Naxal-Free Karnataka | ನಕ್ಸಲ್‌ಮುಕ್ತ ಕರ್ನಾಟಕ ಎಂಬುದು ಎಷ್ಟು ನಿಜ?

ಸದ್ಯಕ್ಕಂತೂ ಸರ್ಕಾರ, ರಾಜ್ಯವನ್ನು ನಕ್ಸಲ್‌ಮುಕ್ತ ಕರ್ನಾಟಕ ಎಂದು ಘೋಷಿಸುವ ಉಮೇದಿನಲ್ಲಿದೆ. ಇದು ಒಂದು ರೀತಿಯಲ್ಲಿ ಜ್ವಲಂತ ಬಿಕ್ಕಟ್ಟುಗಳ ಹೆಗ್ಗಣವನ್ನು ಬಿಲದೊಳಗೇ ಬಿಟ್ಟು ಮೇಲೆ ತೇಪೆ ಹಂಚಿದಂತೆ ತೋರುತ್ತಿದೆ...;

Update: 2025-01-08 11:01 GMT

ರಾಜ್ಯದ ಕೊಟ್ಟಕೊನೆಯ ನಕ್ಸಲ್ ತಂಡ ಎಂದು ಹೇಳಲಾಗುತ್ತಿರುವ ಮುಂಡಗಾರು ಲತಾ ನೇತೃತ್ವದ ಆರು ನಕ್ಸಲರ ಗುಂಪು ಇಂದು ಶರಣಾಗುತ್ತಿದೆ. ಸರ್ಕಾರದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮೂಲಕ ನಕ್ಸಲ್ ತಂಡ ಶರಣಾಗುತ್ತಿದ್ದು, ಆ ಶರಣಾಗತಿಯ ಮೂಲಕ ಕರ್ನಾಟಕ ನಕ್ಸಲ್‌ಮುಕ್ತ ರಾಜ್ಯವಾಗಿ ಹೊರಹೊಮ್ಮುತ್ತಿದೆ ಎಂದು ಸ್ವತಃ ಗೃಹ ಸಚಿವರು ಕೂಡ ಹೇಳಿದ್ದಾರೆ.

ಆದರೆ, ನಿಜವಾಗಿಯೂ ಕರ್ನಾಟಕ ಸುಮಾರು ಕಾಲು ಶತಮಾನದ ಈ ಕಳಂಕವನ್ನು ಕಳೆದುಕೊಳ್ಳುವುದೇ? ಎಂಬ ಅನುಮಾನಗಳೂ ಇದೇ ಹೊತ್ತಿನಲ್ಲಿ ಎದ್ದಿವೆ.

ರಾಜ್ಯದಲ್ಲಿ ಸರಿಸುಮಾರು 1990 ದಶಕದ ಆರಂಭದಲ್ಲೇ ಮಲೆನಾಡಿನಲ್ಲಿ ನಕ್ಸಲ್ ಟುವಟಿಕೆ ಆರಂಭವಾದರೂ, ವಾಸ್ತವವಾಗಿ ರಾಜ್ಯದಲ್ಲಿ 80ರ ದಶಕದಿಂದಲೇ ನಕ್ಸಲ್ ಚಟುವಟಿಕೆಗಳು ಚಾಲ್ತಿಯಲ್ಲಿದ್ದವು. ಉತ್ತರದ ರಾಯಚೂರು, ಬೀದರ್ ಹಾಗೂ ದಕ್ಷಿಣದ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ 85-86ರ ಹೊತ್ತಿಗೇ ಪ್ರಗತಿಪರ ವಿದ್ಯಾರ್ಥಿ ಕೇಂದ್ರ(ಪಿವಿಕೆ) ಮತ್ತು ಕರ್ನಾಟಕ ರೈತ ಕೂಲಿಕಾರ್ಮಿಕರ ಸಂಘಗಳ ಹೆಸರಲ್ಲಿ ನಕ್ಸಲೀಯ ಸಿದ್ಧಾಂತ ರಾಜ್ಯದಲ್ಲಿ ಬೇರೂರತೊಡಗಿತ್ತು. ಆಂಧ್ರಪ್ರದೇಶ ಸರ್ಕಾರ ನಕ್ಸಲ್ ನಿಗ್ರಹಕ್ಕಾಗಿ ಗ್ರೇ ಹೌಂಡ್ಸ್ ಪಡೆ ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ ಬಳಿಕ ಗಡಿ ಭಾಗದ ನಕ್ಸಲರ ಗುಂಪುಗಳು ವಿಭಜನೆಯಾಗಿ ಒಂದು ಗುಂಪು ಸಾಕೇತ್ ರಾಜನ್ ನೇತೃತ್ವದಲ್ಲಿ ರಾಜ್ಯದಲ್ಲಿ ವಿವಿಧ ಜನಪರ ಸಂಘಟನೆಗಳ ಹೆಸರಲ್ಲಿ ಚಟುವಟಿಕೆ ಆರಂಭಿಸಿತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಹೋರಾಟ, ತುಂಗಾ ಮೂಲ ಉಳಿಸಿ ಹೋರಾಟ, ದತ್ತಪೀಠ ಹೋರಾಟ ಸೇರಿದಂತೆ ಮಲೆನಾಡಿನ ಹಲವು ಭೂ ಹೋರಾಟ ಮತ್ತು ಪ್ರಗತಿಪರ ಹೋರಾಟಗಳಲ್ಲಿ ಈ ಸಂಘಟನೆಯ ಪ್ರಮುಖರು ತೊಡಗಿಸಿಕೊಂಡಿದ್ದರು.

