಕೆಯ ಧೋರಣೆಯನ್ನೇ ಅನುಸರಿಸಿತು. ಕಲಾವಿದೆಯರಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ಅವರ ಧ್ವನಿಯನ್ನು ಅಡಗಿಸಲಾಯಿತು. ನಾವು ನಿರೀಕ್ಷಿಸಿದ್ದೇನೂ ಆಗಲೇ ಇಲ್ಲ” ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಹಿರಿಯ ಕಲಾವಿದೆಯೊಬ್ಬರು ʼದ ಫೆಡರಲ್-ಕರ್ನಾಟಕʼದ ಜೊತೆ ಮಾತನಾಡಿ ನೊಂದುಕೊಂಡರು.

ಮಹತ್ವದ್ದೆಂದು ಭಾವಿಸಲಾದ ಈ ಸಭೆಯ ಫಲಿತಾಂಶವೇನೆಂದು ಕೇಳಿದರೆ ಸಿಕ್ಕುವ ಉತ್ತರ; ಲೈಂಗಿಕ ದೌರ್ಜನ್ಯ ತಡೆಗೆ (Prevention of Sexual Harassmen POSH) ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸೂಚಿಸುವುದರೊಂದಿಗೆ ಸಭೆ ʻಸುಖಾಂತ್ಯʼ ಕಂಡಿತು ಎಂದು ಹೇಳಬಹುದು. ಈ POSH ಎನ್ನುವುದು ಕಾರ್ಯನಿರ್ವಹಿಸುವ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳಿಗಾಗುತ್ತಿರುವ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013 ರ ಅಡಿಯಲ್ಲಿ ಬರುವ ವ್ಯವಸ್ಥೆ. ತಮ್ಮ ಬೇಡಿಕೆಯನ್ನು ಮಂಡಿಸಲು ಅವಕಾಶ ಸಿಗುತ್ತದೆ ಎಂದು ಭಾವಿಸಿ ಬಂದ ಮಹಿಳಾ ಕಲಾವಿದೆಯರಿಗೆ ಕಾದಿದ್ದು ನಿರಾಸೆ ಮಾತ್ರ. ಕನ್ನಡ ಚಿತ್ರರಂಗದ ಕೆಲವು ಪ್ರಮುಖ ಕಲಾವಿದರು ಮತ್ತು ನಿರ್ಮಾಪಕರು “ಅಂಥದ್ದೇನೂ ಕನ್ನಡ ಚಿತ್ರರಂಗದಲ್ಲಿ ನಡೆದಿಲ್ಲ” ಎಂದು ಸಮರ್ಥಿಸುವ ಮಟ್ಟಕ್ಕೆ ಇಳಿದಾಗಲೇ ಈ ಫಲಿತಾಂಶದ ಸೂಚನೆ ಬಹು ಮಂದಿಗೆ ಸಿಕ್ಕಿತ್ತು.

