Caste Census | ಒಕ್ಕಲಿಗ ಸಚಿವ, ಶಾಸಕರ ಸಭೆ ಕರೆದ ಡಿ.ಕೆ. ಶಿವಕುಮಾರ್; ಒಕ್ಕಲಿಗರ ಸಂಘದಿಂದಲೂ ತುರ್ತು ಸಭೆ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್, ಪ್ರತ್ಯೇಕ ಸಭೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಸೆಡ್ಡು ಹೊಡೆದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ. ವರದಿ ಜಾರಿಯಾದರೆ, ಎಲ್ಲಾ ಒಕ್ಕಲಿಗ ಶಾಸಕ, ಸಚಿವರು ರಾಜೀನಾಮೆ ನೀಡಬೇಕೆಂದು ಒಕ್ಕಲಿಗರ ಸಂಘ ಒತ್ತಡ ಹೇರಿದೆ.;
ಜಾತಿ ಗಣತಿ ವರದಿಯನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಿರುವುದು ಮತ್ತು ಬಳಿಕ ಆ ವರದಿಯದ್ದೇ ಎನ್ನಲಾದ ಮಾಹಿತಿ ಸೋರಿಕೆ ಆಗಿರುವ ಹಿನ್ನೆಲೆಯಲ್ಲಿ ಜಾತಿವಾರು ಸಂಖ್ಯೆಯಲ್ಲಿ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಒಕ್ಕಲಿಗ ನಾಯಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ಹಿನ್ನೆಲೆಯಲ್ಲಿ ಒಕ್ಕಲಿಗ ಸಮೂದಾಯದ ನಾಯಕರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಸಚಿವರು ಹಾಗೂ ಶಾಸಕರ ಸಭೆಯನ್ನು ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ ಕರೆದಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್, ಸರ್ಕಾರದ ಎರಡನೇ ಅತ್ಯುನ್ನತ ಸ್ಥಾನದಲ್ಲಿದ್ದರೂ, ಪ್ರತ್ಯೇಕ ಸಭೆ ಕರೆದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಸೆಡ್ಡು ಹೊಡೆದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಜತೆಗೆ, ಜಾತಿ ಗಣತಿ ಜಾರಿ ಆಗಬೇಕೆಂಬ ಒತ್ತಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಬಂದಿದ್ದು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲಿಸುತ್ತಿರುವುದರಿಂದ ಒಂದರ್ಥದಲ್ಲಿ ಹೈಕಮಾಂಡ್ ವಿರುದ್ಧವೇ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿವೆ. ಆದರೆ, ಅವರ ಸಭೆಯಲ್ಲಿ ಯಾವ್ಯಾವ ಒಕ್ಕಲಿಗ ಸಚಿವರು ಹಾಗೂ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಶಾಸಕರ,ಸಚಿವರ ಸಭೆಯನ್ನು ಬೆಂಗಳೂರಿನ ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಏರ್ಪಡಿಸಿರುವ ಡಿ.ಕೆ. ಶಿವಕುಮಾರ್, ಸಭೆಯಲ್ಲಿ ಸಚಿವರು, ಶಾಸಕರ ಅಭಿಪ್ರಾಯ ಆಲಿಸಲಿದ್ದಾರೆ. ಏ. 17ರಂದು ಮುಖ್ಯಮಂತ್ರಿ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತ ವಿಸ್ತ್ರತ ಚರ್ಚೆಯಾಗಲಿದ್ದು, ಮುಖ್ಯಮಂತ್ರಿ ಆದೇಶದಂತೆ ಜಾತಿ ಗಣತಿ ವರದಿಯ ಸಾರಾಂಶದ ಪ್ರತಿ ಎಲ್ಲಾ ಸಚಿವರ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ವರದಿ ಅಂಶಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಒಕ್ಕಲಿಗ ಶಾಸಕರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸಭೆ ಕರೆದಿರುವ ಡಿ.ಕೆ ಶಿವಕುಮಾರ್, ವರದಿ ಬಗ್ಗೆ ಸಾಧಕ, ಬಾಧಕಗಳನ್ನ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಮಹಾಸಭಾದವರು ಮತ್ತು ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಜಾತಿ ಗಣತಿ ವರದಿ ಬಗ್ಗೆ ಟೀಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಡಿ.ಕೆ. ಶಿವಕುಮಾರ್, "ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿರುವುದನ್ನು ನಾವ್ಯಾಕೆ ಟೀಕೆ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರ ಅವರವರ ಸಮುದಾಯದ ನಿಲುವುಗಳನ್ನು ಪ್ರತಿಪಾದನೆ ಮಾಡಲಿ?" ಎಂದು ಹೇಳಿದ್ದರು. ಜತೆಗೆ, ಮುಖ್ಯಮಂತ್ರಿಗಳು ಜಾತಿಗಣತಿ ವರದಿಯ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿಗಳಿಗೂ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಮೂಲಕ ತಾವೂ ವರದಿ ಜಾರಿಗೆ ವಿರೋಧವಿರುವುದನ್ನು ಮತ್ತು ವರದಿ ವಿರುದ್ಧ ಸಮೂದಾಯಗಳು ನಿಲುವು ತೋರಿಸುವುದನ್ನು ಸರಿ ಎಂಬರ್ಥ ಬರುವಂತೆ ಪರೋಕ್ಷವಾಗಿ ಹೇಳಿದ್ದರು.
