Karnataka weather | ರಾಜ್ಯದ ಉದ್ದಗಲ ಧಗಧಗಿಸಿದ ಧಗೆ, ಭೀಕರ ಬಿಸಿಲಿಗೆ ಕಾರಣವೇನು?

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು | ಬಿಸಿಲ ಝಳಕ್ಕೆ ಜನ ಹೈರಾಣು

By :  Hitesh Y
Update: 2024-03-15 08:12 GMT
ಕರ್ನಾಟಕದ ಹವಾಮಾನ

Karnataka weather update ರಾಜ್ಯದಲ್ಲಿ ಫೆಬ್ರವರಿ ಹಾಗೂ ಮಾರ್ಚ್‌ನಲ್ಲೇ ಉರಿಬಿಸಿಲು ಶುರುವಾಗಿದೆ. ಬೇಸಿಗೆಯ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಸಿಲ ಧಗೆ ಈಗಲೇ ಪ್ರಾರಂಭವಾಗಿದ್ದು, ಮುಂದಿನ ಬಿರು ಬೇಸಿಗೆಯ ದಿನಗಳಲ್ಲಿ ಬಿಸಿಲ ಧಗೆ ಹೇಗಿರಲಿದೆ ಎನ್ನುವ ಆತಂಕ ಎದುರಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿ ಧಗೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ (2023) ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಎರಡೂ ಅವಧಿಯಲ್ಲೂ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿತ್ತು. ಅದರ ಪರಿಣಾಮ ಈಗ ಬಿಸಿಲಿನ ಝಳಕ್ಕೆ ಜನ ತತ್ತರಿಸುವ ಪರಿಸ್ಥಿತಿ ಎದುರಾಗಿದೆ. ಕರ್ನಾಟಕದಲ್ಲಿ ಮೇ ತಿಂಗಳ ವರೆಗೂ ಬಿಸಿಲಿ ಝಳ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆಯಾದರೂ ಅದರಿಂದ ಗರಿಷ್ಠ ಉಷ್ಣಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವಾರ 40 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ !

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈ ವಾರ ಗರಿಷ್ಠ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ (Indian Meteorological Department) ಇಲಾಖೆ ಮುನ್ಸೂಚನೆ ನೀಡಿದೆ.

ಈ ಸಂಬಂಧ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ, ಸಿ.ಎಸ್ ಪಾಟೀಲ್ ಅವರು, ಕರ್ನಾಟಕದ ಉತ್ತರ ಒಳನಾಡಿನ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 38ರಿಂದ 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ 35ರಿಂದ 36 ಡಿಗ್ರಿ ಸೆಲ್ಸಿಯಸ್‌ನ ವರೆಗೆ ಗರಿಷ್ಠ ಉಷ್ಣಾಂಶ ತಲುಪಲಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಇನ್ನು ರಾಜ್ಯದ ಹಲವು ಭಾಗದಲ್ಲಿ 39ರಿಂದ 41 ಡಿಗ್ರಿ ಸೆಲ್ಸಿಯಸ್‌ನವರೆಗೆ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಮಾರ್ಚ್‌ನಲ್ಲಿ ಈ ಪ್ರಮಾಣದಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು ಇದೇ ಮೊದಲು. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಮಾರ್ಚ್‌ ಅಥವಾ ಮೇ ತಿಂಗಳಿನಲ್ಲಿ ಈ ಪ್ರಮಾಣದ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಈಗ ಮಾರ್ಚ್‌ನಲ್ಲೇ ಬಿಸಿಲು ಹೆಚ್ಚಾಗಿದೆ ಎಂದರು.

ಮೇ ವರೆಗೆ ಮಳೆಯಾಗುವ ಸಾಧ್ಯತೆ ಇಲ್ಲ

ರಾಜ್ಯದಲ್ಲಿ ಮೇ ತಿಂಗಳ ವರೆಗೆ ಮಳೆಯಾಗುವ ಸಾಧ್ಯತೆ ಇಲ್ಲ. ಮೇ ತಿಂಗಳಿನಲ್ಲಿ ಮಳೆಯಾಗಲಿದೆ. ಈಗ ಮಳೆಯಾಗುವುದಕ್ಕೆ ಅನುಕೂಲಕರ ವಾತಾವರಣ ಇಲ್ಲ. ಆಂಟಿಸೈಕ್ಲೋನಿಕ್ ಪರಿಭ್ರಮಣ (Anticyclonic rotation) ಇರುವುದರಿಂದ ಮೋಡಗಳು ಸೇರುವುದಿಲ್ಲ. ಹೀಗಾಗಿ,ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇಲ್ಲ. ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಬಿಸಿಲು ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ಸಿ.ಎಸ್ ಪಾಟೀಲ್ ಅವರು ತಿಳಿಸಿದರು.