ಹೇಮಾ ಸಮಿತಿ ಸಲ್ಲಿಸಿದ ವರದಿ. ವರದಿಯ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ತೆಗೆದುಕೊಂಡ ತೀರ್ಮಾನ, ಇದರಿಂದಾಗಿ ಮಲೆಯಾಳಂ ಚಿತ್ರರಂಗದ ಕಪಾಟಿನೊಳಗೆ ವರ್ಷಗಳಿಂದ ರಹಸ್ಯವಾಗಿ ಅಡಗಿಕುಳಿತಿದ್ದ ಅಸ್ತಿಪಂಜರಗಳು ಪಟಪಟನೆ ಬೀದಿಗೆ ಬಿದ್ದದ್ದು, ಮಲೆಯಾಳಂ ಚಿತ್ರರಂಗದ ದಿಗ್ಗಜರೆನ್ನಿಸಿಕೊಂಡ ಹಲವಾರ ಮುಖವಾಡಗಳು ಕಳಚಿ ಬಿದ್ದದ್ದು, ಈ ಮೂಲಕ ಮಲೆಯಾಳಂ ಚಿತ್ರರಂಗದ ಬೇರುಗಳು ಸಡಿಲಗೊಂಡು, ಬುನಾದಿಯೇ ಅಲುಗಾಡುತ್ತಿರುವುದು KFCC ಯನ್ನು ಬೆಚ್ಚಿ ಬೀಳಿಸಿರುವುದು ಖಚಿತ. ಹಾಗಾಗೇ ಅಂಥ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಸ್ಪಷ್ಟವಾಗಿಯೇ ಅಪಸ್ವರ ಎತ್ತಿದೆ ಎನ್ನುವುದು ಮಹಿಳಾ ಕಲಾವಿದರ ಅನಿಸಿಕೆ. ಈ ಕಾರಣದಿಂದಲೇ, POSH ರಚನೆ ಕುರಿತು ತನ್ನ ಅಭಿಪ್ರಾಯ ನೀಡಲು KFCC ಕಾಲಾವಕಾಶ ಕೇಳಿದಂತಿದೆ. ಸೋಮವಾರ KFCC ನಡೆಸಿದ ಸಭೆಯಲ್ಲಿ “ ಮಂಡಳಿಯು ತನ್ನ ಪ್ರತಿಕ್ರಿಯೆ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ʼದ ಫೆಡರಲ್-ಕರ್ನಾಟಕಕ್ಕೆ ತಿಳಿಸಿದ್ದಾರೆ. ಮಂಡಳಿ ಕೂಡ “ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, , ಮಂಡಳಿಯ ಕಾರ್ಯಕಾರಿ ಸಮಿತಿಯ ಮುಂದೆ ವಿಷಯ ಪ್ರಸ್ತಾಪಿಸಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದೆ.

ಹೆಣ್ಣುಮಕ್ಕಳೊಂದಿಗೆ ಆಪ್ತ ಸಮಾಲೋಚನೆ

“ಸಭೆಯಲ್ಲಿ ಕಲಾವಿದೆಯರ ಹೊರತಾಗಿ, ನೃತ್ಯಗಾತಿಯರು, ಹಿನ್ನೆಲೆ ಗಾಯಕರು, ತೆರೆಯ ಹಿಂದೆ ದುಡಿಯುವ ಹೆಣ್ಣುಮಕ್ಕಳು ಭಾಗವಹಿಸಿದ್ದರು. ಅವರು ಚಿತ್ರೀಕರಣದ ಸಂದರ್ಭದಲ್ಲಿ ತಮಗಾಗುತ್ತಿರುವ ಹಿಂಸೆ, ತೊಂದರೆಗಳನ್ನು ಹೇಳಿದರು. ನಾನು ಪ್ರತ್ಯೇಕವಾಗಿ ಅವರ ಸಮಸ್ಯೆಗಳನ್ನು ವಿವರವಾಗಿ ಕೇಳಿಕೊಳ್ಳುತ್ತೇನೆ. ದಾಖಲಿಸಿಕೊಳ್ಳುತ್ತೇನೆ. ನಂತರ ಚಿತ್ರರಂಗದ ಹೆಣ್ಣು ಮಕ್ಕಳ ಒಟ್ಟು ಅಭಿಪ್ರಾಯವನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳೊಂದಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿವರವಾದ ತನಿಖೆಯನ್ನು ಕುರಿತು ಚರ್ಚಿಸುತ್ತೇನೆ” ಎಂದು ನಾಗಲಕ್ಷ್ಮಿ ಚೌಧರಿ, ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