ಆ ಹಿನ್ನೆಲೆಯಲ್ಲಿ ನೋಡಿದರೆ ಬರೋಬ್ಬರಿ ಮೂವತ್ತು ವರ್ಷಗಳ ಇತಿಹಾಸ ರಾಜ್ಯದ ನಕ್ಸಲ್ ಚಟುವಟಿಕೆಗಳಿಗೆ ಇದೆ. ಇದೀಗ ಆರು ಮಂದಿಯ ಶರಣಾಗತಿಯ ಮೂಲಕ ಆ ಮೂರು ದಶಕಗಳ ಶಸಸ್ತ್ರ ಹೋರಾಟದ ಕರಾಳ ಚರಿತ್ರೆಗೆ ಅಂತ್ಯವಾಗುವುದೇ? ಎಂಬ ಕುತೂಹಲ ಇದೆ.

ಮಲೆನಾಡಿನಲ್ಲಿ ನಕ್ಸಲ್‌ ಸಂಘಟನೆ ತೀರಾ ದುರ್ಬಲಗೊಂಡಿದ್ದು, ಅಂತಿಮವಾಗಿ ಉಳಿದಿರುವ ತಂಡ ಅನಾರೋಗ್ಯ, ಪೊಲೀಸ್‌ ಕಾರ್ಯಾಚರಣೆ, ಚಳವಳಿಗೆ ವ್ಯತಿರಿಕ್ತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ಮುಂತಾದ ಕಾರಣಗಳಿಂದಾಗಿ ಹೆಚ್ಚು ದಿನ ಭೂಗತರಾಗಿ ಕಾಡಲ್ಲಿ ಇರಲಾಗದ ಸ್ಥಿತಿಗೆ ತಲುಪಿತ್ತು. ಆದರೆ, ತಂಡದ ನಾಯಕ ವಿಕ್ರಂ ಗೌಡ ಕಟ್ಟರ್‌ ನಕ್ಸಲ್‌ವಾದಿಯಾಗಿದ್ದು, ಶರಣಾಗತಿಗೆ ಕಡು ವಿರೋಧಿಯಾಗಿದ್ದ ಎನ್ನಲಾಗಿದೆ. ಆತನನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ಶರಣಾಗತಿಗೆ ಸಿದ್ಧರಿದ್ದರು. 

