Excise Duty Hike | ಮದ್ಯಪ್ರಿಯರಿಗೆ ಬೆಲೆ ಹೆಚ್ಚಳದ ಬಿಸಿ ; ಭಾರತೀಯ ಮದ್ಯ, ಬಿಯರ್‌ ಬೆಲೆ ಏರಿಕೆ

ಅಬಕಾರಿ ಸುಂಕ ಏರಿಕೆಯೊಂದಿಗೆ ಪ್ರೀಮಿಯಂ ಹಾಗೂ ಇತರೆ ಬಿಯರ್ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚ ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 5ರಿಂದ 15 ರೂ. ಏರಿಕೆ ಆಗಲಿದೆ. ಅಗ್ಗದ ಬಿಯರ್‌ಗಳ ಬೆಲೆ ಮಾತ್ರ 25 ರೂ.ಗಳವರೆಗೆ ಕಡಿಮೆ ಆಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.;

Update: 2025-05-15 09:18 GMT

ಭಾರತೀಯ ಮದ್ಯ (ಐಎಂಎಲ್) ಮತ್ತು ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಈ ಸಂಬಂಧ ಅಬಕಾರಿ ಸುಂಕ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ(ಗುರುವಾರ) ಜಾರಿಯಾಗಲಿವೆ.

ಕರ್ನಾಟಕ ಅಬಕಾರಿ ಅಧಿನಿಯಮದ ಪ್ರಕಾರ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು (1998) ಕುರಿತು ಕರಡಿಗೆ ತಿದ್ದುಪಡಿ ತಂದಿದ್ದು, ಮೇ 13ರಂದು ಪರಿಷ್ಕೃತ ದರಗಳ ಕುರಿತು ಅಧಿಸೂಚನೆ ಹೊರಡಿಸಿದೆ. ಮೇ 15ರಿಂದ ಹೊಸ ದರಗಳು ಅನ್ವಯವಾಗಲಿವೆ.


ತೆರಿಗೆ ಸ್ಲ್ಯಾಬ್ ಪರಿಷ್ಕರಣೆ

ಅಬಕಾರಿ ಸುಂಕ ಹೆಚ್ಚಳದ ಜೊತೆಗೆ ಭಾರತೀಯ ಮದ್ಯ ಹಾಗೂ ಬಿಯರ್ ತೆರಿಗೆ ಸ್ಲ್ಯಾಬ್‌ಗಳನ್ನು ಸರ್ಕಾರ ಪರಿಷ್ಕರಣೆ ಮಾಡಿದೆ. ಈ ಹಿಂದಿನ 18 ತೆರಿಗೆ ಸ್ಲ್ಯಾಬ್‌ಗಳನ್ನು 16ಕ್ಕೆ ಇಳಿಸಿದೆ. ಮೊದಲ ನಾಲ್ಕು ಸ್ಲ್ಯಾಬ್ ಗಳ ಬೆಲೆ ಪರಿಷ್ಕರಿಸಲಾಗಿದೆ. ಇದರಿಂದ ಕಡಿಮೆ ದರದಲ್ಲಿ ಸಿಗುತ್ತಿದ್ದ ಭಾರತೀಯ ಮದ್ಯಗಳಾದ (ಐಎಂಎಲ್) ಬ್ರ್ಯಾಂಡಿ, ವಿಸ್ಕಿ, ಜಿನ್, ರಮ್ ಬೆಲೆ ಹೆಚ್ಚಾಗಿದೆ. 180 ಎಂಎಲ್ ಬಾಟಲಿ ಮತ್ತು ಸ್ಯಾಶೆಗಳ ಬೆಲೆ ಗರಿಷ್ಠ 15 ರೂ. ಏರಿಕೆ ಆಗಲಿದೆ. ನಂತರದ ಸ್ಪ್ಯಾಬ್‌ಗಳಿಗೆ 5 ರೂ. ಏರಿಕೆ ಮಾಡಲಾಗಿದೆ

ಬಿಯರ್ ಬೆಲೆ ಹೆಚ್ಚಳ

ಅಬಕಾರಿ ಸುಂಕ ಏರಿಕೆಯೊಂದಿಗೆ ಪ್ರೀಮಿಯಂ ಹಾಗೂ ಇತರೆ ಬಿಯರ್ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚ ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ 5ರಿಂದ 15 ರೂ. ಏರಿಕೆ ಆಗಲಿದೆ. ಅಗ್ಗದ ಬಿಯರ್‌ಗಳ  ಬೆಲೆ ಮಾತ್ರ 25 ರೂ.ಗಳವರೆಗೆ ಕಡಿಮೆ ಆಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಅಬಕಾರಿ ಸುಂಕ ಹೆಚ್ಚಿಸುವ ಕುರಿತು ಏ.29ರಂದು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಬೆಲೆ ಏರಿಕೆಯ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸಿದೆ.


ಮೂರನೇ ಬಾರಿಗೆ ಬೆಲೆ ಏರಿಕೆ

ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶೀಯ ಮದ್ಯ ಹಾಗೂ ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು ಮೂರನೇ ಬಾರಿಗೆ ಏರಿಕೆ ಮಾಡಿದೆ.

2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕ ಶೇ 175ರಿಂದ ಶೇ185ಕ್ಕೆ ಹೆಚ್ಚಿಸಿತ್ತು. ಇದಾದ ನಂತರ 2025ರ ಜ.20ರಂದು ಬಜೆಟ್ಗೂ ಮುನ್ನ ಹೆಚ್ಚುವರಿ ಅಬಕಾರಿ ಸುಂಕ (ಎಇಡಿ) ಪರಿಷ್ಕರಣೆ ಮಾಡಿ ಶೇ.185ರಿಂದ ಶೇ.195ಕ್ಕೆ ಹೆಚ್ಚಿಸಿತ್ತು. ಮೂರನೇ ಬಾರಿಗೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.195ರಿಂದ ಶೇ.200ಕ್ಕೆ ಏರಿಕೆ ಮಾಡಿದೆ.

ನೆರೆ ರಾಜ್ಯಗಳಲ್ಲಿನ ಐಎಂಎಲ್ ದರಕ್ಕೆ ಹೊಂದಿಕೆಯಾಗುವಂತೆ ರಾಜ್ಯದಲ್ಲಿ ದರ ಪರಿಷ್ಕರಿಸಲಾಗಿದೆ ಎಂದು ಅಬಕಾರಿ ಇಲಾಖೆ ಹೇಳಿದೆ.

Tags:    

Similar News