ಆದರೆ ಸೋಮವಾರದ ಸಭೆ ನಡೆದ ರೀತಿಯನ್ನು ಗಮನಿಸಿದರೆ, ಮಂಡಳಿಗೆ ಈ ರೀತಿಯ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಯ ರಚನೆಯ ಬಗ್ಗೆ ಅಭ್ಯಂತವಿದೆ ಎನ್ನುವುದು ಸ್ಪಷ್ಟವಾಗುತ್ತದೆ. “ರಾಜ್ಯ ಮಹಿಳಾ ಆಯೋಗ ಸಭೆ ಕರೆದಿದ್ದೇ, ಮಹಿಳೆಯರ ಸಮಸ್ಯೆಗಳನ್ನು ಕೇಳಿಸಿಕೊಳ್ಳಲು. ಆದರೆ ಈ ಮಹತ್ವದ ಸಭೆಯಲ್ಲಿ ಲೈಂಗಿಕ ದೌರ್ಜನ್ಯದಂಥ ಪ್ರಶ್ನೆ ಚರ್ಚೆಯಾಗಲೇ ಇಲ್ಲ. ನಾವುಗಳು ಮಾತನಾಡಲು ಯತ್ನಿಸಿದಾಗ. “ನೀನು ಕೂತ್ಕಕೋ ಅಮ್ಮ. ನೀನು FIRE ನಿಂದ ಬಂದಿದ್ದಿಯಾ” ಎಂದು ಒಬ್ಬ ಹಿರಿಯ ನಿರ್ಮಾಪಕರು ನನ್ನ ಬಾಯಿ ಮುಚ್ಚಿಸಿದರು” ಎಂದು ನಟಿ ನೀತು ಶೆಟ್ಟಿ ಹೇಳಿದರು.

“ಮಹಿಳಾ ಆಯೋಗವು ಇಲ್ಲಿಗೆ ಬಂದಿರುವುದೇ ಮಹಿಳೆಯ ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳುವ ಉದ್ದೇಶದಿಂದ. ಆದರೆ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು ಏನೂ ಇಲ್ಲ. ನಾವು ಇಲ್ಲಿ ಹಲವಾರು ವರ್ಷಗಳಿಂದ ಇದ್ದೇವೆ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು. ನಿಮಗೇನೂ ಆಗಿಲ್ಲ. ಅದು ಒಳ್ಳೆಯದು. ಆದರೆ ನನಗೆ ಕೆಟ್ಟ ಅನುಭವವಾಗಿದೆ ಎಂದು ನಾನು ಹೇಳಿದೆ. ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆಯಾದರೆ, ಸಮಿತಿಯ ಮುಂದೆ ನಾನು ಎಲ್ಲ ವಿವರಗಳನ್ನು ಹೇಳುತ್ತೇನೆ. ನನಗೆ ತೊಂದರೆ ಕೊಟ್ಟವರ ಹೆಸರನ್ನೂ ಹೇಳುತ್ತೇನೆ ಎಂದು ಹೇಳಿದೆ” ಎಂದು ನೀತು ಶೆಟ್ಟಿ ಹೇಳಿದರು.

ಲೈಂಗಿಕ ಶೋಷಣೆಯ ಸತ್ಯಾಸತ್ಯತೆ ತಿಳಿದುಕೊಳ್ಳಲು ಕೇರಳ ಮಾದರಿಯ ನಿವೃತ್ತ ನ್ಯಾಯಾಧೀಶರ ಸಮಿತಿಯ ರಚನೆ ಬಗ್ಗೆ ಸಭೆಯಲ್ಲಿ ತೀವ್ರತರವಾದ ವಾದ-ಪ್ರತಿವಾದಗಳು ನಡೆದವು. ಇಂಥ ಸಮಿತಿ ರಚನೆಯಾದರೆ, ಮುಂದೊಂದು ದಿನ ಮಹಿಳೆಯರೇ ಇಲ್ಲದ ಚಿತ್ರರಂಗ ನಿರ್ಮಾಣವಾಗುತ್ತದೆ. ಎಂದು ನಿರ್ದೇಶಕರೊಬ್ಬರು ಈ ಸಂದರ್ಭದಲ್ಲಿ ಹೇಳಿದ್ದು, ಎಚ್ಚರಿಕೆಯ ಮಾತಿನಂತೆ ಕೇಳಿಸಿತು.

ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ಕಲಾವಿದೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಮಾಜಿ ಅಧ್ಯಕ್ಷೆ ತಾರಾ ಅನುರಾಧ ಅವರ ಮಾತುಗಳು ಆಶ್ಚರ್ಯ ಹುಟ್ಟಿಸಿತು. “ನಾವಿನ್ನೂ, ಕಾರ್ಮಿಕರ ಕಾಯ್ದೆಯಡಿಯಲ್ಲಿಯೇ ಇದ್ದೇವೆ. ನಮ್ಮ ಚಿತ್ರರಂಗ ಇನ್ನೂ ಉದ್ಯಮದ ಸ್ವರೂಪ ಪಡೆದುಕೊಂಡಿಲ್ಲ. ಉದ್ಯಮವೆಂದು ಘೋಷಣೆಯಾದರೆ ಮಾತ್ರ, ಕಾರ್ಮಿಕ ಕಾಯ್ದೆಯಡಿ ಬರುವ ಎಲ್ಲ ಸೌಲಭ್ಯಗಳೂ ಸಿಕ್ಕುತ್ತವೆ. ಹಾಗಾಗಿ ನಮ್ಮೆಲ್ಲರ ಮೊದಲ ಆದ್ಯತೆ, ಚಿತ್ರರಂಗವನ್ನು ʻಉದ್ಯಮʼ ಎಂದು ಘೋಷಿಸುವಂತೆ ಮಾಡುವುದಾಗಬೇಕು”. “ಇಂಥ ಸಂದರ್ಭದಲ್ಲಿ ಮಂಡಳಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎನ್ನುವ ಪ್ರಶ್ನೆ ಎಲ್ಲ ಹೆಣ್ಣು ಮಕ್ಕಳನ್ನೂ ಕಾಡಿದಂತೆ ತೋರುತ್ತಿತ್ತು.

ಇನ್ನೂ ಆಶ್ಚರ್ಯ ಹುಟ್ಟಿಸಿದ್ದು ಮಂಡಳಿಯ ಮಾಜಿ ಅಧ್ಯಕ್ಷ ಸಾ. ರಾ. ಗೋವಿಂದು ಅವರ ಮಾತು. “ಕೇರಳದ ಮಾದರಿಯಲ್ಲಿ ಯಾವುದೇ ಸಮಿತಿಯ ರಚನೆ ಅಗತ್ಯವಿಲ್ಲ. ನಮ್ಮಲ್ಲಿ ಮಹಿಳಾ ಆಯೋಗವಿದೆ. ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಂಡರೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತೇವೆ. ಕೇರಳದ ಮಾದರಿಯಲ್ಲಿ ಸಮಿತಿ ರಚಿಸಿದರೆ ಚಿತ್ರರಂಗ ಬಹಳ ತೊಂದರೆಗೆ ಸಿಕ್ಕಿಹಾಕಿ ಕೊಳ್ಳುತ್ತದೆ”. ಆದರೆ, ಹಿರಿಯ ನಿರ್ಮಾಪಕ ರಾಕ್ ಲೈನ್‌ ವೆಂಕಟೇಶ್‌ ಕೇರಳದ ಮಾದರಿ ಸಮಿತಿ ರಚನೆಯಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೆ , ಆ ರೀತಿ ಸಮಿತಿ ರಚನೆಯಾದಾಗ ವ್ಯಾವಹಾರಿಕವಾಗಿ ಸಮಸ್ಯೆಯಾಗುತ್ತದೆ. ಕೇರಳ ರೀತಿಯ ಪ್ರಕರಣಗಳು ಹೊರಬರುತ್ತದೆ ಎಂಬ ಕಾರಣಕ್ಕೆ ಬೇಡವೆನ್ನುತ್ತಿಲ್ಲ” ಎನ್ನುತ್ತಾರೆ.

