The Federal Series- 4 | ಡಬಲ್‌ ಡೆಕ್ಕರ್‌ ರಸ್ತೆ ಸವಾರಿ; ವೆಚ್ಚ ಮಾತ್ರ ಬಲು ದುಬಾರಿ

ಡಬಲ್ ಡೆಕ್ಕರ್ ಹಾಗೂ ಸುರಂಗ ಮಾರ್ಗವು ಸುಸ್ಥಿರವಲ್ಲದ ಯೋಜನೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹೇಳಿದೆ. ಇದರ ನಡುವೆಯೂ, ಡಬಲ್‌ ಡೆಕ್ಕರ್‌ ಹಾಗೂ ಟನಲ್‌ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.;

Update: 2025-03-18 02:00 GMT
ಬೆಂಗಳೂರಿನ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಮೀಪದ ಡಬಲ್‌ ಡೆಕ್ಕರ್‌ ರಸ್ತೆ

ಬೆಂಗಳೂರಿನ ಸಂಚಾರ ದಟ್ಟಣೆ ತಗ್ಗಿಸಲು ತೀವ್ರ ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರ, ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ರಸ್ತೆಗಳು ದಟ್ಟಣೆ ಹೆಚ್ಚಿಸುವ ಜೊತೆಗೆ ದುಬಾರಿ ವೆಚ್ಚಕ್ಕೆ ಕಾರಣವಾಗಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರಿನ ಈಗಿನ ಸನ್ನಿವೇಶಕ್ಕೆ ಡಬಲ್ ಡೆಕ್ಕರ್ ಹಾಗೂ ಸುರಂಗ ಮಾರ್ಗವು ಸುಸ್ಥಿರವಲ್ಲದ ಯೋಜನೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ. ಇದರ ನಡುವೆಯೂ, ಡಬಲ್‌ ಡೆಕ್ಕರ್‌ ಹಾಗೂ ಟನಲ್‌ ರಸ್ತೆ ಯೋಜನೆಗೆ ರಾಜ್ಯ ಸರ್ಕಾರ ಉತ್ಸಾಹ ತೋರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.  

ಬೆಂಗಳೂರಿನಲ್ಲಿ ಈಗಾಗಲೇ ಎಲಿವೇಟೆಡ್ ಕಾರಿಡಾರ್, ಸಾಕಷ್ಟು ಮೇಲ್ಸೇತುವೆಗಳು, ಅಂಡರ್‌ಪಾಸ್‌ ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿಲ್ಲ. ಈಗ ಡಬಲ್ ಡೆಕ್ಕರ್ ರಸ್ತೆ, ಟನಲ್ ರಸ್ತೆ ಯೋಜನೆ ಜಾರಿಗೆ ಸಿದ್ಧತೆ ನಡೆದಿದೆ. ಆದರೆ, ಈ ಸಾರಿಗೆ ವಿಧಾನವು ಅತಿ ದುಬಾರಿಯಾಗಿರುವುದಲ್ಲದೇ ಇನ್ನಷ್ಟು ಸಂಚಾರ ದಟ್ಟಣೆಗೆ ಕಾರಣವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.     

ಡಬಲ್‌ ಡೆಕ್ಕರ್‌ ಪ್ರಾಯೋಗಿಕ ಆರಂಭ

2024 ಆಗಸ್ಟ್‌ ತಿಂಗಳಲ್ಲಿ ರಾಗಿಗುಡ್ಡದಿಂದ ಬೊಮ್ಮಸಂದ್ರದವರೆಗೆ ಡಬಲ್ ಡೆಕ್ಕರ್ ಕಾರಿಡಾರ್‌ ನಿರ್ಮಾಣ ಪೂರ್ಣಗೊಂಡಿದೆ. 3.2 ಕಿ.ಮೀ. ಉದ್ದದ ಈ ಕಾರಿಡಾರ್‌ನಲ್ಲಿ ಸಂಚಾರವೂ ಆರಂಭವಾಗಿದೆ. ಆದರೆ, ವಾಹನ ದಟ್ಟಣೆಗೆ ಕುಖ್ಯಾತಿ ಗಳಿಸಿರುವ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಹೆಚ್ಚು ವಾಹನಗಳು ಡಬಲ್‌ ಡೆಕ್ಕರ್‌ ರಸ್ತೆ ಅವಲಂಬಿಸಿರುವುದರಿಂದ ಆಗಾಗ್ಗೆ ವಾಹನ ದಟ್ಟಣೆ ಕಂಡು ಬರುತ್ತಿದೆ.

