Federal Explainer | ವಿವಾಹ ಪ್ರಮಾಣಪತ್ರ ಪ್ರಕರಣ: ವಕ್ಫ್‌ ಬೋರ್ಡ್‌ ಸುತ್ತಿಕೊಂಡ ಮತ್ತೊಂದು ವಿವಾದ ಏನಿದು?

ಏನಿದು ವಿವಾಹ ಪ್ರಮಾಣಪತ್ರ ವಿವಾದ? ವಕ್ಫ್‌ ಬೋರ್ಡ್‌ಗೆ ಸಂಕಷ್ಟ ತಂದಿರುವ ಸರ್ಕಾರದ ಆದೇಶವೇನು? ದೂರುದಾರರ ಆಕ್ಷೇಪವೇನು? .. ವಿವರ ಇಲ್ಲಿದೆ.

Update: 2024-11-22 10:48 GMT

ಮುಸ್ಲಿಮರಿಗೆ ವಿವಾಹ ನೋಂದಣಿ ಪತ್ರ ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಿರುವ ರಾಜ್ಯ ಸರ್ಕಾರದ ಕ್ರಮ ಇದೀಗ ಚರ್ಚೆಗೆ ಗ್ರಾಸವಾಗಿದೆ. ಆ ಮೂಲಕ ವಕ್ಫ್‌ ಆಸ್ತಿ ವಿವಾದದ ಜೊತೆಗೆ ಮತ್ತೊಂದು ವಿವಾದವೂ ವಕ್ಫ್‌ ಬೋರ್ಡನ್ನು ಸುತ್ತಿಕೊಂಡಿದೆ.

ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್ 30ರಂದು ಆದೇಶ ಹೊರಡಿಸಿ, ಮುಸ್ಲಿಂ ಸಮುದಾಯದವರ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗೆ ನೀಡಿತ್ತು. ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಕ್ಫ್ ಮಂಡಳಿಗೆ ಈ ಅಧಿಕಾರ ನೀಡಿರುವ ಕುರಿತು ಸ್ವತಃ ಮುಸ್ಲಿಂ ಸಮುದಾಯದಲ್ಲೇ ಅಸಮಾಧಾನ ವ್ಯಕ್ತವಾಗಿತ್ತು.

ಅಲ್ಲದೆ, ಪ್ರತಿಪಕ್ಷಗಳು ಕೂಡ ಮುಸ್ಲಿಂ ಸಮುದಾಯದ ತುಷ್ಟೀಕರಣದ ಭಾಗವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಆದೇಶ ಹೊರಡಿಸಿದೆ. ಇದು ರಾಜ್ಯದ ಕಾನೂನು ಮತ್ತು ಆಡಳಿತ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.

ಇದೀಗ ರಾಜ್ಯ ಸರ್ಕಾರದ ಆ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಗಳೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಎಂಬುವರು ಮುಸ್ಲಿಂ ಸಮುದಾಯದವರಿಗೆ ವಿವಾಹ ನೋಂದಣಿ ಪತ್ರ ವಿತರಿಸುವ ಅಧಿಕಾರವನ್ನು ವಕ್ಫ್ ಬೋರ್ಡಿಗೆ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.

ಸದ್ಯ ಆಲಂ ಪಾಶಾ ಅವರು ಸಲ್ಲಿಸಿರುವ ಪಿಐಎಲ್ ನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ. ಗುರುವಾರ ನಡೆದ ವಿಚಾರಣೆಯಲ್ಲಿ ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ.

ಹಾಗಾದರೆ, ಏನಿದು ವಿವಾಹ ಪ್ರಮಾಣಪತ್ರ ವಿವಾದ? ವಕ್ಫ್‌ ಬೋರ್ಡ್‌ಗೆ ಸಂಕಷ್ಟ ತಂದಿರುವ ಸರ್ಕಾರದ ಆದೇಶವೇನು? ದೂರುದಾರರ ಆಕ್ಷೇಪವೇನು? .. ವಿವರ ಇಲ್ಲಿದೆ.

ಏನಿದು ಸರ್ಕಾರದ ವಿವಾದಿತ ಆದೇಶ?

ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆಯ ಅಧೀನ ಕಾರ್ಯದರ್ಶಿ 2023ರ ಸೆ.30ರಂದು ಆದೇಶ ಹೊರಡಿಸಿ, ಮುಸ್ಲಿಮರಿಗೆ ಇನ್ನು ಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ವಕ್ಫ್ ಬೋರ್ಡಿಗೆ ನೀಡಲಾಗಿದೆ ಎಂದು ಹೇಳಿದ್ದರು. ಅರ್ಜಿ ಸಲ್ಲಿಸಿ ವಿವಾಹ ನೋಂದಣಿ ಪ್ರಮಾಣ ಪತ್ರ ಕೋರುವ ಮುಸ್ಲಿಂ ಅರ್ಜಿದಾರರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ಆ ಮೂಲಕ ಸರ್ಕಾರ, ವಕ್ಫ್ ಬೋರ್ಡ್ ಗೆ ನೀಡಿತ್ತು.