ಈ ಮಾಹಿತಿ ಪಡೆದ ಪೊಲೀಸ್‌ ಇಲಾಖೆ, ವಿಕ್ರಂ ಗೌಡ ಇಲ್ಲದೇ ಹೋದರೆ ಇಡೀ ತಂಡ ಶರಣಾಗಲಿದೆ. ಆ ತಂಡ ಶರಣಾದರೆ, ಅಧಿಕೃತವಾಗಿ ಪೊಲೀಸ್‌ ಪಟ್ಟಿಯಲ್ಲಿರುವ ರಾಜ್ಯದ ನಕ್ಸಲರೆಲ್ಲರೂ ಹೊರಬಂದಂತೆ ಆಗುತ್ತದೆ. ಆ ಮೂಲಕ ಕರ್ನಾಟಕ ನಕ್ಸಲ್‌ಮುಕ್ತಗೊಳ್ಳಲಿದೆ ಎಂಬ ಲೆಕ್ಕಾಚಾರದಲ್ಲಿ ತಂತ್ರ ಹೆಣೆಯಲಾಗಿತ್ತು. ಆ ತಂತ್ರದ ಭಾಗವಾಗಿಯೇ ವಿಕ್ರಂ ಗೌಡ ಎನ್‌ಕೌಂಟರ್‌ ನಡೆಯಿತು ಎಂಬುದು ರಾಜ್ಯ ಪೊಲೀಸ್‌ ಮೂಲಗಳ ಮಾಹಿತಿ.

ಅಂದರೆ, ರಾಜ್ಯವನ್ನು ನಕ್ಸಲ್‌ಮುಕ್ತಗೊಳಿಸುವ ಮಹತ್ವದ ಗುರಿ ಸಾಧಿಸಲು ದುರ್ಬಲ ನಕ್ಸಲರ ತಂಡವನ್ನು ಶರಣಾಗತಿಗೆ ತರುವ ಕಾರ್ಯತಂತ್ರದ ಭಾಗವಾಗಿಯೇ ನಕ್ಸಲ್‌ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ನಡೆದಿತ್ತು!

ಮಲೆನಾಡಿನಲ್ಲಿ ನಕ್ಸಲ್‌ ಹೆಜ್ಜೆಗುರುತು

2002ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸಿನಹಾಡ್ಯದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಮೂಲಕ ಮೊಟ್ಟಮೊದಲ ಬಾರಿಗೆ ಮಲೆನಾಡಿನಲ್ಲಿ ನಕ್ಸಲ್ ಶಸಸ್ತ್ರ ಹೋರಾಟದ ಎಷ್ಟು ಪ್ರಬಲವಾಗಿದೆ ಎಂಬ ಸಂಗತಿ ಹೊರಜಗತ್ತಿಗೆ ಗೊತ್ತಾಗಿತ್ತು. ಆ ಬಳಿಕ 2003ರ ಈದು ಎನ್ಕೌಂಟರ್ನಲ್ಲಿ ಪಾರ್ವತಿ ಮತ್ತು ಹಾಜಿಮಾ ಎಂಬ ಇಬ್ಬರು ನಕ್ಸಲ್ ಮಹಿಳೆಯರು ಹತರಾಗಿದ್ದರು. ಆ ವೇಳೆಗಾಗಲೇ ನಕ್ಸಲ್ ಸಂಘಟನೆಯ ಬಲ ಸರ್ಕಾರಕ್ಕೆ ಮನವರಿಕೆಯಾಗಿತ್ತು. ಹಾಗಾಗಿಯೇ ಪ್ರತ್ಯೇಕ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ರಚಿಸಿ ವಿಶೇಷ ತರಬೇತಿ ಪಡೆದ ನೂರಾರು ಮಂದಿ ಪೊಲೀಸರನ್ನು ನಕ್ಸಲರ ವಿರುದ್ಧದ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