ಮೆಟ್ರೋ ಯೋಜನೆ 2ಎ ಮತ್ತು 2ಬಿ ಯಡಿ ಸಿಲ್ಕ್ ಬೋರ್ಡ್ ನಿಂದ  ಕೆ.ಆರ್.ಪುರಂ ಹಾಗೂ ಕೆ.ಆರ್.ಪುರಂನಿಂದ ಬೆಂಗಳೂರು ವಿಮಾನ ನಿಲ್ದಾಣದವರೆಗೆ ಮೆಟ್ರೋ ನೀಲಿ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ಡಬಲ್ ಡೆಕ್ಕರ್ ರಸ್ತೆ ಯೋಜನೆಗಾಗಿಯೇ ಬಜೆಟ್‌ನಲ್ಲಿ 9ಸಾವಿರ ಕೋಟಿ ರೂ. ಮೀಸಲಿರಿಸಿದೆ. ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್‌ 50:50 ಅನುಪಾತದಲ್ಲಿ ಹೂಡಿಕೆ ಮಾಡಲಿವೆ.

ಕಿ.ಮೀ.ಗೆ 120ಕೋಟಿ ವೆಚ್ಚ

ಡಬಲ್‌ ಡೆಕ್ಕರ್‌ (ಮೆಟ್ರೋ ಹಾಗೂ ಸಾರಿಗೆ) ಯೋಜನೆ ಅತ್ಯಂತ ದುಬಾರಿಯಾಗಿದೆ ಎಂಬ ಆಕ್ಷೇಪವೂ ಕೇಳಿಬರುತ್ತಿದೆ. ಪ್ರತಿ ಒಂದು ಕಿ.ಮೀ ಡಬಲ್‌ ಡೆಕ್ಕರ್‌ ರಸ್ತೆ ನಿರ್ಮಾಣಕ್ಕೆ 120 ಕೋಟಿ ರೂ. ವೆಚ್ಚವಾಗಲಿದ್ದು, ಅನಗತ್ಯ ಹೊರೆಯಾಗಲಿದೆ. ಚಾಲ್ತಿಯಲ್ಲಿರುವ ತಂತ್ರಜ್ಞಾನ ಬಳಸಿಕೊಂಡು ಅಗ್ಗದ ದರದ ಮಾಸ್‌ ರಾಪಿಡ್‌ ಟ್ರಾನ್‌ ಪೋರ್ಟ್‌ ವ್ಯವಸ್ಥೆ ಜಾರಿಗೆ ತಜ್ಞರು ಸಲಹೆ ನೀಡಿದ್ದಾರೆ.

"ಬೆಂಗಳೂರಿಗೆ ಮಾಸ್ ರಾಪಿಡ್‌ ಟ್ರಾನ್ಸ್‌ಪೋರ್ಟ್‌ ಹೆಚ್ಚು ಅನುಕೂಲ. ಬಹುಮಾದರಿಯ ಸಾರಿಗೆ ವ್ಯವಸ್ಥೆಯಿಂದ ಸಂಚಾರ ದಟ್ಟಣೆ ನಿಯಂತ್ರಿಸಬಹುದು. ಇದಕ್ಕೆ ಹೆಚ್ಚು ಭೂಮಿ ಅಗತ್ಯ ಇರುವುದಿಲ್ಲ. ನಿರ್ವಹಣೆಯೂ ಸುಲಭವಾಗಲಿದೆ. ಟನಲ್ ರಸ್ತೆ ಹಾಗೂ ಡಬಲ್ ಡೆಕ್ಕರ್‌ಗಳು ಹೆಚ್ಚು ಹೂಡಿಕೆ ಬೇಡುತ್ತವೆ. ಜೊತೆಗೆ ಸಂಚಾರ ದಟ್ಟಣೆ ಪೂರ್ಣ ಪ್ರಮಾಣದಲ್ಲಿ ತಗ್ಗುವ ವಿಶ್ವಾಸವೂ ಇಲ್ಲ. ಇದಕ್ಕೆ ಎಂಆರ್‌ಟಿಎಸ್‌ ವಿಧಾನವೇ ಅತ್ಯುತ್ತಮ ಆಯ್ಕೆಯಾಗಿದೆ" ಎಂದು ನಗರ ತಜ್ಞ ಪ್ರೊ.ಎಂ.ಎನ್.ಶ್ರೀಹರಿ ಅವರು "ದ ಫೆಡರಲ್ ಕರ್ನಾಟಕ"ಕ್ಕೆ ತಿಳಿಸಿದರು.

