ಧರ್ಮಸ್ಥಳ ಪ್ರಕರಣ, ಕೆಲವರಿಂದ ಧಾರ್ಮಿಕ ನಂಬಿಕೆಗೆ ಚ್ಯುತಿ: ಕೇಂದ್ರ ಸಚಿವ ವಿ.ಸೋಮಣ್ಣ
ನಾಡಿನ ಇತಿಹಾಸ ಗೊತ್ತಿಲ್ಲದವರು ಮಾತನಾಡಿದರೆ ಸಹಿಸಿಕೊಳ್ಳಬಹುದು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.;
ಕೇಂದ್ರ ಸಚಿವ ವಿ. ಸೋಮಣ್ಣ
ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕೆಲವರು ನಮ್ಮ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ತಾವೇ ತೋಡಿದ ಗುಂಡಿಗೆ ಬೀಳುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಸಣ್ಣ ಅಪಚಾರ ನಡೆದರೂ ಕೆಲಸ ಮಾಡಬೇಕಿರುವುದು ನಮ್ಮಕರ್ತವ್ಯ, ಕಾಂಗ್ರೆಸ್‌ನವರು ಸಾವಿರ ಭಾರಿ ಸುಳ್ಳು ಹೇಳಿದ್ದರು. ಇದೀಗ ಅವರಿಗೆ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿಯೇ ಏನೇನೋ ಹೇಳುತ್ತಿದ್ದಾರೆ ಎಂದರು.
ನಾಡಿನ ಇತಿಹಾಸ ಗೊತ್ತಿಲ್ಲದವರು ಮಾತನಾಡಿದರೆ ಸಹಿಸಿಕೊಳ್ಳಬಹುದು. ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡಿರುವುದು ಅಕ್ಷಮ್ಯ ಅಪರಾಧ, ತಾಯಿ ಚಾಮುಂಡಿ ಎಲ್ಲರಿಗೂ ದೇವಿ. ಚರ್ಚ್, ಮಸೀದಿಗೆ ಹೋಗಿ ನಮ್ಮದು ಅಂದರೆ ಯಾರಾದರು ಒಪ್ಪಿಕೊಳ್ಳುತ್ತಾರಾ ? ರಾಜ್ಯ ಸರ್ಕಾರದಲ್ಲಿ ಆರು ತಿಂಗಳೊಳಗೆ ಕ್ರಾಂತಿ ಉಂಟಾಗಲಿದೆ. ಡಿಕೆಶಿ ಮತ್ತೊಬ್ಬ ಸಿದ್ದರಾಮಯ್ಯ ಆಗಬಾರದು. ಚಾಮುಂಡಿ ಬೆಟ್ಟದ ಬಗ್ಗೆ ಅನಗತ್ಯ ಹೇಳಿಕೆ ನೀಡಬಾರದಿತ್ತು. ಬೇರೆಯವರ ಓಲೈಕೆಗಾಗಿ ಹೇಳಿಕೆ ನೀಡುವಾಗ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಬಾರದು ಎಂದರು.
ಆರ್‌ಎಸ್ಎಸ್ ಬಗ್ಗೆ ಮಾತನಾಡಿದಾಗ ಒಳ್ಳೆಯ ಅಭಿಪ್ರಾಯವಿದೆ ಎಂದುಕೊಂಡಿದ್ದೆವು. ಡಿಕೆಶಿ ಹೇಳಿಕೆಗೆ ರಾಣಿ ಪ್ರಮೋದದೇವಿಯವರು ಪ್ರತಿಕ್ರಿಯೆ ನೀಡಿರುವುದು ಸರಿಯಿದೆ. ನಾವು ಮಸೀದಿಗೆ ಹೋಗಿ ನಮ್ಮದು ಎನ್ನಲು ಸಾಧ್ಯವೆ? ನಾನು ಡಿಕೆಶಿ ಕುಟುಂಬವನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಭಕ್ತಿಯಿಂದ ಪೂಜೆ ಮಾಡ್ತಾರೆ. ಅವರು ತಮ್ಮ ಹೇಳಿಕೆಯನ್ನ ವಾಪಸ್ ಪಡೆಯುವುದು ಒಳ್ಳೆಯದು. ಕಾಂಗ್ರೆಸ್ ನಾಯಕರು ಇದೇ ರೀತಿ ಹೇಳಿಕೆ ನೀಡುತ್ತಿದ್ದರೆ ನಾಮಾವಶೇಷವಾಗುತ್ತಾರೆ ಎಂದು ತಿಳಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು, ರಾಜಕೀಯ ನಿವೃತ್ತಿ ತೆಗೆದುಕೊಳ್ಳತ್ತೆನೆ ಎಂದು ಹೇಳಿಲ್ಲ. ನಾನು ಆಕಸ್ಮಿಕವಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸೇವೆ ಮಾಡುತ್ತಿದ್ದೇನೆ ಎಂದರು.