ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಬೇಡಿ; ಪ್ರತಿಪಕ್ಷ ನಾಯಕ ಆರ್‌.ಅಶೋಕ ಮನವಿ

ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೇ ಹೊರತು, ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರೂ ಧರ್ಮಸ್ಥಳದ ದೇವಾಲಯವನ್ನು ಗುರಿ ಮಾಡಬಾರದು ಎಂದು ಅಶೋಕ್‌ ಹೇಳಿದರು.;

Update: 2025-07-21 15:18 GMT

ಧರ್ಮಸ್ಥಳದ ಬಳಿ ಸಾವಿರಾರು ಶವಗಳು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ. ಆದರೆ, ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದ ಬಗ್ಗೆ ಅಪಪ್ರಚಾರ ಮಾಡುವುದು ತಪ್ಪು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಭಾಗದಲ್ಲಿ ಸಾವಿರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು ಎಂದು ಹೇಳಿದರು.

ದಕ್ಷಿಣ ಭಾರತದಲ್ಲಿ ತಿರುಪತಿ ಹಾಗೂ ಧರ್ಮಸ್ಥಳವು ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಯುವಕನೊಬ್ಬ ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದಾನೆ. ಈ ನಡುವೆ ಕೇರಳ ಸರ್ಕಾರ ಮಧ್ಯಪ್ರವೇಶ ಮಾಡಿದೆ. ಕೇರಳ ಸರ್ಕಾರ ಅಲ್ಲಿನ ದೇವಸ್ಥಾನಗಳ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆ, ಶಬರಿಮಲೆ ಅಯ್ಯಪ್ಪ ದೇವಾಲಯದ ವಿಚಾರದಲ್ಲಿ ಹೇಗೆ ನಡೆದುಕೊಂಡಿದೆ ಎಂಬುದು ಜಗಜ್ಜಾಹೀರಾಗಿದೆ. ಯಾವುದೇ ಕೊಲೆಯಾಗಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಯ ಸಿಬ್ಬಂದಿ ತನಿಖೆ ನಡೆಸಬೇಕು ಎಂದು ತಿಳಿಸಿದರು.

ಸಾವಿರಾರು ಶವಗಳು ಸಿಕ್ಕಿದೆ ಎಂದರೆ, ಅವರ ಕುಟುಂಬದವರು ದೂರು ದಾಖಲಿಸುತ್ತಾರೆ. ಅಂತಹ ಪ್ರಕರಣ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ದೇವಾಲಯ ಮಾತ್ರವಲ್ಲದೆ, ಚರ್ಚ್‌, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಬಳಿ ಅನೇಕರು ಸಾಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ. ಯಾರೋ ಒಬ್ಬರಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಧರ್ಮಕ್ಕೆ ಅಪಮಾನ ಮಾಡಲು ವಿವಾದ ಮಾಡುವುದು ಸರಿಯಲ್ಲ. ಇದರಲ್ಲಿ ಧರ್ಮಸ್ಥಳದ ಮಂಜುನಾಥಸ್ವಾಮಿ ವಿಚಾರವೇ ಬರುವುದಿಲ್ಲ. ಆದರೂ ಪದೇ ಪದೆ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.

ಯಾವುದೇ ವ್ಯಕ್ತಿ ತಪ್ಪು ಮಾಡಿದರೆ, ಆ ವ್ಯಕ್ತಿಯ ಬಗ್ಗೆ ಆರೋಪ ಮಾಡಲಿ. ಆದರೆ, ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿ ಮಾಡಿ ಮಾತಾಡುವುದು ಸರಿಯಲ್ಲ. ಎಸ್‌ಐಟಿ ತಂಡಕ್ಕೆ ಸರ್ಕಾರ ಬೇರಾವುದೇ ಜವಾಬ್ದಾರಿ ವಹಿಸಬಾರದು. ಈ ತಂಡದ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದರು.