"ಈ ಹಿಂದೆಯೇ ಕೊಲ್ಕತ್ತಾದಲ್ಲಿ ಎಂಆರ್‌ಟಿಎಸ್‌ ಸಾರಿಗೆ ಅತ್ಯಂತ ಯಶಸ್ವಿಯಾಗಿದೆ. ಒಂದೇ ರಸ್ತೆಯಲ್ಲಿ ಸಬ್ ಅರ್ಬನ್ ರೈಲು, ಮೆಟ್ರೋ ಹಾಗೂ ವಾಹನಗಳು ಪ್ರಯಾಣಿಸಬಹುದಾಗಿದೆ. ಭವಿಷ್ಯದಲ್ಲಿ ವಿಸ್ತರಣೆಯೂ ಸುಲಭವಾಗಲಿದೆ" ಎಂದು ಹೇಳಿದರು.

"ದೆಹಲಿಯಲ್ಲಿ ಏಷ್ಯನ್ ಗೇಮ್ಸ್ ಅವಧಿಯಲ್ಲಿ ಮಾಸ್ ರಾಪಿಡ್‌ ಟ್ರಾನ್ಸ್‌ಪೋರ್ಟ್‌ ವ್ಯವಸ್ಥೆ ಅನುಷ್ಠಾನ ಮಾಡಿದ್ದೆವು. ಎಂಆರ್‌ಟಿಎಸ್‌ ವ್ಯವಸ್ಥೆಗೆ ಅಗತ್ಯವಾದ ತಂತ್ರಜ್ಞಾನ ಸುಲಭವಾಗಿ ಸಿಗಲಿದ್ದು, ಇದನ್ನು ಬೇರೆ ಕಡೆ ವಿಸ್ತರಣೆ ಮಾಡುವುದು ಉತ್ತಮ. ಬೆಂಗಳೂರು ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರ. ಜೊತೆಗೆ ಸುರಕ್ಷಿತವಾದ ಸ್ಥಳವೂ ಹೌದು. ಆದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವೆ ಅಸಮತೋಲನ ಉಂಟಾಗಿದೆ" ಎಂದು ವಿವರಿಸಿದರು.

"ಎಂಆರ್‌ಟಿಎಸ್‌ ವ್ಯವಸ್ಥೆಯಲ್ಲಿ ಸಬ್ ಅರ್ಬನ್ ರೈಲು, ಮೆಟ್ರೋ ಹಾಗೂ ವಾಹನಗಳಿಗೆ ಅಂತರ್ ಸಂಪರ್ಕ ಕಲ್ಪಿಸಲಾಗುತ್ತದೆ. ಟ್ರಾಫಿಕ್ ಹೆಚ್ಚಿರುವುದರಿಂದ ಒಂದಕ್ಕಿಂತ ನಾಲ್ಕೈದು ಸಾರಿಗೆ ಒಟ್ಟಿಗೆ ಬಂದರೆ ಉತ್ತಮ. ಕಡಿಮೆ ಅವಧಿಯ ಏರಿಯಲ್ ಟ್ರಾನ್‌ಪೋರ್ಟ್‌ಗೂ ಅವಕಾಶ ಮಾಡಿಕೊಡಲಿದೆ" ಎಂದು ತಿಳಿಸಿದರು.