ನಿರ್ಮಲಾನಂದ ಸ್ವಾಮೀಜಿ ನೇತೃತ್ವ?
ಇದೇ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘವೂ ಮಂಗಳವಾರ ತನ್ನ ಕಚೇರಿಯಲ್ಲಿ ಒಕ್ಕಲಿಗ ಮುಖಂಡರ ಹಾಗೂ ಸಂಘದ ಪದಾಧಿಕಾರಿಗಳ ತುರ್ತು ಸಭೆ ಕರೆದಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು ಸಂಘದ ಪದಾಧಿಕಾರಿಗೆ ಸೂಚನೆ ನೀಡಿದ್ದು, ತುರ್ತು ಸಭೆಯಲ್ಲಿ ಚರ್ಚೆ ನಡೆಸಲಿರುವುದಾಗಿ ಹೇಳಿದ್ದಾರೆ.
ಜತೆಗೆ, ಒಂದು ವೇಳೆ ಸರ್ಕಾರ ಜಾತಿ ಜನಗಣತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದೇ ಆದರೆ, ಒಕ್ಕಲಿಗ ಸಮೂದಾಯದ ಎಲ್ಲಾ ಸಚಿವರು, ಶಾಸಕರು ರಾಜೀನಾಮೆ ನೀಡಬೇಕೆಂಬ ಒತ್ತಾಯ ಮಾಡುವುದಾಗಿ ಒಕ್ಕಲಿಗರ ಸಂಘ ನಿರ್ಧರಿಸಿದೆ. ಜತೆಗೆ, ಒಕ್ಕಲಿಗರ ಸಮೂದಾಯದ ಮಠಗಳು, ಪ್ರಮುಖವಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಮನವಿ ಮಾಡಿ ಒಕ್ಕಲಿಗರಿಗೆ ನ್ಯಾಯ ಒದಗಿಸಲು ಅವರ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದೂ ಮೂಲಗಳು ಹೇಳಿವೆ.
ಚುನಾವಣೆ ಪೂರ್ವದಲ್ಲಿ ಒಕ್ಕಲಿಗ ಸಮುದಾಯದ ಬೆನ್ನಿಗೆ ನಿಲ್ಲುವ ಕುರಿತು ನೀಡಿದ್ದ ಹೇಳಿಕೆ ಬಗ್ಗೆ ಕೇಳಿದಾಗ, "ಅದು ಬೇರೆ ವಿಚಾರ. ಈಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ಎಲ್ಲರಿಗೂ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ, ಧ್ವನಿ, ಧ್ಯೇಯ, ಉದ್ದೇಶ, ಸಂಕಲ್ಪ ಎಲ್ಲವೂ ಸಹ" ಎಂದೂ ಹೇಳಿದ್ದರು.
ಅವಕಾಶ ಬಳಕೆ
ಇತ್ತೀಚೆಗೆ ಹನಿ ಟ್ರ್ಯಾಪ್ ಹಗರಣ, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಚರ್ಚೆ- ಹೀಗೆ ಹಲವು ಬೆಳವಣಿಗೆಗಳ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದಲ್ಲಿ ಒಂದು ರೀತಿಯಲ್ಲಿ ಅಷ್ಟೇನೂ ಕ್ರಿಯಾಶೀಲರಾಗಿರಲಿಲ್ಲ. ಮುಖ್ಯಮಂತ್ರಿ ಆಗುವ ಕನಸು ಕಂಡಿರುವ ಡಿ.ಕೆ. ಶಿವಕುಮಾರ್ ಅವರಿಗೆ ಪಕ್ಷದ ಎಲ್ಲಾ ಒಕ್ಕಲಿಗ ಶಾಸಕರು ಮತ್ತು ಸಚಿವರ ಬೆಂಬಲ ಅಷ್ಟೇನೂ ಇಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜಾತಿಗಣತಿ ವರದಿ ಬಹಿರಂಗ ಹಿನ್ನೆಲೆಯಲ್ಲಿ ತಮ್ಮದೇ ಸಮುದಾಯದ ಶಾಸಕರು, ಸಚಿವರನ್ನು ಕಲೆಹಾಕಿ ನಾಯಕತ್ವ ಪ್ರದರ್ಶಿಸುವುದೂ ಡಿ.ಕೆ. ಶಿವಕುಮಾರ್ ಅವರ ಕಾರ್ಯತಂತ್ರ ಎನ್ನಲಾಗಿದೆ. ಜತೆಗೆ ಸಿದ್ದರಾಮಯ್ಯ ಅವರಿಗೆ ಒಂದು ರೀತಿಯ ʼನಾಯಕತ್ವʼದ ಸಂದೇಶವನ್ನು ಸಾರುವುದೇ ಅಲ್ಲದೆ ಪಕ್ಷದ ಹೈಕಮಾಂಡ್‌ಗೆ ಪರೋಕ್ಷ ಸಂದೇಶವನ್ನು ನೀಡುವುದೂ ಅವರ ಆಶಯವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.