ಮತ್ತೊಂದು ದುರಂತವೆಂದರೆ, ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆಗೆ ಆಗ್ರಹಿಸಿದ ಹಲವು ಕಲಾವಿದರು, ಮಂಡಳಿ ಕರೆದ ಸಭೆಯಲ್ಲಿ ಭಾಗವಹಿಸದೇ ಇದ್ದದ್ದು. ಈ ಹಕ್ಕೊತ್ತಾಯದ ಪತ್ರಕ್ಕೆ ಸುಮಾರು 136 ಮಂದಿ ಸಹಿ ಮಾಡಿದ್ದರು. ಆ ಪೈಕಿ, ಖ್ಯಾತ ನಟ ಸುದೀಪ್‌, ಮತ್ತು ನಟಿ-ನಿರ್ಮಾಪಕಿ ರಮ್ಯ ಕೂಡ ಸಹಿ ಮಾಡಿದ್ದರು ಅವರುಗಳು ಸಹಿ ಮಾಡಿದ ಆಧಾರವನ್ನೇ ನಟಿ ಭಾವನಾ ರಾಮಣ್ಣ ಪ್ರಶ್ನಿಸಿದ್ದಾರೆ. “ಹಾಗಾದರೆ, ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ನಡೆದಿದೆಯೇ? ನಡೆದಿದ್ದರೆ ಇವರಿಗೆ ಗೊತ್ತಾದದ್ದು ಹೇಗೆ? ಗೊತ್ತಿದ್ದರೂ, ಇವರೇಕೆ ಸುಮ್ಮನಿದ್ದರು? ಎಂದು ಭಾವನಾ ರಾಮಣ್ಣ ಪ್ರಶ್ನಿಸಿದ್ದಾರೆ.

ಮಹಿಳಾ ಆಯೋಗ ಮಂಡಳಿಯಲ್ಲಿ ಸಭೆ ನಡೆಸಿದ್ದೇಕೆ?

ಅಷ್ಟೇ ಅಲ್ಲ. ರಾಜ್ಯ ಸರ್ಕಾರ ಮಹಿಳಾ ಆಯೋಗವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳುಹಿಸಿದ ಕ್ರಮವನ್ನೇ ಆಕೆ ಪ್ರಶ್ನಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಸೇರಿದಂತೆ ಚಿತ್ರರಂಗದಲ್ಲಿ 24 ಪ್ರಾತಿನಿಧಿಕ ವೇದಿಕೆಗಳಿವೆ. ಕರ್ನಾಟಕ ಚಲನಚಿತ್ರದ ಯಾವುದೇ ಪ್ರಾತಿನಿಧಿಕ ವೇದಿಕೆಗೂ ತಿಳಿಸದೆ, ಕೇವಲ ವಾಣಿಜ್ಯ ಮಂಡಳಿಯನ್ನು ಆಯ್ಕೆ ಮಾಡಿಕೊಂಡು ಸಭೆ ನಡೆಸಿರುವುದು ಕಾನೂನಾತ್ಮಕವಲ್ಲ ಎಂದು ಅವರು ವಾದಿಸುತ್ತಾರೆ. ಅವರ ಮಾತಿನಲ್ಲಿ ಅರ್ಥವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋಗಿ ಸಭೆ ನಡೆಸುವ ಅವಶ್ಯಕತೆ ಏನಿತ್ತು ಎಂಬುದು ಸಿನಿಮಾ ರಂಗದ ಹಲವರ ಪ್ರಶ್ನೆ ಕೂಡ ಆಗಿದೆ.

ನಿವೃತ್ತ ನ್ಯಾಯಮೂರ್ತಿ ತನಿಖೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ

“ಆದರೆ, FIRE ಒಕ್ಕೂಟ ಮಾತ್ರ ಕರ್ನಾಟಕದಲ್ಲಿ ಹೇಮಾ ಸಮಿತಿ ಮಾದರಿಯಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿ ರಚನೆಯಾಗಬೇಕೆಂಬ ಬೇಡಿಕೆಯಿಂದ ಹಿಂದೆ ಸರಿದಿಲ್ಲ” ಎಂದು ಒಂದರ್ಥದಲ್ಲಿ ಕರ್ನಾಟಕದಲ್ಲಿ FIREನ ನಾಯಕತ್ವ ವಹಿಸಿಕೊಂಡಿರುವ ನಾಯಕ ನಟ, ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್‌ ಕುಮಾರ್‌ ಅಹಿಂಸಾ ʼದ ಫೆಡರಲ್-ಕರ್ನಾಟಕʼಕ್ಕೆ ಪ್ರತಿಕ್ರಿಯಿಸಿದ್ದಾರೆ.

