ಬೆಳೆ ಹಾನಿ ಪರಿಹಾರ ಹೆಚ್ಚಳಕ್ಕೆ ಸಿಎಂ ಸ್ಪಂದನೆ ; ಕಬ್ಬಿಗೆ ದರ ಹೆಚ್ಚಿಸಲು ರೈತ ಮುಖಂಡರ ಒತ್ತಾಯ
ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗವು, ರಾಜ್ಯದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿತು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಬೇಕು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಿಯೋಗವು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಿಯೋಗದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು, ಮಳೆ ಹಾನಿಯಿಂದಾದ ಬೆಳೆ ನಷ್ಟಕ್ಕೆ ನೀಡುವ ಪರಿಹಾರವನ್ನು ಹೆಚ್ಚಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗವು, ರಾಜ್ಯದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿತು. ರಾಜ್ಯಾದ್ಯಂತ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ ಮುಖಂಡರು, ಮಳೆಯಾಶ್ರಿತ ಬೆಳೆಗೆ ಪ್ರತಿ ಎಕರೆಗೆ 25,000 ರೂಪಾಯಿ ಮತ್ತು ನೀರಾವರಿ ಬೆಳೆಗೆ 40,000 ರೂಪಾಯಿ ಪರಿಹಾರವನ್ನು ತಕ್ಷಣ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದೇ ವೇಳೆ, 2025-26ನೇ ಸಾಲಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರವು ಅಸಮಂಜಸವಾಗಿದೆ ಎಂದು ನಿಯೋಗವು ಅಸಮಾಧಾನ ವ್ಯಕ್ತಪಡಿಸಿತು. ಹೀಗಾಗಿ, ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ರಾಜ್ಯ ಪ್ರೋತ್ಸಾಹ ಬೆಲೆ (SAP) ನಿಗದಿಪಡಿಸಬೇಕು ಹಾಗೂ 2023-24ನೇ ಸಾಲಿನಲ್ಲಿ ಕಬ್ಬಿಗೆ ಹೆಚ್ಚುವರಿಯಾಗಿ ನಿಗದಿಪಡಿಸಿದ್ದ ಪ್ರತಿ ಟನ್‌ಗೆ 150 ರೂ. ಬಾಕಿ ಹಣವನ್ನು ಕಾರ್ಖಾನೆಗಳಿಂದ ರೈತರಿಗೆ ಕೂಡಲೇ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಕೆರೆ ಹೂಳು ತೆಗೆಯಲು ಮನವಿ
ರಾಜ್ಯಾದ್ಯಂತ ಇರುವ 38,000 ಕೆರೆಗಳ ಹೂಳನ್ನು ತೆಗೆದು, ಅದನ್ನು ರೈತರ ಜಮೀನುಗಳಿಗೆ ಸಾಗಿಸಲು ಸಮಗ್ರ ಯೋಜನೆ ರೂಪಿಸುವಂತೆಯೂ, ಕೆಐಎಡಿಬಿ ವಶಪಡಿಸಿಕೊಂಡು 25 ವರ್ಷವಾದರೂ ಬಳಸದೆ ಖಾಲಿ ಇರುವ ಜಮೀನುಗಳನ್ನು ಮೂಲ ರೈತರಿಗೆ ವಾಪಸ್ ನೀಡುವಂತೆಯೂ ನಿಯೋಗವು ಸರ್ಕಾರವನ್ನು ಆಗ್ರಹಿಸಿತು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳಿಗೂ ಧಾನ್ಯ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಯಿತು.
ನಿಯೋಗದಲ್ಲಿ ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಕರಬಸಪ್ಪಗೌಡ, ಅತ್ತಹಳ್ಳಿ ದೇವರಾಜ್, ಎನ್‌ಹೆಚ್ ದೇವಕುಮಾರ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.