ದಸರಾ ರಜೆಯ ಮೋಜು : ವಿವಿಧೆಡೆ ಆರು ಮಂದಿ ನೀರುಪಾಲು

ಗ್ರಾಮಸ್ಥರು ಮತ್ತು ಪೊಲೀಸರು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೂವರು ಬಾಲಕರ ಮೃತದೇಹಗಳನ್ನು ಹೊರತೆಗೆದರು.

Update: 2025-10-04 04:36 GMT

ಈಜಲು ತೆರಳಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದಲ್ಲಿ ನಡೆದಿದೆ.

ಶಾಲೆಗೆ ದಸರಾ ರಜೆ ನೀಡಿದ್ದರಿಂದ ಬಾಲಕರು ಕೆರೆಗೆ ಈಜಲು ತೆರಳಿದ್ದಾಗ ಶುಕ್ರವಾರ ಸಂಜೆ ಈ ದುರಂತ ಸಂಭವಿಸಿದೆ.

ಮೃತರನ್ನು ವಿಷ್ಣು (14), ನಿಹಾಲ್ ರಾಜ್ (12) ಹಾಗೂ ಹರ್ಷವರ್ಧನ್ (16) ಎಂದು ಗುರುತಿಸಲಾಗಿದೆ.

ಬಾಲಕರು ನೀರಿನಲ್ಲಿ ಮುಳುಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಪೊಲೀಸರು ಮೃತದೇಹಗಳಿಗಾಗಿ ತೀವ್ರ ಶೋಧ ನಡೆಸಿದರು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಯಿತು. ಸ್ಥಳದಲ್ಲಿ ಬಾಲಕರ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮುದ್ರದಲ್ಲಿ ಮುಳುಗಿ ಮೂವರು ಸಾವು

ಮತ್ತೊಂದು ದುರಂತದಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮೂವರು ಪಿಕ್ ನಿಕ್ ಗೆಂದು ಮಹಾರಾಷ್ಟ್ರದ ಸಿಂಧುದುರ್ಗದ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಫರಿನ್ ಇರ್ಫಾನ್ ಕಿತ್ತೂರ (34), ಇಬಾದ್ ಕಿತ್ತೂರ (13) ಹಾಗೂ ಅಳ್ನಾವರ ಮೂಲದ ನಮೀರಾ ಅಕ್ತರ್ (16 ) ಎಂದು ಗುರುತಿಸಲಾಗಿದೆ.

ದಸರಾ ರಜೆಯ ಪ್ರಯುಕ್ತ ಖಾನಾಪುರ ತಾಲೂಕಿನ ಲೋಂಡಾ ಗ್ರಾಮದವರಾದ ಇವರು, ಸಿಂಧುದುರ್ಗಕ್ಕೆ ಪಿಕ್ ನಿಕ್ ಹೋಗಿದ್ದರು. ಸಮುದ್ರ ತೀರದಲ್ಲಿ ಆಟವಾಡುವ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ಸಮುದ್ರಪಾಲಾಗಿದ್ದಾರೆ.

ಸ್ಥಳೀಯ ಮೀನುಗಾರರು ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.  

Tags:    

Similar News