2005ರಲ್ಲಿ ಕರ್ನಾಟಕ ನಕ್ಸಲ್ ಪಡೆಗಳ ಕಮಾಂಡರ್ ಆಗಿದ್ದ ಸಾಕೇತ್ ರಾಜನ್ ಅವರನ್ನು ಅದೇ ಮೆಣಸಿನಹಾಡ್ಯದ ಬಳಿ ಎನ್ಕೌಂಟರ್ ಮಾಡಲಾಗಿತ್ತು. ಆ ವೇಳೆ ಸಾಕೇತ್ ಜೊತೆ ಶಿವಲಿಂಗು ಎಂಬ ಮತ್ತೊಂದು ನಕ್ಸಲ್ ಕೂಡ ಹತನಾಗಿದ್ದ. ರಾಜ್ಯದ ನಕ್ಸಲ್ ಸಂಘಟನೆಯ ಇತಿಹಾಸದ ವಿಷಯದಲ್ಲಿ ಈ ಮೆಣಸಿನಹಾಡ್ಯ ಎನ್ಕೌಂಟರ್ ಮಹತ್ವದ ಮೈಲಿಗಲ್ಲಾಯಿತು. ಸಂಘಟನೆಯ ನಾಯಕನ್ನೇ ಕಳೆದುಕೊಂಡ ನಕ್ಸಲರು ಆ ಬಳಿಕ ಮೂರು ಗುಂಪುಗಳಾಗಿ ಚದುರಿದರು. ನೇತ್ರಾವತಿ, ಶರಾವತಿ, ಭದ್ರಾ ಮುಂತಾದ ದಳಗಳಾಗಿ ಒಡೆದು ಹೋಗಿದ್ದ ಗುಂಪುಗಳಿಗೆ ಪ್ರತ್ಯೇಕ ನಾಯಕರು ಹುಟ್ಟಿಕೊಂಡಿದ್ದರು. ಇತ್ತೀಚೆಗೆ ಕಬ್ಬಿನಾಲೆಯಲ್ಲಿ ಎನ್ಕೌಂಟರ್ ಆದ ವಿಕ್ರಂ ಗೌಡ ಸಾಕೇತ್ ರಾಜನ್ ಬಳಿಕ ನೇತ್ರಾವತಿ ದಳ ಕಟ್ಟಿಕೊಂಡು ಅದರ ನಾಯಕತ್ವ ವಹಿಸಿಕೊಂಡಿದ್ದ ಎನ್ನಲಾಗಿದೆ.

ಸಾಕೇತ್ ರಾಜನ್ ನಿರ್ಗಮನ ಕೇವಲ ಸಂಘಟನೆಯಲ್ಲಿ ಒಡಕನ್ನು ಮಾತ್ರವಲ್ಲದೆ, ಸಂಘಟನೆಯ ಐಡಿಯಾಲಜಿಯಲ್ಲಿ ಕೂಡ ಒಡಕು ತಂದಿತ್ತು. ಸರ್ಕಾರದ ನಕ್ಸಲ್ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡ ಬಳಿಕ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಮರಳಿ ನಾಗರಿಕ ಹೋರಾಟ ಮುಂದುವರಿಸಲು ಕೆಲವರು ಯೋಚಿಸಿದರೆ ಮತ್ತೆ ಕೆಲವರು ಶಸಸ್ತ್ರ ಹೋರಾಟ ಮುಂದುವರಿಸುವ ಹಠಕ್ಕೆ ಬಿದ್ದಿದ್ದರು. ಈ ನಡುವೆ ಮತ್ತೊಂದು ಗುಂಪು ಕರ್ನಾಟಕದ ಮಲೆನಾಡು ಭಾಗ ತಮಗೆ ಸುರಕ್ಷಿತವಲ್ಲ, ವಾಪಸ್ ರಾಯಚೂರು ಕಡೆಗೆ ಅಥವಾ ದಟ್ಟಾರಣ್ಯದ ಕೇರಳ- ತಮಿಳುನಾಡು ಭಾಗಕ್ಕೆ ಚಟುವಟಿಕೆ ವಿಸ್ತರಿಸಲು ಸಿದ್ಧತೆ ಮಾಡಿಕೊಂಡಿತ್ತು.

ಒಟ್ಟಾರೆ, ಸಾಕೇತ್ ರಾಜನ್ ಎನ್ಕೌಂಟರ್ ಘಟನೆ ಕರ್ನಾಟಕದ ಮಾವೋವಾದಿ ಭೂಗತ ಚಟುವಟಿಕೆಗಳಿಗೆ ಮರ್ಮಾಘಾತ ನೀಡಿದರೆ, ಇದೀಗ ಕಳೆದ ನವೆಂಬರಿನಲ್ಲಿ ನಡೆದ ಸಾಕೇತ್ ರಾಜನ್ ಶಿಷ್ಯ ವಿಕ್ರಂ ಗೌಡ ಎನ್ಕೌಂಟರ್ ಇಡೀ ನಕ್ಸಲ್ ಚಳವಳಿ ಮತ್ತು ಸಂಘಟನೆಗೆ ಕೊನೆಯ ಮೊಳೆಯಾಯಿತು.