ವಕ್ಫ್ ಬೋರ್ಡಿನ ವಿಶೇಷ ಅಧಿಕಾರಕ್ಕೆ ಆಕ್ಷೇಪ ಏಕೆ?

ಸರ್ಕಾರದ ಆದೇಶದಂತೆ ವಕ್ಫ್ ಬೋರ್ಡ್ ಮುಸ್ಲಿಂ ದಂಪತಿಗಳಿಗೆ ವಿವಾಹ ನೋಂದಣಿ ಪ್ರಮಾಣಪತ್ರವನ್ನು ವಿತರಿಸತೊಡಗಿತ್ತು. ಆದರೆ, ವಕ್ಫ್ ಬೋರ್ಡಿನ ಈ ವಿಶೇಷ ಅಧಿಕಾರವನ್ನು ಪ್ರಶ್ನಿಸಿ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ಆಲಂ ಪಾಷಾ ಅವರ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಮುಖ್ಯವಾಗಿ ವಕ್ಫ್ ಕಾಯ್ದೆ-1995ರಲ್ಲಿ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರ ವಕ್ಫ್ ಬೋರ್ಡಿಗೆ ನೀಡಲಾಗಿಲ್ಲ. ಕಾಯ್ದೆಯ ಯಾವುದೇ ನಿಬಂಧನೆಗಳಲ್ಲಿಯೂ ಈ ಕುರಿತು ಪ್ರಸ್ತಾಪವೇ ಇಲ್ಲ. ವಕ್ಫ್ ಕಾಯ್ದೆ ಕೇವಲ ವಕ್ಫ್ನ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ, ಈಗಾಗಲೇ ತನ್ನ ಆ ಹೊಣೆಗಾರಿಕೆಗಳನ್ನು ಕೂಡ ನಿಭಾಯಿಸುವಲ್ಲಿ ವಕ್ಫ್ ಬೋರ್ಡ್ ವಿಫಲವಾಗಿದೆ. ಹಾಗಾಗಿ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವ ಅಧಿಕಾರವನ್ನು ರದ್ದು ಮಾಡಬೇಕು ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ವಿಭಾಗೀಯ ಪೀಠ ಏನು ಹೇಳಿದೆ?

ಕಳೆದ ವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡು ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ವಿಭಾಗೀಯ ಪೀಠ, “ವಕ್ಫ್ ಬೋರ್ಡಿಗೆ ವಿವಾಹ ನೋಂದಣಿ ಪ್ರಮಾಣಪತ್ರ ನೀಡಿರುವಂತಹದ್ದನ್ನು ಎಲ್ಲೂ ಕೇಳಿಲ್ಲ. ಸರ್ಕಾರ ಯಾವ ಕಾನೂನಿನ ಅಡಿಯಲ್ಲಿ ಅಧಿಕಾರ ಚಲಾಯಿಸಿ ಇಂತಹ ಆದೇಶ ಹೊರಡಿಸಿದೆ” ಎಂದು ಹೇಳಿತ್ತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಬೇಕು ಎಂದು ಸರ್ಕಾರದ ಪರ ವಕೀಲರು ಹೇಳಿದಾಗ, ಪೀಠ ಅದನ್ನು ನಿರಾಕರಿಸಿ, ನವೆಂಬರ್ 21ಕ್ಕೆ ವಿಚಾರಣೆ ಮುಂದೂಡಿ, ಆ ವೇಳೆಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿತ್ತು.

ಅಲ್ಲದೆ, ಈ ವಾರ ವಿಚಾರಣೆ ಮುಂದುವರಿಸಿ, “ಯಾವುದೇ ಅಧಿಕಾರ ಇಲ್ಲದಿರುವ ವಕ್ಫ್ ಮಂಡಳಿ ಮದುವೆ ಪ್ರಮಾಣಪತ್ರ ವಿತರಣೆ ಮಾಡುವುದನ್ನು ಒಪ್ಪಲಾಗದು. ನ್ಯಾಯಾಲಯದ ಮುಂದಿನ ಆದೇಶದವರೆಗೆ ಸರ್ಕಾರ ತನ್ನ ಆದೇಶ ಅಮಾನತಿನಲ್ಲಿಡಬೇಕು. ವಕ್ಫ್ ಮಂಡಳಿ ಕೂಡ ಯಾವುದೇ ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ವಿತರಿಸಬಾರದು. ರಾಜ್ಯ ಸರಕಾರದ ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಇಲಾಖೆ 2023ರ ಸೆ.30ರಂದು ಆದೇಶ ಹೊರಡಿಸಿದ್ದ ಆದೇಶಕ್ಕೆ ಜ.7ರವರೆಗೆ ತಡೆ ನೀಡಲಾಗುವುದು” ಎಂದು ಆದೇಶಿಸಿದೆ.