"ಇಂದು ಪ್ರಯಾಣದ ಅವಧಿಯು ಹಣವಿದ್ದಂತೆ. ಪ್ರಯಾಣದ ಅವಧಿ ಉಳಿಸುವುದರಿಂದ ಉತ್ಪಾದನೆ ಸಾಮರ್ಥ್ಯ ಹೆಚ್ಚಲಿದೆ. ಇದರಿಂದ ರಾಷ್ಟ್ರೀಯ ನಿವ್ವಳ ಉತ್ಪನ್ನ(ಜಿಡಿಪಿ) ಹೆಚ್ಚಳಕ್ಕೂ ನೆರವಾಗಲಿದೆ" ಎಂದು ಪ್ರೊ.ಎಂ.ಎನ್.ಶ್ರೀಹರಿ ತಿಳಿಸಿದರು.

ಶೇ.30 ರಷ್ಟು ಸಂಚಾರ ದಟ್ಟಣೆ ಕಡಿಮೆ
ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ಡಬಲ್‌ ಡೆಕ್ಕರ್‌ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತವಾದ ಬಳಿಕ ಈ ಭಾಗದಲ್ಲಿ ಶೇ.30 ರಷ್ಟು ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. 

ವಾಹನ ಸವಾರರು ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಿಗ್ನಲ್ ತಪ್ಪಿಸುವುದರಿಂದ 15-20 ನಿಮಿಷಗಳ ಸಮಯ ಉಳಿತಾಯವಾಗಲಿದೆ. ಡಬಲ್‌ ಡೆಕ್ಕರ್‌ ರಸ್ತೆಯಲ್ಲಿ ಅಲ್ಲಲ್ಲಿ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆ ಕಲ್ಪಿಸಿರುವುದರಿಂದ ರಾಗಿಗುಡ್ಡ, ಬಿಟಿಎಂ ಲೇಔಟ್‌ನಿಂದ ಕೆ.ಆರ್.ಪುರ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಹೋಗುವವರಿಗೂ ಅನುಕೂಲವಾಗಿದೆ. ಜೊತೆಗೆ ಬನ್ನೇರುಘಟ್ಟ ರಸ್ತೆಯಿಂದ ಬರುವವರಿಗೂ ಇದು ಸಹಾಯವಾಗಿದೆ. ಆದಾಗ್ಯೂ ಇನ್ನೂ ಹಲವೆಡೆ 1.3 ಕಿ.ಮೀ. ಉದ್ದದ ರ‍್ಯಾಂಪ್‌ಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಜೂನ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಉದ್ದೇಶಿತ ಡಬಲ್ ಡೆಕ್ಕರ್ ರಸ್ತೆ?

ಕಾರಿಡಾರ್ -1: ಮೆಟ್ರೋ ಹಂತ 2 ರ ಹೊರವರ್ತುಲ ರಸ್ತೆ(ಒಆರ್ಆರ್) ಪಶ್ಚಿಮ ಮಾರ್ಗ ಒಳಗೊಂಡು ಮೆಟ್ರೋ ಹಂತ 3ರಲ್ಲಿ ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳದವರೆಗಿನ 29.20 ಕಿ.ಮೀ ಕಾರಿಡಾರ್.

ಕಾರಿಡಾರ್-2: ಮಾಗಡಿ ರಸ್ತೆ ಮೆಟ್ರೋಲೈಟ್ ಸೇರಿದಂತೆ ಮೆಟ್ರೋ ಹಂತ 3ರಲ್ಲಿ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 11.45 ಕಿ.ಮೀ ಉದ್ದದ ಕಾರಿಡಾರ್.

ಕಾರಿಡಾರ್ -3: ಮೆಟ್ರೋ ಹಂತ ಮೂರರಲ್ಲಿ ಹೆಬ್ಬಾಳದಿಂದ - ಸರ್ಜಾಪುರ ಮೆಟ್ರೋಲೈಟ್ ಸೇರಿ ಸರ್ಜಾಪುರದಿಂದ ಇಬ್ಬಲೂರು ಹೊರವರ್ತುಲ ರಸ್ತೆವರೆಗಿನ 14 ಕಿಮೀ ಉದ್ದದ ಕಾರಿಡಾರ್.

