Bengaluru water crisis | ಟ್ಯಾಂಕರ್ ನೋಂದಣಿ ಗಡುವು ವಿಸ್ತರಣೆ: ಕುಡಿಯಲು ಮಾತ್ರ ಕಾವೇರಿ ನೀರು

ಕಾವೇರಿ ನೀರು ಅನ್ಯ ಉದ್ದೇಶಕ್ಕೆ ಬಳಸಿದರೆ ದಂಡ | ಬೋರ್‌ವೆಲ್‌ ಕೊರೆಸಲು ಭೂವಿಜ್ಞಾನಿಗಳ ನೇಮಕ;

Update: 2024-03-10 14:03 GMT
ಟ್ಯಾಂಕರ್‌ ನೀರು (ಜಲ ಮಂಡಳಿ )

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಇದೇ ಸಂದರ್ಭದಲ್ಲಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಟ್ಯಾಂಕರ್‌ ಮಾಲೀಕರು ಟ್ಯಾಂಕರ್‌ ನೀರಿಗೆ ಹೆಚ್ಚು ಬೆಲೆ ವಿಧಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ, ಎಲ್ಲಾ ಟ್ಯಾಂಕರ್‌ಗಳ ನೋಂದಣಿ ಮಾಡಿಕೊಳ್ಳಬೇಕು ಎಂದು ಜಲ ಮಂಡಳಿ ನಿರ್ದೇಶನ ನೀಡಿತ್ತು. 

ಇದೀಗ ಟ್ಯಾಂಕರ್‌ಗಳ ನೋಂದಣಿಗೆ ನೀಡಿದ್ದ ಗಡುವನ್ನು ಮಾರ್ಚ್‌ 15ರ ವರೆಗೆ ವಿಸ್ತರಿಸಲಾಗಿದ್ದು, ಮಾರ್ಚ್‌ 15ರ ಒಳಗಾಗಿ ಟ್ಯಾಂಕರ್‌ಗಳನ್ನು ನೋಂದಣಿ ಮಾಡಿಕೊಳ್ಳದೇ ಇದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಜಲ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

ಟ್ಯಾಂಕರ್‌ಗಳ ನೋಂದಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪೋರ್ಟಲ್‍ನಲ್ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು. ಬಿಬಿಎಂಪಿ ಪೋರ್ಟಲ್‍ನಲ್ಲಿ ಇಲ್ಲಿಯವರೆಗೆ 1530 ಟ್ಯಾಂಕರ್‌ಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ಮಾರ್ಚ್‌ 15ರ ವರೆಗೂ ಅವಕಾಶ ನೀಡಲಾಗಿದ್ದು, ಈ ಅವಧಿಯ ಒಳಗಾಗಿ ನೋಂದಣಿ ಮಾಡಿಕೊಳ್ಳದೆ ಇದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.

ಈಗಾಗಲೇ ನೋಂದಣಿ ಮಾಡಿಕೊಂಡಿರುವ 1530 ಟ್ಯಾಂಕರ್‌ಗಳಿಂದ ನಿತ್ಯ 10 ಎಂಎಲ್‍ಡಿ ನೀರನ್ನು ಒಂದೇ ಬಾರಿಗೆ ಸರಬರಾಜು ಮಾಡಲು ಸಾಧ್ಯವಿದೆ. ನೋಂದಣಿಯಾಗಿರುವ ಟ್ಯಾಂಕರ್‌ಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುವುದು. ಆ ಟ್ಯಾಂಕರ್‌ಗಳು ಬಿಬಿಎಂಪಿ ಹಾಗೂ ಜಲ ಮಂಡಳಿ ಜಂಟಿಯಾಗಿ ನಿಗದಿಪಡಿಸಿರುವ ದರಕ್ಕಿಂತಲೂ ಹೆಚ್ಚು ಕೇಳಿದರೆ ಅಥವಾ ಸಾರ್ವಜನಿಕರಿಂದ ದೂರು ಕೇಳಿಬಂದರೆ, ಆಯಾ ಟ್ಯಾಂಕರ್‌ಗಳ ಮಾಲೀಕರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಇನ್ನು 419 ಜನ ಸ್ವಯಂಪ್ರೇರಿತವಾಗಿ ಬಾಡಿಗೆಗೆ ತಮ್ಮ ಟ್ಯಾಂಕರ್‌ಗಳನ್ನು ಮಂಡಳಿಗೆ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕುಡಿಯುವುದಕ್ಕಷ್ಟೇ ಕಾವೇರಿ ನೀರು: ಅನ್ಯ ಉದ್ದೇಶಕ್ಕೆ ಬಳಸಿದರೆ ದಂಡ

ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಅದನ್ನು ಹೊರತುಪಡಿಸಿ ಅನ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಈ ಸಂಬಂಧ ಈಗಾಗಲೇ ಜಲಮಂಡಳಿಯ ಕಾಯ್ದೆ ಅಡಿ ಆದೇಶ ಹೊರಡಿಸಲಾಗಿದ್ದು,ಜನರು ಸಹ ಇದಕ್ಕೆ ಸಹಕರಿಸಬೇಕು ಎಂದು ರಾಮ್‌ಪ್ರಸಾತ್‌ ಮನವಿ ಮಾಡಿದ್ದಾರೆ.

ಕಾವೇರಿ ನೀರನ್ನು ಅನ್ಯ ಉದ್ದೇಶಕ್ಕಾಗಿ ಬಳಸುವವರ ಮೇಲೆ ಮಾರ್ಚ್‌ 15ರಿಂದ ಕ್ರಮ ವಹಿಸಲಾಗುವುದು. ಅನ್ಯ ಉದ್ದೇಶಕ್ಕಾಗಿ ಕಾವೇರಿ ನೀರು ಬಳಸುವುದು ಖಚಿತವಾದರೆ, ಜಲ ಮಂಡಳಿಯ ಸಿಬ್ಬಂದಿ ಸ್ಥಳದಲ್ಲಿಯೇ ಆದೇಶದ ಅನುಸಾರ ದಂಡ ವಿಧಿಸಲಿದ್ದಾರೆ. ಈ ವಿಚಾರದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರದ ಅಪಾರ್ಟ್‌ಮೆಂಟ್‌ಗಳಿಗೂ ನೀರು ಬಳಕೆ ಕುರಿತು ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.

ಇನ್ನು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಬೋರ್‌ವೆಲ್‌ಗಳನ್ನು ಕೊರೆಸುವುದರ ಬದಲು, ನೀರಿನ ಲಭ್ಯತೆ ಆಧರಿಸಿ ಭೂವಿಜ್ಞಾನಿಗಳ ವರದಿಯ ಆಧಾರದ ಮೇಲೆ ಬೋರ್‌ವೆಲ್‌ಗಳನ್ನು ಕೊರೆಸಲು ಜಲ ಮಂಡಳಿ ಉದ್ದೇಶಿಸಿದ್ದು,ಇದಕ್ಕಾಗಿ ನಾಲ್ವರು ಭೂವಿಜ್ಞಾನಿಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಲ ಮಂಡಳಿಯ ತಾಂತ್ರಿಕ ಸಮಿತಿ ಸದಸ್ಯರು ಹಾಗೂ ಐಐಎಸ್‍ಸಿ ತಜ್ಞರಾದ ಪ್ರೊ.ವಿಶ್ವನಾಥ, ಚೀಪ್ ಎಂಜಿನಿಯರ್ ಜಯಪ್ರಕಾಶ ಇದ್ದರು.

Tags:    

Similar News