ವಕ್ಪ್‌ ಬೋರ್ಡಿಗೆ ನೀಡಿರುವ ವಿಶೇಷ ಅಧಿಕಾರದ ಕುರಿತು ಸರ್ಕಾರದ ಸಮರ್ಥನೆ ಏನು?

ಹೈಕೋರ್ಟಿನಲ್ಲಿ ಮೊದಲ ವಿಚಾರಣೆ ವೇಳೆ, ಸರ್ಕಾರದ ಪರ ವಕೀಲರು, “ಮದುವೆ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರ ಮಾತ್ರ ವಕ್ಫ್ ಮಂಡಳಿಗೆ ನೀಡಲಾಗಿದೆ. ಬೇರೆ ಯಾವ ಅಧಿಕಾರವನ್ನೂ ನೀಡಿಲ್ಲ,'' ಎಂದು ಸಮಜಾಯಿಷಿ ನೀಡಿದ್ದರು. ಆದರೆ, ನ್ಯಾಯಾಲಯ, “ಮದುವೆ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ವಕ್ಫ್ ಬೋರ್ಡ್ ಮಾಡಬೇಕಿಲ್ಲ'' ಎಂದು ತಾಕೀತು ಮಾಡಿತ್ತು.

ಅಲ್ಲದೆ, ಮದುವೆಯ ನಂತರ ವಿದೇಶಕ್ಕೆ ಹೋಗುವ ಮುಸ್ಲಿಂ ದಂಪತಿಗಳಿಗೆ ಸಕಾಲದಲ್ಲಿ ವಿವಾಹ ನೋಂದಣಿ ಪ್ರಮಾಣಪತ್ರ ಪಡೆಯುವಲ್ಲಿ ಸಾಕಷ್ಟು ವಿಳಂಬವಾಗುತ್ತಿತ್ತು. ಸಕಾಲದಲ್ಲಿ ಪ್ರಮಾಣಪತ್ರ ಸಿಗದೆ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದರು. ಆ ಹಿನ್ನೆಲೆಯಲ್ಲಿ ಅಂತಹವರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ವಕ್ಫ್ ಬೋರ್ಡ್ಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಸರ್ಕಾರಿ ಆದೇಶದ ಮೂಲಕ ನೀಡಲಾಗಿದೆ ಎಂದು ಸರ್ಕಾರ ವಾದಿಸಿದೆ.

ಆದರೆ, ನ್ಯಾಯಾಲಯ ಸರ್ಕಾರದ ಈ ವಾದವನ್ನು ತಳ್ಳಿಹಾಕಿದ್ದು, “ವಕ್ಫ್ ಕಾಯ್ದೆಯಾಗಲೀ ಅದರ ಸೆಕ್ಷನ್ 32 ಸೇರಿದಂತೆ ಯಾವುದೇ ಅಧಿನಿಯಮಗಳಾಗಲೀ ಬೋರ್ಡಿಗೆ ಆ ಅಧಿಕಾರವನ್ನು ನೀಡದೇ ಇರುವಾಗ, ಸರ್ಕಾರದ ಈ ಸಮರ್ಥನೆಯನ್ನು ಒಪ್ಪಲಾಗದು” ಎಂದಿದೆ.

ಈ ಮೊದಲು ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ಯಾರು ವಿತರಿಸುತ್ತಿದ್ದರು?

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ವಿವಾಹಿತ ಜೋಡಿ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ತಮ್ಮ ಮದುವೆಯ ಸಮಯದಲ್ಲಿ ಖುರಾನ್ ಪಠಿಸುವ ಖಾಜಿ ಅವರಿಂದಲೇ ಪಡೆಯುತ್ತಿದ್ದರು. ಖಾಜಿ ಕಾಯ್ದೆ-1988ರ ಅಡಿಯಲ್ಲಿ ವಕ್ಫ್ ಬೋರ್ಡ್ ಖಾಜಿಯವರಿಗೆ ಆ ಅಧಿಕಾರವನ್ನು ನೀಡಿತ್ತು. ಆದರೆ, ಆ ಖಾಜಿ ಕಾಯ್ದೆಯನ್ನು 2013ರಲ್ಲಿ ರದ್ದು ಮಾಡಲಾಯಿತು. ಆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಮಾಣಪತ್ರ ನೀಡುವ ಅಧಿಕಾರವನ್ನು ವಕ್ಫ್ ಬೋರ್ಡಿಗೆ ನೀಡಿದೆ.

ಆದರೆ, ವಿಶೇಷ ವಿವಾಹ ಕಾಯ್ದೆ-1954 ಅಥವಾ ಹಿಂದೂ ವಿವಾಹ ಕಾಯ್ದೆ-1955ರ ಅಡಿಯಲ್ಲಿ ಜಿಲ್ಲಾ ಅಥವಾ ರಾಜ್ಯದ ವಿವಾಹ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯುವ ಅವಕಾಶ ಎಲ್ಲರಿಗೂ ಇದೆ.

Tags:    

Similar News