ದುಬಾರಿ ದುನಿಯಾ ಗ್ಯಾರಂಟಿ | ಇಂಧನ ಬೆಲೆ ಹೆಚ್ಚಳದ ಬೆನ್ನಲ್ಲೇ ಹಾಲಿನ ದರ ಏರಿಕೆ ಬರೆ!

ಪೆಟ್ರೋಲ್‌ ಮತ್ತು ಡೀಸೆಲ್‌ ಸೆಸ್‌ ಹೆಚ್ಚಳದ ಮೂಲಕ ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ, ಇದೀಗ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಉರಿವ ಗಾಯಕ್ಕೆ ಉಪ್ಪು ಸವರಿದೆ.

Update: 2024-06-25 08:36 GMT

Nandini Milk Price Hike | ಪೆಟ್ರೋಲ್‌ ಮತ್ತು ಡೀಸೆಲ್‌ ಸೆಸ್‌ ಹೆಚ್ಚಳದ ಮೂಲಕ ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ, ಇದೀಗ ನಂದಿನಿ ಹಾಲಿನ ದರ ಹೆಚ್ಚಳ ಮಾಡುವ ಮೂಲಕ ಉರಿವ ಗಾಯಕ್ಕೆ ಉಪ್ಪು ಸವರಿದೆ.

ನಾಳೆಯಿಂದಲೇ (ಜೂ.26)ರಿಂದಲೇ ದರ ಹೆಚ್ಚಳ ಜಾರಿಗೆ ಬರಲಿದ್ದು, ಲೀಟರ್‌ ಮತ್ತು ಅರ್ಧ ಲೀಟರ್‌ ಪಾಕೆಟ್‌ ಮೇಲೆ ತಲಾ ಎರಡು ರೂಪಾಯಿ ಹೆಚ್ಚಳ ಮಾಡಲಾಗುವುದು ಎಂದು ಕರ್ನಾಟಕ ಹಾಲು ಮಹಾಮಂಡಳ(KMF) ಘೋಷಿಸಿದೆ.

ಕೆಎಂಎಫ್‌ ನ ಬೆಂಗಳೂರಿನ ಮುಖ್ಯ ಕಚೇರಿಯಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ್‌ ಅವರು ಈ ದರ ಹೆಚ್ಚಳವನ್ನು ಪ್ರಕಟಿಸಿದ್ದು, ಹೊಸ ದರಗಳು ನಾಳೆ ಬೆಳಿಗ್ಗೆಯಿಂದಲೇ ಜಾರಿಗೆ ಬರಲಿವೆ ಎಂದಿದ್ದಾರೆ.

ಸದ್ಯ ಒಂದು ಲೀಟರ್‌ ಸಾದಾ ಹಾಲಿನ ಬೆಲೆ 42 ರೂಪಾಯಿಗಳಾಗಿದ್ದು, ನಾಳೆಯಿಂದ ಅದು 46 ರೂಪಾಯಿ ಆಗಲಿದೆ. ಹಾಗೆಯೇ ಅರ್ಧ ಲೀಟರ್‌ ಸಾದಾ ಹಾಲಿನ ಪಾಕೆಟ್‌ ಬೆಲೆ ಸದ್ಯ  22 ರೂ.ಗಳಿದ್ದು, ನಾಳೆಯಿಂದ ಆ ದರ 24 ರೂ.ಗಳಾಗಲಿದೆ. ಈ ಬೆಲೆ ಹೆಚ್ಚಳಕ್ಕೆ ಪ್ರತಿಯಾಗಿ ಗ್ರಾಹಕರಿಗೆ ಪ್ರತಿ ಪಾಕೆಟ್‌ ಗೆ 50 ಮಿ.ಲೀ ಹಾಲು ಹೆಚ್ಚುವರಿಯಾಗಿ ಸಿಗಲಿದೆ ಎಂದೂ ಭೀಮಾನಾಯ್ಕ್‌ ಮಾಹಿತಿ ನೀಡಿದ್ದಾರೆ.

ಹಾಲು ಹೊರತುಪಡಿಸಿ ಉಳಿದ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ದರ ಹೆಚ್ಚಳವಿಲ್ಲ ಎಂದಿದ್ದ ಸರ್ಕಾರ

ಹಾಲಿನ ದರ ಹೆಚ್ಚಳದ ಕುರಿತು ತಿಂಗಳ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್‌ ಅವರು, ರಾಜ್ಯದಲ್ಲಿ ಸದ್ಯ ಹಾಲಿನ ದರ ಹೆಚ್ಚಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದರು. ಇದೀಗ ಲೋಕಸಭಾ ಚುನಾವಣೆಗಳು ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಸರ್ಕಾರ, ಇಂಧನ ಬೆಲೆ ಏರಿಕೆ ಬಳಿಕ ಇದೀಗ ಹಾಲಿನ ಬೆಲೆಯಲ್ಲೂ ಏರಿಸಿದೆ. 

ಈಗಾಗಲೇ ತರಕಾರಿ, ದಿನಸಿ, ಅಡುಗೆ ಎಣ್ಣೆ, ಆಟೋ ಮತ್ತು ಬಸ್‌ ದರ ಏರಿಕೆಗಳಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ನಡುವೆ, ಹಾಲಿನ ದರ ಏರಿಕೆಯ ಮೂಲಕ ಸರ್ಕಾರ ಬಡವರ ಬದುಕಿನ ಮೇಲೆ ಮತ್ತೊಂದು ಬರೆ ಎಳೆದಿದೆ.

Tags:    

Similar News