ಇದು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೇ ಹೊರತು, ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಸಂಬಂಧಿಸಿದ ವಿಷಯವಲ್ಲ. ಯಾರೂ ಧರ್ಮಸ್ಥಳದ ದೇವಾಲಯವನ್ನು ಗುರಿ ಮಾಡಬಾರದು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಮಗಿಂತಲೂ ಹೆಚ್ಚಿನ ದೈವಭಕ್ತರು. ಅವರು ದೇವರ ಇಚ್ಛೆಯಂತೆಯೇ ನಡೆದುಕೊಳ್ಳಲಿ. ಧರ್ಮಸ್ಥಳದ ದೇವಾಲಯದ ಬಗ್ಗೆ ಮನಸ್ಸಿಗೆ ಬಂದಂತೆ ಮಾತಾಡುವುದು ತಪ್ಪು. ಇಂತಹ ಮಾತುಗಳು ಯಾವುದೇ ಸಚಿವರಿಗೆ ಶೋಭೆ ತರುವುದಿಲ್ಲ ಎಂದು ಅಶೋಕ್‌ ಹೇಳಿದರು.

ಅಭಿವೃದ್ಧಿ ಇಲ್ಲದೆ ಗ್ರೇಟರ್‌ ಬೆಂಗಳೂರು ಪ್ರಸ್ತಾಪ

ಗ್ರೇಟರ್‌ ಬೆಂಗಳೂರು ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಸರ್ಕಾರಕ್ಕೆ ಕೋರ್ಟ್‌ ಸೂಚನೆ ನೀಡಿದೆ. ಇದನ್ನೇ ಮುಂದಿಟ್ಟುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಕಸದ ರಾಶಿ ಎಲ್ಲಾ ಕಡೆ ಇದೆ. ಆಸ್ಪತ್ರೆಗಳಲ್ಲಿ ಸಂಬಳ ಪಾವತಿಯಾಗಿಲ್ಲ. ಶಾಲೆಗಳ ಶಿಕ್ಷಕರನ್ನು ವಜಾ ಮಾಡಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಮಾಡಲಾಗದೆ ಐದು ಪಾಲಿಕೆ ಮಾಡುವ ವಿಷಯವನ್ನು ಮುನ್ನೆಲೆಗೆ ತರಲಾಗಿದೆ. ಎಲ್ಲದಕ್ಕೂ ಜನರ ಮೇಲೆ ತೆರಿಗೆ ಹೇರಲಾಗಿದೆ. ಇ-ಖಾತಾದಿಂದಾಗಿ ಎಲ್ಲೂ ನೋಂದಣಿ ಮಾಡಲು ಆಗುತ್ತಿಲ್ಲ. ಕಾಂಗ್ರೆಸ್‌ ವಾಮಮಾರ್ಗದಲ್ಲಿ ಗೆಲ್ಲಲು ಈ ರೀತಿ ಪಾಲಿಕೆಗಳನ್ನು ರಚಿಸುತ್ತಿದೆ. ಬೆಂಗಳೂರನ್ನು ಹೋಳು ಮಾಡುವುದನ್ನು ಬಿಜೆಪಿ ಯಾವಾಗಲೂ ವಿರೋಧ ಮಾಡಲಿದೆ. ವಿಧಾನಸಭೆ ಅಧಿವೇಶನದಲ್ಲೂ ಇದನ್ನು ವಿರೋಧಿಸಲಾಗುವುದು ಎಂದು ಅಶೋಕ್‌ ಹೇಳಿದರು.

ಮುಡಾ ಹಗರಣದ ವಿರುದ್ಧದ ಬಿಜೆಪಿಯ ಹೋರಾಟದ ಫಲವಾಗಿ ಸಿಎಂ ಸಿದ್ದರಾಮಯ್ಯ ನಿವೇಶನಗಳನ್ನು ವಾಪಸ್‌ ಮಾಡಿದ್ದಾರೆ. ತಪ್ಪಾಗಿದೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಮುಡಾ ಹಗರಣದ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Similar News