ಬಿಸಿಲ ಧಗೆ ಹೆಚ್ಚಾಗಲು ಬರವೇ ಕಾರಣ 

ಕರ್ನಾಟಕದಲ್ಲಿ ಈ ಬಾರಿ ಬಿಸಿಲಿ ಧಗೆ ಹೆಚ್ಚಾಗಲು ಬರ ಹಾಗೂ ಎಲ್‌ ನಿನೋ ಎರಡು ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಮಳೆಯೂ ಆಗದೆ ಇರುವುದರಿಂದ ಅಂತರ್ಜಲ ಕುಸಿದಿದೆ. ಇದೆಲ್ಲದರ ಪರಿಣಾಮ ಭೂಮಿಯಲ್ಲಿ ತೇವಾಂಶ ಇಳಿಕೆ ಆಗಿದೆ. ವಾತಾವರಣದಲ್ಲಿ ಒಣಹವೆ ಇದ್ದರೆ ಗರಿಷ್ಠ ಉಷ್ಣಾಂಶ ಹೆಚ್ಚಳ ಆಗುತ್ತದೆ. ತೇವಾಂಶ ಇಲ್ಲದೇ ಇದ್ದರೆ ಬಿಸಿಲು ಹೆಚ್ಚಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.


ಏನಿದು ಎಲ್ ನಿನೋ ?

ಪೆಸಿಫಿಕ್ ಮಹಾಸಾಗರವು ಸಾಮಾನ್ಯಕ್ಕಿಂತ ಹೆಚ್ಚಾಗಿ ಬೆಚ್ಚಗಾಗುವುದನ್ನು ಎಲ್ ನಿನೋ (El Nino)ಎನ್ನಲಾಗುತ್ತದೆ. ಈ ಬೆಳವಣಿಗೆಯೂ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಹವಾಮಾನದ ಮೇಲೆ ಪರಿಣಾಮ ಬೀರುತ್ತಿದ್ದು, ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಮಳೆ ಕೊರತೆ ಹಾಗೂ ವಾತಾವರಣದಲ್ಲಿ ಶುಷ್ಕತೆ ಹೆಚ್ಚಾಗುತ್ತದೆ. ಎಲ್‌ ನಿನೋವು 2ರಿಂದ 7 ವರ್ಷಗಳಿಗೆ ಒಮ್ಮೆ ಸಂಭವಿಸುತ್ತದೆ. 9 ರಿಂದ 12 ತಿಂಗಳಿನ ವರೆಗೆ ಇರುತ್ತದೆ. ಒಮ್ಮೊಮ್ಮೆ ಎರಡು ವರ್ಷಗಳ ಅವಧಿಗೂ ಇರುವ ಸಾಧ್ಯತೆ ಇದೆ. 

ಕಳೆದ ವರ್ಷ ಮಳೆ ಕೊರತೆ

ಕರ್ನಾಟಕದಲ್ಲಿ ಕಳೆದ ವರ್ಷ ನೈಋತ್ಯ ಮಾನ್ಸೂನ್ (ಮುಂಗಾರು) ಹಾಗೂ ಈಶಾನ್ಯ ಮಾನ್ಸೂನ್‌ (ಹಿಂಗಾರು) ಅವಧಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನೈಋತ್ಯ ಮಾನ್ಸೂನ್‌ನಲ್ಲಿ ಕರ್ನಾಟಕದಲ್ಲಿ ಸಾಮಾನ್ಯವಾಗಿ 831.8 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಕಳೆದ ವರ್ಷ 678.4 ಮಿ.ಮೀ ಮಾತ್ರ ಮಳೆಯಾಗಿದೆ. ಮಳೆ ಕೊರತೆ ಪ್ರಮಾಣ (ವ್ಯತ್ಯಾಸ) 18 ಮಿ.ಮೀ ದಾಖಲಾಗಿದೆ. ಅದೇ ರೀತಿ ಈಶಾನ್ಯ ಮಾನ್ಸೂನ್‌ ಅವಧಿಯಲ್ಲಿ ಸಾಮಾನ್ಯವಾಗಿ 177.2 ಮಿ.ಮೀ ಮಳೆಯಾಗುತ್ತಿತ್ತು. ಕಳೆದ ಬಾರಿ 113.3 ಮಿ.ಮೀ ಮಾತ್ರ ಮಳೆಯಾಗಿದೆ. ಈ ಮೂಲಕ ಶೇ.33 ಮಿ.ಮೀನಷ್ಟು ಮಳೆ ಕೊರತೆ ದಾಖಲಾಗಿದೆ. ಇನ್ನು ಗರಿಷ್ಠ ಉಷ್ಣಾಂಶವು ಅತ್ಯಂತ ಹೆಚ್ಚು 42.6 ಡಿಗ್ರಿ ಸೆಲ್ಸಿಯಸ್‌ ಕಲುಬುರಗಿಯಲ್ಲಿ ಜೂನ್‌ 3ರಂದು ದಾಖಲಾಗಿತ್ತು.


 ಕೊಡಗಿನಲ್ಲಿ ಸಾಧಾರಣ ಮಳೆ

ಇನ್ನು ಬುಧವಾರ (ಮಾರ್ಚ್‌ 13ರಂದು) ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ. ಇದೇ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಎರಡು ದಿನ ರಾಜ್ಯದಲ್ಲಿ ಹವಾಮಾನ

ಇನ್ನು ಎರಡು ದಿನ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 35 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಲಿಯಸ್‌ ಬಾಗಲಕೋಟೆಯಲ್ಲಿ ದಾಖಲಾಗಿದೆ. ಇನ್ನು ಅತೀ ಕಡಿಮೆ ಉಷ್ಣಾಂಶ 18.9 ಡಿಗ್ರಿ ಸೆಲ್ಸಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.  

Tags:    

Similar News