ಕಾರಿಡಾರ್-4: ಮೆಟ್ರೋ ಹಂತ 3ಎನಲ್ಲಿ ಹೆಬ್ಬಾಳ - ಸರ್ಜಾಪುರ ಮೆಟ್ರೋಲೈಟ್ ಒಳಗೊಂಡು ಅಗರದಿಂದ ಕೋರಮಂಗಲದವರೆಗಿನ 2.45 ಕಿ.ಮೀ ಉದ್ದದ ಕಾರಿಡಾರ್.

ಕಾರಿಡಾರ್ -5: ಮೆಟ್ರೋ ಹಳದಿ ಮಾರ್ಗದಲ್ಲಿ ರಾಗ್ಗಿಗುಡ್ಡದಿಂದ ಸಿಲ್ಕ್ ಬೋರ್ಡ್ವರೆಗಿನ 3.2 ಕಿ.ಮೀ. ಉದ್ದದ 5 ನೇ ಕಾರಿಡಾರ್ ಈಗಾಗಲೇ ವಾಹನ ಬಳಕೆಗೆ ಮುಕ್ತವಾಗಿದೆ.

ಡಬಲ್ ಡೆಕ್ಕರ್‌ಗೆ ಆಕ್ಷೇಪಣೆ ಏನು?

ಉದ್ದೇಶಿತ ಡಬಲ್-ಡೆಕ್ಕರ್ ರಸ್ತೆಯನ್ನು ಅಸ್ತಿತ್ವದಲ್ಲಿರುವ ರಸ್ತೆ ಜಾಲದೊಂದಿಗೆ ಸಂಯೋಜಿಸಲಾಗುತ್ತಿದೆ. ಆದರೆ, ಡಬಲ್ ಡೆಕ್ಕರ್ ರಸ್ತೆ ಯೋಜನೆ ಸುಸ್ಥಿರವಲ್ಲ. ಡಬಲ್ ಡೆಕ್ಕರ್ ರಸ್ತೆಗಳು ದಟ್ಟಣೆ ಪರಿಹರಿಸಲು ವಿಫಲವಾಗಲಿವೆ. ಜೊತೆಗೆ ಹೆಚ್ಚಿನ ವೆಚ್ಚದ ಯೋಜನೆಗಳಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.

ಡಬಲ್ ಡೆಕ್ಕರ್ ಹಾಗೂ ಸುರಂಗ ಮಾರ್ಗಗಳು ಪರಿಸರ ನಾಶ ಹಾಗೂ ನಗರ ಅಸಮಾನತೆ ಮೇಲೆ ತೀವ್ರತರದ ಪರಿಣಾಮ ಬೀರಲಿವೆ. ಡಬಲ್ ಡೆಕ್ಕರ್ ಮತ್ತು ಸುರಂಗ ರಸ್ತೆಗಳು ಖಾಸಗಿ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲಿವೆ. ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ವಾಹನ ದಟ್ಟಣೆ ಹೆಚ್ಚಿಸಲಿವೆ. ಮೆಟ್ರೋ ಅಥವಾ ಲಘು ರೈಲು ವ್ಯವಸ್ಥೆಗಿಂತ ಕಡಿಮೆ ಜನ ಸಂಚಾರ ಒಳಗೊಳ್ಳಲಿವೆ. ಇದು ಸುಸ್ಥಿರ ಸಾರಿಗೆಗೆ ಸೂಕ್ತ ಪರಿಹಾರವಲ್ಲ. ಇಂತಹ ಸುಸ್ಥಿರವಲ್ಲದ ಯೋಜನೆಗಳು ಪ್ರಯೋಜನಗಳಿಗಿಂತ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಲಿವೆ ಎಂದು ಐಐಎಸ್ಸಿ ವರದಿ ಹೇಳಿದೆ.

Tags:    

Similar News