ಬರ ಪರಿಹಾರ | ಮೂರು ದಿನದಲ್ಲಿ ರೈತರ ಖಾತೆಗೆ ಪರಿಹಾರ ಹಣ: ಸಚಿವ ಕೃಷ್ಣ ಬೈರೇಗೌಡ
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಮೊತ್ತವನ್ನು ರಾಜ್ಯದ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ಮೂರು ದಿನಗಳಲ್ಲಿ ಹಣ ಜಮೆ ಆಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ;
ರಾಜ್ಯದ ರೈತರಿಗೆ ಬರ ಪರಿಹಾರ ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಎರಡರಿಂದ ಮೂರು ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಬರ ಪರಿಹಾರಕ್ಕಾಗಿ 3,454.22 ಕೋಟಿ ರೂಪಾಯಿ ನೀಡಿದ್ದು, ಸೋಮವಾರದಿಂದಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಎರಡರಿಂದ ಮೂರು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದ ಕೂಡಲೇ ರೈತರಿಗೆ ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಏಪ್ರಿಲ್ 27 ಹಾಗೂ 28ರಂದು ಸರ್ಕಾರಿ ರಜೆ ದಿನಗಳಾಗಿದ್ದರಿಂದ ಏಪ್ರಿಲ್ 29 ಹಾಗೂ 30ರಂದು ಬೆಳೆ ಹಾನಿ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮೇ 1ರಂದು ಕಾರ್ಮಿಕರ ದಿನಾಚರಣೆಯಾಗಿದ್ದು, ಸರ್ಕಾರಿ ರಜೆ ಇತ್ತು. ಮೊದಲ ಹಂತದ ಬೆಳೆ ಹಾನಿ ಪರಿಹಾರವನ್ನು ನೀಡಿ, ಬಾಕಿ ಮೊತ್ತಕ್ಕೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಅರ್ಹ ರೈತರಿಗೆ ಪಾವತಿ ಮಾಡಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮೇ 2ರಂದು ಆದೇಶಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ಮೊದಲ ಹಂತದಲ್ಲಿ 33,58,999 ರೈತರಿಗೆ 636.45 ಕೋಟಿ ರೂಪಾಯಿ ಪರಿಹಾರವನ್ನು ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಪಾವತಿ ಮಾಡಲಾಗಿದೆ. ಇನ್ನು ಅತಿ ಕಡಿಮೆ ಜಮೀನು ಇರುವ 4,43,691 ರೈತರಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರ ಪೂರ್ಣ ಪ್ರಮಾಣದ ಪರಿಹಾರ ಪಾವತಿ ಮಾಡಲಾಗಿದೆ. ಈ ಮೂಲಕ ಇಲ್ಲಿಯವರೆಗೆ 31,82,602 ರೈತರಿಗೆ ಪೂರ್ಣ ಬೆಳೆ ಹಾನಿ ಪರಿಹಾರ ಪಾವತಿ ಮಾಡಲಾಗಿದೆ. ಇನ್ನುಳಿದ 2 ಲಕ್ಷ ರೈತರಿಗೆ ಬರ ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ನಾವು ಕೇಳಿದಷ್ಟು ಬರ ಪರಿಹಾರ ಬಿಡುಗಡೆ ಮಾಡಿಲ್ಲ. ಬಾಕಿ ಪರಿಹಾರದ ಹಣ ಪಡೆಯಲು ಕಾನೂನಾತ್ಮಕ ಹೋರಾಟ ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ.