ಧರ್ಮಸ್ಥಳ ಪ್ರಕರಣ | ದಟ್ಟ ಕಾಡಿನಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು
ಶನಿವಾರ ಸುಮಾರು ಏಳು ತಾಸುಗಳ ಕಾಲ ಎಸ್ಐಟಿ ಅಧಿಕಾರಿಗಳು ಸಾಕ್ಷಿದಾರನಿಂದ ವಿವರವಾದ ಹೇಳಿಕೆ ದಾಖಲಿಸಿಕೊಂಡಿದ್ದರು.;
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿ ಸಾಕ್ಷಿದಾರನನ್ನು ಎಸ್‌ಐಟಿ ಅಧಿಕಾರಿಗಳು ಕರೆತಂದು ಸ್ಥಳ ಮಹಜರು ಮಾಡಿದರು
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆಗಳ ಆರೋಪ ಕುರಿತಂತೆ ತನಿಖೆ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಸೋಮವಾರ ಪ್ರಮುಖ ಸಾಕ್ಷಿದಾರನೊಂದಿಗೆ ತೆರಳಿ ʼಸ್ಥಳ ಮಹಜರುʼ ನಡೆಸಿದರು.
ಶನಿವಾರ ಸುಮಾರು ಏಳು ತಾಸುಗಳ ಕಾಲ ಎಸ್ಐಟಿ ಅಧಿಕಾರಿಗಳು ಸಾಕ್ಷಿದಾರನಿಂದ ವಿವರವಾದ ಹೇಳಿಕೆ ದಾಖಲಿಸಿಕೊಂಡಿದ್ದರು. ಭಾನುವಾರ ಎಸ್ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ ತಂಡದ ಸದಸ್ಯರಿಗೆ ತನಿಖೆ ಕುರಿತಂತೆ ಅಗತ್ಯ ಮಾರ್ಗದರ್ಶನ ನೀಡಿದ್ದರು.
ದಟ್ಟಕಾಡಿನಲ್ಲಿ ಮಹಜರು
ಎಸ್ಐಟಿ ಅಧಿಕಾರಿಗಳು ನಿಗೂಢವಾಗಿ ಸಾಕ್ಷಿದಾರನೊಂದಿಗೆ ತೆರಳಿ ಧರ್ಮಸ್ಥಳ ಗ್ರಾಮದ ವಿವಿಧೆಡೆ ಸ್ಥಳ ಮಹಜರು ನಡೆಸಿದರು. ಬೆಳಿಗ್ಗೆ ನೇತ್ರಾವತಿ ಸ್ನಾನಘಟ್ಟ ಬಳಿ ವಾಹನ ನಿಲ್ಲಿಸಿ, ಸಾಕ್ಷಿದಾರನೊಂದಿಗೆ ಅರಣ್ಯ ಪ್ರದೇಶಕ್ಕೆ ತೆರಳಿದರು. ದಟ್ಟ ಕಾಡಿನಲ್ಲಿ ಮೂರು ಕಿ.ಮೀ. ಒಳಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಧ್ಯಾಹ್ನ 12ರಿಂದ ಸ್ಥಳ ಮಹಜರು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಖಕ್ಕೆ ಮುಸುಕು ಹಾಕಿದ್ದ ಸಾಕ್ಷಿದಾರನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಎಸ್‌ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನ ಘಟ್ಟದ ಬಳಿಗೆ ಕರೆತಂದರು. ಪಕ್ಕದಲ್ಲೇ ಇರುವ ಕಾಡಿನೊಳಗೆ ಎಸ್‌ಐಟಿ ಅಧಿಕಾರಿಗಳನ್ನು ಸಾಕ್ಷಿದಾರ ಕರೆದೊಯ್ದು. ಎಸ್‌ಐಟಿ ಅಧಿಕಾರಿಗಳ ಜತೆ ಮೂವರು ವಕೀಲರೂ ಸ್ಥಳಕ್ಕೆ ತೆರಳಿದರು.
ಸ್ಥಳ ಮಹಜರು ಹಿನ್ನೆಲೆಯಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ನೆರೆದಿದ್ದು, ಆತಂಕದಿಂದ ನೋಡುತ್ತಿದ್ದಾರೆ.
ಧರ್ಮಸ್ಥಳದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನೂರಾರು ಶವ ಹೂತಿಟ್ಟಿರುವ ಕುರಿತು ಧರ್ಮಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿರುವ ವ್ಯಕ್ತಿಯ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿತ್ತು.