ಕಾಂಗ್ರೆಸ್‌ನ 'ಮತಗಳ್ಳತನ' ಆರೋಪಕ್ಕೆ ಚುನಾವಣಾ ಆಯೋಗ ತಿರುಗೇಟು: ಹೈಕೋರ್ಟ್ಗೆ ಹೋಗುವಂತೆ ಸವಾಲು
ಮತದಾರರ ಪಟ್ಟಿಯಲ್ಲಿ ಅನರ್ಹರನ್ನು ಸೇರಿಸಲಾಗಿದೆ ಮತ್ತು ಅರ್ಹರನ್ನು ಕೈಬಿಡಲಾಗಿದೆ ಎಂಬ ರಾಹುಲ್ ಗಾಂಧಿಯವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಮುಂದಿನ ಕ್ರಮಕ್ಕಾಗಿ ಅವರಿಂದಲೇ ಸಾಕ್ಷ್ಯವನ್ನು ಕೋರಿದೆ.;
ಮತದಾರರ ಪಟ್ಟಿಯಲ್ಲಿ "ಬೃಹತ್ ಪ್ರಮಾಣದ ಅಕ್ರಮ" ನಡೆದಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯು ದಿಟ್ಟ ಪ್ರತ್ಯುತ್ತರ ನೀಡಿದೆ. ಆರೋಪಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನೂ ಒಳಗೊಂಡಂತೆ ಪ್ರಮಾಣೀಕೃತ ದೂರು ನೀಡುವಂತೆ ರಾಹುಲ್ ಗಾಂಧಿಯವರಿಗೆ ಅಧಿಕೃತ ಪತ್ರ ಬರೆದಿದೆ. ಇದೇ ವೇಳೆ ಈ ಕುರಿತು ಹೈಕೋರ್ಟ್ ಮೆಟ್ಟಿಲೇರುವಂತೆ ಸೂಚಿಸಿದೆ ಅಲ್ಲದೆ, ಸುಳ್ಳು ಘೋಷಣೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಗುರುವಾರ ರಾಹುಲ್ ಗಾಂಧಿ ಅವರು ನಡೆಸಿದ ಪತ್ರಿಕಾಗೋಷ್ಠಿಯ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ಈ ಪತ್ರವನ್ನು ಬಿಡುಗಡೆ ಮಾಡಿದೆ. ಮತದಾರರ ಪಟ್ಟಿಯಲ್ಲಿ ಅನರ್ಹರನ್ನು ಸೇರಿಸಲಾಗಿದೆ ಮತ್ತು ಅರ್ಹರನ್ನು ಕೈಬಿಡಲಾಗಿದೆ ಎಂಬ ರಾಹುಲ್ ಗಾಂಧಿಯವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ, ಮುಂದಿನ ಕ್ರಮಕ್ಕಾಗಿ ಅವರಿಂದಲೇ ಸಾಕ್ಷ್ಯವನ್ನು ಕೋರಿದೆ.
ಕಾನೂನು ಪ್ರಕ್ರಿಯೆಗಳ ಎಚ್ಚರಿಕೆ
ಸಿಇಒ ಅವರ ಪತ್ರದ ಪ್ರಕಾರ, ರಾಹುಲ್ ಗಾಂಧಿಯವರು "ಚುನಾವಣಾ ನೋಂದಣಿ ನಿಯಮಗಳು, 1960"ರ ನಿಯಮ 20(3)(ಬಿ) ಅಡಿಯಲ್ಲಿ, ತಾವು ಆರೋಪಿಸುತ್ತಿರುವಂತೆ ಅಕ್ರಮವಾಗಿ ಸೇರ್ಪಡೆಗೊಂಡ ಅಥವಾ ಕೈಬಿಡಲಾದ ಮತದಾರರ ಹೆಸರುಗಳನ್ನು ಒದಗಿಸಬೇಕು. "ಹೀಗೆ ಮಾಡಿದಾಗ ಮಾತ್ರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲು ಸಾಧ್ಯವಾಗುತ್ತದೆ," ಎಂದು ಸಿಇಒ ಸ್ಪಷ್ಟಪಡಿಸಿದ್ದಾರೆ.
ಈ ಘೋಷಣೆಯು ಸುಳ್ಳೆಂದು ಸಾಬೀತಾದರೆ, ಪ್ರಜಾ ಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 31 ಮತ್ತು ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 227ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂಬುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆಯೋಗದ ಸಮರ್ಥನೆ
ಇದೇ ವೇಳೆ, ಚುನಾವಣಾ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡಿರುವ ಸಿಇಒ ಕಚೇರಿ, 2025ರ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 2024ರಲ್ಲಿ ಮತ್ತು ಅಂತಿಮ ಪಟ್ಟಿಯನ್ನು ಜನವರಿ 2025ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗಿತ್ತು ಎಂದು ಪತ್ರದಲ್ಲಿ ತಿಳಿಸಿದೆ. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಈ ಪಟ್ಟಿಗಳ ಬಗ್ಗೆ ಯಾವುದೇ ಆಕ್ಷೇಪಣೆ ಅಥವಾ ಮೇಲ್ಮನವಿ ಸಲ್ಲಿಸಿರಲಿಲ್ಲ ಎಂದು ಪತ್ರದಲ್ಲಿ ಒತ್ತಿ ಹೇಳಿದೆ.