ಇ-ಖಾತೆ ಕಡ್ಡಾಯ ಪ್ರಶ್ನಿಸಿ ಪಿಐಎಲ್‌ | ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್‌

ಬೆಂಗಳೂರಿನ ಎಸ್.ಗೌರಿಶಂಕರ್ ಎಂಬುವರು ಇ-ಖಾತಾ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ನೀಡಲು ನಿರಾಕರಿಸಿದೆ. ಆದರೆ, ಅರ್ಜಿಯ ಆಕ್ಷೇಪಣೆಗಳಿಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು 2025ರ ಫೆ.3ಕ್ಕೆ ಮುಂದೂಡಿದೆ.

Update: 2024-12-14 08:35 GMT
ಕರ್ನಾಟಕ ಹೈಕೋರ್ಟ್‌

ಆಸ್ತಿಗಳ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿರುವ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಕ್ಷೇಪಣೆಗಳಿಗೆ ವಿವರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಬೆಂಗಳೂರಿನ ಎಸ್.ಗೌರಿಶಂಕರ್ ಎಂಬುವರು ಇ-ಖಾತಾ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ನೀಡಲು ನಿರಾಕರಿಸಿದೆ. ಆದರೆ, ಅರ್ಜಿಯ ಆಕ್ಷೇಪಣೆಗಳಿಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು 2025ರ ಫೆ.3ಕ್ಕೆ ಮುಂದೂಡಿದೆ.

ರಾಜ್ಯದಲ್ಲಿ ಎಲ್ಲಾ ಬಗೆಯ ಆಸ್ತಿಗಳ ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತೆ ನೋಂದಣಿಗೆ ಯಾವುದೇ ಸಿದ್ಧತೆ ನಡೆಸಿಲ್ಲ. ಇದರಿಂದ ಆಸ್ತಿಗಳ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಬ್ಯಾಂಕುಗಳು ಕೂಡ ಸಾಲ ನೀಡುತ್ತಿಲ್ಲ. ಈ ಎಲ್ಲಾ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು ವ್ಯಾಪ್ತಿಯ ಎಲ್ಲ ಆಸ್ತಿಗಳಿಗೆ ಇ-ಖಾತೆ ಪೂರೈಸುವ ತನಕ ಆಸ್ತಿಗಳ ನೋಂದಣಿಗೆ ಇ-ಖಾತೆ ಕಡ್ಡಾಯ ಮಾಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿತ್ತು. ಅಲ್ಲದೇ ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಗೌರಿಶಂಕರ್ ಕೋರಿದ್ದರು.

ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಸರ್ಕಾರ ಯಾವುದೇ ಸಿದ್ಧತೆ ಇಲ್ಲದೇ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಆಸ್ತಿ ಮಾಲೀಕರು ಪರಿತಪಿಸುವಂತಾಗಿತ್ತು. ಸರ್ವರ್ ಸಮಸ್ಯೆ, ಕರಡು ಖಾತಾಗಳಲ್ಲಿನ ದೋಷ, ಅಗತ್ಯ ದಾಖಲೆಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಇ-ಖಾತೆ ಸಿಗುತ್ತಿರಲಿಲ್ಲ. ಪ್ರಸ್ತುತ ಇ-ಖಾತೆ ಇಲ್ಲದೆ ಆಸ್ತಿ ನೋಂದಣಿ ಸಾಧ್ಯವಿಲ್ಲದಿರುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಆಸ್ತಿ ನೋಂದಣಿ, ಅಡಮಾನ ಸಾಲ ಪಡೆಯುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ.

Tags:    

Similar News