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಸ್ಥಳೀಯ ಮೂಲ ನಿವಾಸಿಗಳಾದ ಆದಿವಾಸಿಗಳು, ಬುಡಕಟ್ಟು ಜನರು, ಕಾಡಂಚಿನ ಕೃಷಿಕರನ್ನು ಹೊರ ಹಾಕುವ ನೋಟಿಫಿಕೇಷನ್ ವಿರುದ್ಧ ಜನರನ್ನು ಸಂಘಟಿಸುವ ಮೂಲಕ ಮಲೆನಾಡಿನಲ್ಲಿ ಬೇರೂರಿದ್ದ ನಕ್ಸಲ್ ಚಳವಳಿ ಮೂರು ದಶಕದ ಅವಧಿಯಲ್ಲಿ ಮಲೆನಾಡಿನಲ್ಲೇ ಸುಮಾರು 15 ಮಂದಿ ನಕ್ಸಲರು, 9 ಮಂದಿ ಸ್ಥಳೀಯರು ಹಾಗೂ ಇಬ್ಬರು ಪೊಲೀಸರ ಜೀವ ಪಡೆದುಕೊಂಡಿತ್ತು. ಅಲ್ಲದೆ, ಸಾಕೇತ್‌ ರಾಜನ್‌ ಎನ್‌ಕೌಂಟರ್‌ಗೆ ಪ್ರತೀಕಾರವಾಗಿ ನಕ್ಸಲರು ಪಾವಗಡದ ವೆಂಕಮ್ಮನಹಳ್ಳಿ ಪೊಲೀಸ್‌ ಕ್ಯಾಂಪ್‌ ಮೇಲೆ ದಾಳಿ ನಡೆಸಿದಾಗ ಆರು ಮಂದಿ ಪೊಲೀಸರು ಜೀವ ಕಳೆದುಕೊಂಡಿದ್ದರು.

ಅಷ್ಟಕ್ಕೂ ನಕ್ಸಲರು ಸೋತಿದ್ದೇಕೆ?

ಮುಖ್ಯವಾಗಿ ಮಲೆನಾಡಿನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳು ನಕ್ಸಲಿಸಂನಂತಹ ತೀವ್ರವಾದಿ ಚಳವಳಿಗೆ ಪೂರಕವಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಘಟನೆ ಎಡವಿತ್ತು. ಅದಾದ ಬಳಿಕ ಅಲ್ಲಿನ ದಟ್ಟ ಮಳೆಕಾಡು ಕೂಡ ನಕ್ಸಲರಿಗೆ ಹಲವು ದೈಹಿಕ ಸವಾಲುಗಳನ್ನು ಒಡ್ಡಿತ್ತು. ಈ ನಡುವೆ ತಮ್ಮ ನಾಯಕ ಸಾಕೇತ್ ರಾಜನ್‌ ಅನ್ನು ಕಳೆದುಕೊಂಡು ಸ್ಪಷ್ಟ ದಿಕ್ಕುದೆಸೆಗಳಿಲ್ಲದೆ ಸಂಘಟನೆ ಒಡೆದುಹೋಗಿದ್ದು ಸಂಘಟನೆಗೆ ದೊಡ್ಡ ಪೆಟ್ಟು ನೀಡಿತ್ತು. ಜೊತೆಗೆ ನಕ್ಸಲ್ ನಿಗ್ರಹ ಪಡೆಯ ತೀವ್ರ ಕಾರ್ಯಾಚರಣೆಗಳು ಮಲೆನಾಡಿನಲ್ಲಿ ನಕ್ಸಲರಿಗೆ ನಾಗರಿಕ ಜಗತ್ತಿನ ಸಂಪೂರ್ಣ ಸಂಪರ್ಕ ಕಡಿತ ಮಾಡಿ, ಅವರಿಗೆ ಆಹಾರ, ಶಸ್ತ್ರಾಸ್ತ್ರ ಮತ್ತು ಹಣಕಾಸು ಸರಬರಾಜನ್ನು ಕಡಿತ ಮಾಡಿತ್ತು.

ಆ ಹಿನ್ನೆಲೆಯಲ್ಲಿಯೇ 2012-13ರ ಹೊತ್ತಿಗೆ ಬಹುತೇಕ ನಕ್ಸಲರು ಕಾಡು ತೊರೆದು ನಗರ ಸೇರಿ ಭೂಗತರಾಗಿದ್ದರು. ಅದೇ ಹೊತ್ತಿಗೆ ವಿಕ್ರಂ ಗೌಡನಂತಹ ತೀವ್ರವಾದಿಗಳ ಗುಂಪು ಕೇರಳ- ತಮಿಳುನಾಡು ಭಾಗದಲ್ಲಿ ಮೂರು ರಾಜ್ಯಗಳ ಗಡಿ ಸಂಧಿಸುವ ಕಡೆ ಪ್ರಯಾಣಿಸಿ ಅಲ್ಲಿ ತಲೆಮರೆಸಿಕೊಳ್ಳುವ ಯತ್ನ ಮಾಡಿತ್ತು. ಆದರೆ, ಅಲ್ಲಿಯೂ ಕೇರಳ ಮತ್ತು ತಮಿಳುನಾಡು ಸರ್ಕಾರಗಳ ಪೊಲೀಸ್ ಕಾರ್ಯಾಚರಣೆ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದ ಆರಂಭದಲ್ಲೇ ಎಂಟು ಜನರ ನೇತ್ರಾವತಿ ತಂಡ ಮತ್ತೆ ಮಲೆನಾಡಿಗೆ ವಾಪಸ್ಸಾಗಿತ್ತು.


ನಕ್ಸಲ್ ಮುಕ್ತ ಕರ್ನಾಟಕ ನಿಜವಾಗುವುದೇ?

ಇದೀಗ ನೇತ್ರಾವತಿ ದಳದ ಕಮಾಂಡರ್ ವಿಕ್ರಂ ಗೌಡ ಎನ್ಕೌಂಟರ್ ಬೆನ್ನಲ್ಲೇ ಆತನ ತಂಡದಲ್ಲಿದ್ದ ಇತರೆ ಏಳು ಮಂದಿಯಲ್ಲಿ ಆರು ಮಂದಿ ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಮರಳುತ್ತಿದ್ದಾರೆ. ಕೋಟೆ ಹೊಂಡ ರವಿ ಅಲಿಯಾಸ್ ಹಿತ್ತಲಮನೆ ರವೀಂದ್ರ ಕಾಡಿನಲ್ಲಿಯೇ ತಲೆಮರೆಸಿಕೊಂಡಿರುವ ಶಂಕೆ ಇದೆ.

ಹಾಗಾಗಿ ಈ ಆರು ಮಂದಿ ಶರಣಾದರೂ ತಾಂತ್ರಿಕವಾಗಿ ರಾಜ್ಯ ಸಂಪೂರ್ಣ ನಕ್ಸಲ್‌ಮುಕ್ತ ಎಂದು ಹೇಳಲಾಗದು. ಅಲ್ಲದೆ, ಕೋಟೆಹೊಂಡ ರವಿ ಒಬ್ಬನೇ ತಲೆಮರೆಸಿಕೊಂಡಿರಲು ಹೇಗೆ ಸಾಧ್ಯ? ಆತನೊಂದಿಗೆ ಇನ್ನೂ ಕೆಲವರು ಕಾಡಿನಲ್ಲಿ ಇರಬಹುದಾದ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಕೂಡ ಇದೆ. 

ಜೊತೆಗೆ ನಕ್ಸಲ್‌ ಚಳವಳಿಯಲ್ಲಿ ತೊಡಗಿಸಿಕೊಂಡವರು ಅದರಿಂದ ಹೊರಬಂದಿರಬಹುದು, ಎನ್‌ಕೌಂಟರ್‌ ಆಗಿರಬಹುದು. ಆದರೆ, ಮಲೆನಾಡಿನಲ್ಲಿ ನಕ್ಸಲ್‌ ಚಳವಳಿಯ ಮೂಲಕ ಅವರು ಎತ್ತಿದ್ದ ಪ್ರಶ್ನೆಗಳನ್ನು ಎನ್‌ಕೌಂಟರ್‌ ಮಾಡಲು ಆಗಿಲ್ಲ. ಹೋರಾಟಕ್ಕೆ ಅವರಿಗೆ ಹತಾರಗಳಾಗಿದ್ದ ಮಲೆನಾಡಿನ ಬಿಕ್ಕಟ್ಟುಗಳು ನೀಗಿಲ್ಲ ಎಂಬುದನ್ನೂ ಮಲೆನಾಡಿಗರು ಈಗಲೂ ಒತ್ತಿಹೇಳುತ್ತಿದ್ದಾರೆ.

ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಬೇರೂರಿದ 1990ರ ದಶಕದ ಸಮಸ್ಯೆ ಮತ್ತು ಸವಾಲುಗಳಿಗಿಂತ ಹತ್ತು ಪಟ್ಟು ಹೆಚ್ಚು ಸಮಸ್ಯೆಗಳು ಇಂದು ಮಲೆನಾಡನ್ನು ಕಾಡುತ್ತಿವೆ. ಮುಖ್ಯವಾಗಿ ಅರಣ್ಯ ಭೂಮಿ ಒತ್ತುವರಿ ತೆರವು, ಕಂದಾಯ ಭೂಮಿ ಇಂಡೀಕರಣ, ಶರಾವತಿ ಯೋಜನೆ ಸಂತ್ರಸ್ತರ ಭೂಮಿ ಹಕ್ಕು ಬಿಕ್ಕಟ್ಟು, ಕಸ್ತೂರಿ ರಂಗನ್ ವರದಿ ಜಾರಿಯ ಆತಂಕ, ವನ್ಯಜೀವಿ ಮತ್ತು ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಮಲೆನಾಡಿನ ಕಾಡಂಚಿನ ಜನರ ನಡುವಿನ ಸಂಘರ್ಷಗಳು, ಹೊಸ ಅಭಿವೃದ್ಧಿ ಯೋಜನೆಗಳಿಂದಾಗಿ ಎತ್ತಂಗಡಿ ಮತ್ತು ಭೂಮಿ ಕಳೆದುಕೊಳ್ಳುವ ಆತಂಕ,… ಹೀಗೆ ಹಲವು ಹತ್ತು ಸಮಸ್ಯೆಗಳು ಇಂದು ಮಲೆನಾಡಿನ ಬದುಕನ್ನು ಕಾಡುತ್ತಿವೆ.

ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಮತ್ತೆ ಹೋರಾಟಗಳು ತಲೆ ಎತ್ತುತ್ತಿವೆ. ಸರ್ಕಾರ ನಾಗರಿಕ ಹೋರಾಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಮಲೆನಾಡಿನ ಬಿಕ್ಕಟ್ಟುಗಳಿಗೆ ಕುರುಡಾಗಿದೆ ಎಂಬ ಗಂಭೀರ ಅಸಮಾಧಾನಗಳೂ ಇವೆ. ಅಂದರೆ, ನಕ್ಸಲ್‌ ಚಳವಳಿಗೆ ಮಲೆನಾಡಿನಲ್ಲಿ ನೆಲೆ ಒದಗಿಸಿದ್ದ ಭೂಮಿಯ ಬಿಕ್ಕಟ್ಟು, ಬದುಕಿನ ದಿಕ್ಕೆಟ್ಟ ಸ್ಥಿತಿ ಈಗ ಮೂರು ದಶಕದ ಹಿಂದಿಗಿಂತ ಹೆಚ್ಚು ಜಟಿಲವಾಗಿದೆ. ಅರಣ್ಯ ಕಾಯ್ದೆಗಳು ಮತ್ತು ಸರ್ಕಾರಿ ನೀತಿಗಳ ಕಾರಣದಿಂದ ಆ ಬಿಕ್ಕಟ್ಟುಗಳು ಮಲೆನಾಡಿಗರ ಪಾಲಿಗೆ ಭವಿಷ್ಯ ಭಯಾನಕವಾಗಿದೆ ಎಂಬ ಮುನ್ಸೂಚನೆ ನೀಡುತ್ತಿವೆ.

ಈ ಎಲ್ಲದರ ನಡುವೆಯೂ, ಸದ್ಯಕ್ಕಂತೂ ಸರ್ಕಾರ, ರಾಜ್ಯವನ್ನು ನಕ್ಸಲ್‌ಮುಕ್ತ ಕರ್ನಾಟಕ ಎಂದು ಘೋಷಿಸುವ ಉಮೇದಿನಲ್ಲಿದೆ. ಇದು ಒಂದು ರೀತಿಯಲ್ಲಿ ಜ್ವಲಂತ ಬಿಕ್ಕಟ್ಟುಗಳ ಹೆಗ್ಗಣವನ್ನು ಬಿಲದೊಳಗೇ ಬಿಟ್ಟು ಮೇಲೆ ತೇಪೆ ಹಂಚಿದಂತೆ ತೋರುತ್ತಿದೆ.

Tags:    

Similar News