“POSH ಕಾನೂನಾತ್ಮಕವಾಗಿ ರೂಪಿಸಬೇಕಾದ ವ್ಯವಸ್ಥೆ. ಆದರೆ, ಇದುವರೆಗೆ ನಡೆದಿದೆ ಎನ್ನಲಾದ, ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಚಿತ್ರೀಕರಣದ ಸ್ಥಳಗಳಲ್ಲಿ ಅವರಿಗೆ ನೀಡಬೇಕಾ ರಕ್ಷಣೆ ಮತ್ತು ಸೌಲಭ್ಯಗಳನ್ನು ಕುರಿತು ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟಕದಲ್ಲಿ ತನಿಖೆಯಾಗಬೇಕು ಮತ್ತು ಸರ್ಕಾರ ಅದರ ವರದಿಯನ್ನು ಆಧರಿಸಿಯೇ ಕ್ರಮಕೈಗೊಳ್ಳಬೇಕು. ಹಾಗಾಗಿ ತನಿಖೆಯ ಬೇಡಿಕೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ” ಎನ್ನುತ್ತಾರೆ ಚೇತನ್.‌

ಮೌನಗೊಳಿಸುವ ಯತ್ನ

“ರಾಜ್ಯ ಮಹಿಳಾ ಆಯೋಗಕ್ಕೆ, ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರುಗಳು ಬಂದಿವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ FIREಗೆ ದೂರುಗಳು ಬಂದಿವೆ 90 ವರ್ಷದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಂಥ ಯಾವ ಬೆಳವಣಿಗೆಯೂ ನಡೆದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಡೆದಿದೆ ಎನ್ನುವುದಕ್ಕೆ ನಮ್ಮಲ್ಲಿ ದೂರುಗಳಿವೆ” ಎನ್ನುತ್ತಾರೆ, FIRE ಒಕ್ಕೂಟದ ಅಧ್ಯಕ್ಷೆ ಖ್ಯಾತ ಚಲನಚಿತ್ರ ನಿರ್ದೇಶಕಿ, ಕವಿತಾ ಲಂಕೇಶ್‌. ಸಭೆಯ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು “ಸಭೆಯಲ್ಲಿ ಮಾತನಾಡಲು ಹೋದವರಿಗೆ ಅವಕಾಶವನ್ನೇ ನೀಡಲಿಲ್ಲ. ಕೇವಲ ನಮ್ಮಂಥವರನ್ನು ಮೌನಗೊಳಿಸುವ ಪ್ರಯತ್ನ ಮಾಡಲಾಯಿತು. ನಾಲ್ಕೈದು ವರ್ಷದ ಹಿಂದ ಇಂಥ ಸಮಸ್ಯೆಯೊಂದು ಬಂದಾಗ, ʼಕೈ ಕುಲುಕಿ ಸಮಸ್ಯೆ ಬಗೆಹರಿಸಿಕೊಳ್ಳಿʼ ಎಂದಿದ್ದರು. ಹಾಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯ ರಚನೆಗೆ ನಮ್ಮ ಒತ್ತಾಯ ಮುಂದುವರಿಯುತ್ತದೆ” ಎಂದಿದ್ದಾರೆ.

ಒಟ್ಟಾರೆಯಾಗಿ ಕಲಾವಿದೆಯರು, ಮಹಿಳಾ ಕಾರ್ಮಿಕರು ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಲಿ ಹಿಂದಿರುಗುವಂತಾಯಿತು ಎಂಬ ಹಿರಿಯ ಕಲಾವಿದೆಯ ಮಾತು ಶಬ್ದದೊಳಗಿನ ನಿಶ್ಯಬ್ದದಂತೆ ಕೇಳಿಸಿತು.

Tags:    

Similar News